ಮಣಿಕ್ಕಳ ಮೂವರು ದೈವಗಳ ನೂತನ `ಮಾಡ’ದ ಪ್ರತಿಷ್ಠಾ ಬ್ರಹ್ಮಕಲಶ

0

ನೆಲ್ಯಾಡಿ: ಬಜತ್ತೂರು ಗ್ರಾಮದ ಮಣಿಕ್ಕಳ ಮೂವರು ದೈವಗಳ ನೂತನ ಮಾಡದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ.24ರಂದು ನಡೆಯಿತು.


ನೇರೆಂಕಿ ಅರಸರ ಅಧೀನದಲ್ಲಿದ್ದ ಬಜತ್ತೂರು ಗ್ರಾಮದ ಮಣಿಕ್ಕಳದ ಮೂವರು ದೈವ ಕ್ಷೇತ್ರದಲ್ಲಿರುವ ಪಾಂಡ್ಯತ್ತಾಯ, ಪಂಬೆತ್ತಾಯ ಹಾಗೂ ಸ್ಥಾನಬ್ರಹ್ಮೆರ್ ಎಂಬ ಕಾರಣಿಕ ದೈವಗಳಿಗೆ ನೂತನ ಶಿಲಾಮಯ ಮಾಡ ಕೇವಲ 2 ತಿಂಗಳೊಳಗೆ ನಿರ್ಮಾಣಗೊಂಡಿದ್ದು, ನೀಲೇಶ್ವರದ ವೇದಮೂರ್ತಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ನಡ್ಪ ಶ್ರೀ ವಿಷ್ಣುಮೂರ್ತಿ ದೇವಳದ ಪ್ರಧಾನ ಅರ್ಚಕರಾದ ನಾರಾಯಣ ಬಡೆಕಿಲ್ಲಾಯ ಅವರ ನೇತೃತ್ವದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಿತು.


ಫೆ.24 ರಂದು ಬೆಳಿಗ್ಗೆ ಗಂಟೆ 7 ರಿಂದ ಗಣಪತಿ ಹೋಮ, ಪ್ರತಿಷ್ಠಾಹೋಮ, ಕಲಶಾರಾಧನೆ ಹಾಗೂ ನಾಗತಂಬಿಲಗಳು ನಡೆಯಿತು. ನಂತರ ಉದ್ಭವತಾಣವಾದ ಮರೋಜಿಕಾನದ ಬನ'ದಲ್ಲಿಯೂ ದೈವಗಳ ಪ್ರತಿಷ್ಠಾ ಕಾರ್ಯ ಹಾಗೂ ತಂಬಿಲ ಸೇವೆ ನಡೆಸಲಾಯಿತು. ಸ್ಥಾನಚಾವಡಿಯಲ್ಲಿ ತಂಬಿಲ, ಪವಮಾನ ಹೋಮ ನಡೆದು ಗಂಟೆ 11.24ಕ್ಕೆ ದೈವತಾ ಪ್ರತಿಷ್ಠೆ, ಕಲಶಾಭಿಷೇಕ ನಡೆಸಲಾಯಿತು. ಆಶ್ಲೇಷಾಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಆನಂತರ ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನಸಂತರ್ಪಣೆ ನಡೆಯಿತು.

ಸಂಜೀವ ಮಠಂದೂರು ಭೇಟಿ:

