ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ನಾಗನಕಟ್ಟೆ ವಿಚಾರ

0

ಪ್ರತಿಭಟನೆ ನಡೆಸುವವರು ಭಕ್ತರನ್ನು ದಾರಿ ತಪ್ಪಿಸುತ್ತಿದ್ದಾರೆ -ಲೋಕಪ್ಪ ಗೌಡ

ಪುತ್ತೂರು: ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನ ನರಿಮೊಗರು ಇಲ್ಲಿನ ನಾಗನಕಟ್ಟೆ ವಿಚಾರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿಕೊಂಡು ಪ್ರತಿಭಟನೆ ನಡೆಸಿ ಭಕ್ತರನ್ನು ದಾರಿ ತಪ್ಪಿಸುವ ಕಾರ್ಯ ನಡೆದಿದೆ. ಅಂತಹ ಸುಳ್ಳು ಸುದ್ದಿಗಳನ್ನು ನಂಬದೆ ಜನರು ನೈಜ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಲೋಕಪ್ಪ ಗೌಡ ಪ್ರತಿಕ್ರಿಯಿಸಿದ್ದಾರೆ.


ಕಳೆದ ವರ್ಷ ಮೇ 30 ರಂದು ಇದೇ ಜನರೆಲ್ಲರೂ ಸೇರಿ ಜೂನ್ 7 ಮತ್ತು 8 ರಂದು ನಾಗನ ಕಟ್ಟೆಯ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯದಂತೆ ಪ್ರತಿಭಟನೆ ಹಾಗೂ ಅಕ್ರಮವಾಗಿ ದೇವಳದ ಸಭಾಂಗಣದಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಿ ಪ್ರತಿಷ್ಠಾ ಕಾರ್ಯಕ್ರಮವನ್ನು ಮುಂದೂಡಲು ಕಾರಣಕರ್ತರಾಗಿದ್ದರು. ಅವರ ಬೇಡಿಕೆಯಂತೆ ದೇವಳದ ತಂತ್ರಿಗಳು ದೈವಜ್ಞರು, ವಾಸ್ತು ಶಿಲ್ಪಿಯವರು ಮತ್ತು ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಗೊಂದಲ ನಿವಾರಣಾ ಸಭೆಯನ್ನು ನಡೆಸಿದ್ದೆವು. ಅದರಲ್ಲಿ ಭಾಗವಹಿಸಿದ ಇವರು, ನಾಗನ ಕಟ್ಟೆಯ ರಚನೆ ದೋಷಪೂರಿತವಾಗಿದೆಯೇ, ದೇವರಿಗೆ ಹಿತವಾಗಿದೆಯೇ ಎಂದು ನೋಡಲು ಆಸ್ಪದ ಕೊಡದೆ ಗೊಂದಲ ನಿವಾರಣಾ ಸಭೆಯು ಗೊಂದಲದಲ್ಲಿ ಮುಗಿಯುವಂತೆ ಮಾಡಿದರು. ಶ್ರೀ ಕ್ಷೇತ್ರದ ತಂತ್ರಿಗಳು ದೈವಜ್ಞರು ಮತ್ತು ವಾಸ್ತು ತಜ್ಞರ ಸಲಹೆಗಳನ್ನು ಪಡೆದು ಪ್ರಸ್ತುತ ನಾಗನಕಟ್ಟೆಯನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಶ್ರೀಮತಿ ನಳಿನಿ ಲೋಕಪ್ಪ ಗೌಡರ ಧನ ಸಹಾಯದೊಂದಿಗೆ ಮತ್ತು ನಾಗನ ಕಟ್ಟೆಯ ಅಡಿ ಸ್ಥಳದ ವರ್ಗಜಾಗದ ಮಾಲೀಕರಾದ ಶ್ರೀಮತಿ ವಾರಿಜ ಮತ್ತು ಕುಟುಂಬದವರಿಂದ ದಾನವಾಗಿ ಬಂದ (ವರ್ಗಾವಣೆ ಹಂತ ದಲ್ಲಿರುವ)ಜಾಗದಲ್ಲಿ ನಿರ್ಮಿಸುತ್ತಿರುವ ಈ ನಾಗನಕಟ್ಟೆಯ ಕೆಲಸ ನಡೆಯುತ್ತಿದೆ ಮತ್ತು ತಂತ್ರಿಗಳು ಒಪ್ಪಿಕೊಂಡು ಇದೇ ಮಾರ್ಚ್ 5, 7 ಮತ್ತು 8ರಂದು ಅವರ ನೇತೃತ್ವದಲ್ಲಿ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ ಈ ವಿಚಾರವನ್ನು ಭಕ್ತ ಜನರಿಗೆ ದೇವಸ್ಥಾನದ ವಾಟ್ಸಾಪ್ ಗ್ರೂಪ್ ಮುಖಾಂತರ ತಿಳಿಸಲಾಗಿದೆ.


