ಪುತ್ತೂರು:ಸಾರ್ವಜನಿಕ ಶಾಂತಿ ಭಂಗ ಮತ್ತು ಪ್ರಚೋದನೆ ನೀಡುವ ಉದ್ದೇಶ ಹೊಂದಿರುವವರ ವಿರುದ್ಧ ಮುಂಜಾಗ್ರತೆ ಕ್ರಮವಾಗಿ ಕಾನೂನು ಕ್ರಮಕೈಗೊಳ್ಳುವ ಕುರಿತು ಪೊಲೀಸರು ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳಾಗಿರುವ ತಹಶೀಲ್ದಾರ್‌ಗೆ ಮಾಡಿರುವ ಕೋರಿಕೆಯಂತೆ ಅವರು ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ 60ಕ್ಕೂ ಅಧಿಕ ಮಂದಿಗೆ ಮುಚ್ಚಳಿಕೆ ನೋಟೀಸ್ ಜಾರಿ ಮಾಡಿದ್ದಾರೆ.
ಮುಂದೆ ಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ, ರೌಡಿಶೀಟರ್ ಮತ್ತು ಅತಿ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದವರಿಂದ ಮುಂದಿನ ದಿನ ಸಾರ್ವಜನಿಕ ಶಾಂತಿ ಭಂಗ, ಪ್ರಚೋದನೆ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಿಂದ ಸುಮಾರು 60 ಮಂದಿಯ ವಿರುದ್ಧ ಸಿಆರ್‌ಪಿಸಿ ಕಲಂ 107, 108, 109, 110ರಡಿ ಪ್ರಕರಣ ದಾಖಲಿಸುವಂತೆ ತಹಸೀಲ್ದಾರ್ ಅವರಿಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ರೂ.1 ಲಕ್ಷದ ಜಾಮೀನು ಸಹಿತ ಮುಚ್ಚಳಿಕೆ ಬರೆದುಕೊಡುವಂತೆ ತಹಸಿಲ್ದಾರ್ ನೋಟೀಸ್ ಜಾರಿ ಮಾಡಿದ್ದಾರೆ. ನೋಟೀಸ್ ಜಾರಿ ಮಾಡಿಯೂ ಹಾಜರಾಗಿ ಮುಚ್ಚಳಿಕೆ ಬರೆದುಕೊಡದೇ ಇರುವವರನ್ನು ಬಂಧಿಸಿ ಹಾಜರುಪಡಿಸುವಂತೆ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳೂ ಆಗಿರುವ ತಹಶೀಲ್ದಾರ್ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಹಿಂದು ಸಂಘಟನೆಯವರ ಆಕ್ರೋಶ: ಹಿಂದು ಸಂಘಟನೆಯ ಹಲವು ಮುಖಂಡರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಲಾಗಿದೆ.ಸಮಾಜದ ಶಾಂತಿ ಕದಡುವ ಕಾರ್ಯಗಳನ್ನು ಮಾಡುವವರನ್ನು ಬಂಧಿಸದೆ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಹಿಂದು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ. ವಾರಂಟ್ ಜಾರಿ ಮಾಡಿ ಕಾರ್ಯಕರ್ತರ ಮನೆಗೆ ತೆರಳಿ ಮಾನಸಿಕ ಕಿರುಕುಳ ನೀಡಿದರೆ ಮುಂದಿನ ದಿನ ಹಿಂದು ಜಾಗರಣ ವೇದಿಕೆ ಹೋರಾಟದ ಮೂಲಕ ಉತ್ತರ ನೀಡಲಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಗರ ಮಂಡಲದ ಅಧ್ಯಕ್ಷರಿಂದ ಡಿವೈಎಸ್ಪಿ ಭೇಟಿ: ಹಿಂದು ಸಂಘಟನೆಯ ಮುಖಂಡರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡುತ್ತಿದ್ದಾರೆಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಡಿವೈಎಸ್ಪಿ ವೀರಯ್ಯ ಹಿರೇಮಠ್ ಅವರನ್ನು ಭೇಟಿ ಮಾಡಿ ಈ ಕುರಿತು ವಿಚಾರಿಸಿದ್ದಾರೆ. ಕೇವಲ ಹಿಂದು ಸಂಘಟನೆ ಮಾತ್ರವಲ್ಲ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇತರ ಸಂಘಟನೆಗಳವರ ವಿರುದ್ಧವೂ ಸಾರ್ವಜನಿಕ ಶಾಂತಿ ಭಂಗ ಪ್ರಕರಣದ ದಾಖಲು ಮಾಡಲಾಗಿದೆ ಎಂದು ಡಿವೈಎಸ್ಪಿಯವರು ತಿಳಿಸಿರುವುದಾಗಿ ಪಿ.ಜಿ.ಜಗನ್ನಿವಾಸ ರಾವ್ ಹೇಳಿದ್ದಾರೆ.