ನೂತನ ಮಾಡದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಫೆ.೨೩ರಂದು ರಾತ್ರಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಸಂಪೂರ್ಣ ಶಿಲಾಮಯವಾಗಿರುವ ಮಾಡದ ನಿರ್ಮಾಣವನ್ನು ವೀಕ್ಷಿಸಿದ ಅವರು ಊರಿನ ಜನತೆಯ ಸಹಕಾರದಿಂದ ಮಾತ್ರ ಅತ್ಯಲ್ಪ ವೇಳೆಯಲ್ಲಿ ಇಂತಹದ್ದೊಂದು ದೈವದ ಮಾಡ ನಿರ್ಮಿಸಲು ಸಾಧ್ಯ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮೂವರು ದೈವಗಳ ಸಮಿತಿ ಪರವಾಗಿ ಅರ್ಚಕ ನಾರಾಯಣ ಬಡೆಕಿಲ್ಲಾಯ ಅವರು ಶಾಸಕರಿಗೆ ಶಾಲುಹೊದಿಸಿ ಗೌರವಿಸಿದರು. ಕಾಂಚನ ತಲೆಮನೆಯ ರೋಹಿಣಿ ಸುಬ್ಬರತ್ನಂ, ಮಣಿಕ್ಕಳ ಸಮಸ್ತ ದೈವಗಳ ಸೇವಾ ಸಮಿತಿಯ ಜಗದೀಶರಾವ್ ಮಿನ್ನಾವು, ರಘುವೀರರಾವ್ ಮಣಿಕ್ಕಳ, ಮುರಳೀಧರ ರಾವ್ ಮಣಿಕ್ಕಳ, ಹೊನ್ನಪ್ಪ ಗೌಡ ಕುದುರು, ರಾಮಣ್ಣ ಗೌಡ ಮೇಲಿನ ಮನೆ, ದೇರಣ್ಣ ಗೌಡ ಓಮಂದೂರು, ಲಿಂಗಪ್ಪ ಗೌಡ ಆರಕರೆ, ಸುಧಾಕರ ನಾತೊಟ್ಟು, ರಮೇಶ್ ಬರೆಮೇಲು, ಯೋಗೀಶ್ ಗೌಡ ಹೊಸಮನೆ, ಅಕ್ಷಯ್ ನಾಗೋಜಿ, ಚೇತನ್ ಕುದುರು, ಲೋಕೇಶ್ ಗೌಡ ಓಲೆಬಳ್ಳಿ, ಮಾಜಿ ಯೋಧ ವಿಶ್ವನಾಥ ಗೌಡ ಮಾಯಿತಾಲ್, ವಿಠಲ ಗೌಡ ನಾಗೋಜಿ, ಮೋನಪ್ಪ ಗೌಡ ನಾಗೋಜಿ, ಸದಾಶಿವ ಗೌಡ ನಾಗೋಜಿ, ಉಮೇಶ್ ಮಾಯಿತಾಲು, ಧನಂಜಯ ಗೌಡ ಪಾಲೆತ್ತಾಡಿ, ಉಮೇಶ್ ಓಮಂದೂರು, ದಿನೇಶ್ ಓಮಂದೂರು, ಲೋಕೇಶ್ ಪಾಲೆತ್ತಾಡಿ, ಯಶೋಧರ ಗೌಡ ಬೈರುಮಾರು, ಧನಂಜಯ ಗೌಡ ಗುತ್ತಿಮಾರು, ರಿತ್ವಿಕ್ ನಾಗೋಜಿ, ಶೀತಲ್ ನಾಗೋಜಿ, ರಂಜಿತ್ ನಾಗೋಜಿ, ವೀರಪ್ಪ ಗೌಡ ಓಮಂದೂರು, ಬಾಬು ಗೌಡ ಓಮಂದೂರು ಮತ್ತಿತರ ಪ್ರಮುಖರು ಭಾಗವಹಿಸಿದ್ದರು

ಮಣಿಕ್ಕಳ ಬೆಡಿ’:
ನೂತನ ಮಾಡದ ಪ್ರತಿಷ್ಠಾ ಬ್ರಹ್ಮಕಲಶೋತ್ಸದ ಅಂಗವಾಗಿ ಮಣಿಕ್ಕಳದ ಯಂಗ್ ಫ್ರೆಂಡ್ಸ್ ಸರ್ಕಲ್ (ವೈಎಫ್‌ಸಿ) ತಂಡದಿಂದ ಆಯೋಜಿಸಿದ `ಮಣಿಕ್ಕಳ ಬೆಡಿ’ ನೆರೆದಿದ್ದ ಸಾವಿರಾರು ಗ್ರಾಮೀಣ ಮಂದಿಯ ಕಣ್ಣುಗಳಿಗೆ ರಸದೌತಣ ನೀಡಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ಬಾನಂಗಳದಲ್ಲಿ ರಂಗುರಂಗಿನ ಚಿತ್ತಾರ ಬಿಡಿಸಿದ ಸುಡುಮದ್ದು ಪ್ರದರ್ಶನದ ಆಯೋಜನೆ ಮಣಿಕ್ಕಳದಲ್ಲಿ ಮೊತ್ತ ಮೊದಲಿಗೆ ನಡೆದಿದ್ದು, ಎಲ್ಲರ ಮನಸ್ಸನ್ನೂ ಸೂರೆಗೊಂಡಿತು.


ಫೆ.28; ಮೂವರು ದೈವಗಳ ನೇಮೋತ್ಸವ:

ನೂತನ ಮಾಡ ನಿರ್ಮಾಣದೊಂದಿಗೆ ಫೆ.28ರಂದು ಮೂವರು ದೈವಗಳ ಹಾಗೂ ಇತರ 22 ದೈವಗಳಿಗೆ ವಾರ್ಷಿಕ ನೇಮೋತ್ಸವ ನಡೆಯಲಿದೆ. ಕಂರ್ಬಿತ್ತಿಲು ಬದಿಮಾಡ ಎಂಬಲ್ಲಿ ಈ ನೇಮೋತ್ಸವ ನಡೆಯಲಿದೆ. ಮಣಿಕ್ಕಳ ಸಮಸ್ತ ದೈವಗಳ ಸೇವಾ ಸಮಿತಿ ವತಿಯಿಂದ ಪ್ರತೀ ವರ್ಷ ಫೆ.28 ರಂದು ನೇಮೋತ್ಸವ ನಡೆಯುತ್ತದೆ.

LEAVE A REPLY

Please enter your comment!
Please enter your name here