ನಾಗನಕಟ್ಟೆಯನ್ನು ಹೊಸದಾಗಿ ನಿರ್ಮಿಸಲು ಹಿಂದೆ ಕಟ್ಟಿದ ಕಟ್ಟೆಯನ್ನು ಬಿಚ್ಚುವ ದಿನ ಭಕ್ತಾದಿಗಳು ಶ್ರಮ ದಾನಿಗಳಾಗಿ ಭಾಗವಹಿಸಬೇಕೆಂದು, ಕಟ್ಟೆಯನ್ನು ಅಡಿ ತನಕ ಪೂರ್ತಿ ಕ್ಲೀನ್ ಮಾಡಿ ಅದರಡಿಯಲ್ಲಿರುವ ಮರದ ಕುತ್ತಿಯನ್ನು ಮತ್ತು ಅದರ ಪೊಟೋ ತೆಗೆದು ದೇವಳದ ವಾಟ್ಸಪ್ ಗ್ರೂಪ್ ನಲ್ಲಿ ತಾರೀಕು 12-2-2023ರಂದು ಹಾಕಿ ತಾರೀಕು 14-2-2023 ರಿಂದ ಮುಂದಿನ ಕೆಲಸ ಕಾರ್ಯಗಳನ್ನು ಶುರು ಮಾಡುತ್ತೇವೆಂದೂ ಅದರಲ್ಲಿ ಭಕ್ತ ಜನರು ಭಾಗಿಯಾಗಿ ಎಂದರೂ ಕೇವಲ ಕೆಲವು ಮಂದಿ ಭಾಗಿಯಾಗಿ ಈ ಪ್ರತಿಭಟನೆಯಲ್ಲಿ ಭಾಗಿಯಾದವರು ಯಾರೂ ಭಾಗವಹಿಸದೆ ಈ ರೀತಿಯಾಗಿ ತೊಂದರೆ ಕೊಡುತ್ತಿರುವುದು ಅಕ್ಷಮ್ಯ ಮತ್ತು ದುರುದ್ದೇಶಪೂರಿತವಾಗಿದೆ ಎಂದು ಲೋಕಪ್ಪ ಗೌಡ ಹೇಳಿದ್ದಾರೆ.


ಕ್ಷೇತ್ರದ ತಂತ್ರಿಗಳು ದೈವಜ್ಞರು ಮತ್ತು ವಾಸ್ತುಶಿಲ್ಪಿಯ ಮಾರ್ಗದರ್ಶನದಲ್ಲಿ ಈ ನೂತನ ಕಟ್ಟೆಯು ರಚನೆ ಆಗುತ್ತಿದ್ದರೂ ಅಷ್ಟಮಂಗಲ ತಂತ್ರಿ ದೈವಜ್ಞರ ಸೂಚನೆಯಂತೆ ನಾಗನ ಕಟ್ಟೆ ನಿರ್ಮಾಣವಾಗಬೇಕು ಎನ್ನುವುದು ಭಕ್ತ ಜನರನ್ನು ತಪ್ಪುದಾರಿಗೆ ಎಳೆದು ಪ್ರತಿಭಟನೆಯಲ್ಲಿ ಭಾಗಿಯಾಗಿ ಹೇಳಿಕೆ ನೀಡಿರುವ ಎಲ್ಲಾ ವಿಚಾರಗಳು ಸತ್ಯಕ್ಕೆ ದೂರವಾದುದು.
30-5-2022ರಂದು ಇದೇ ವಿಚಾರವಾಗಿ ನಡೆದ ಪ್ರತಿಭಟನೆಯಲ್ಲಿ ಇದೇ ಅಪವಾದಗಳನ್ನು ಹೊರಿಸಿದ್ದರು ಮತ್ತು ಅದಕ್ಕೆ ಮಾಧ್ಯಮದ ಮೂಲಕ ಉತ್ತರ ಕೊಟ್ಟಿರುತ್ತೇನೆ. ತಾರೀಕು 20-2-2023ರಂದು ಪ್ರೆಸ್ ಕ್ಲಬ್ ನಲ್ಲಿ ಪ್ರೆಸ್ ಮೀಟ್ ನಡೆಸಿ, ಈ ಎಲ್ಲಾ ಆರೋಪಗಳನ್ನು ಹೊರಿಸುವ ಮೊದಲೇ ಎಲ್ಲಾ ಆರೋಪಗಳಿಗೆ ಸುಮಾರು 22 ದಾಖಲೆ ಸಮೇತ ಹೇಳಿಕೆ ಕೊಟ್ಟಿರುತ್ತೇನೆ. ಭಕ್ತ ಜನರು ಈ ಸುಳ್ಳು ಆರೋಪಗಳಿಗೆ ಕಿವಿಗೊಡದೆ ಮಾರ್ಚ್ 7 ಮತ್ತು 8 ರಂದು ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಕುಟುಂಬ ಸಮೇತ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇನೆ ಎಂದು ಲೋಕಪ್ಪ ಗೌಡರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here