ಕೌಡಿಚ್ಚಾರಿನಲ್ಲಿ ಕಾಂಗ್ರೆಸ್ ಉತ್ಸವ-2023
ಬಿಜೆಪಿ ಅಧಿಕಾರ ಪಡೆಯಲು ಅಮಾಯಕ ಯುವಕರನ್ನು ಬಳಸುತ್ತಾರೆ ಬಳಿಕ ಎಸೆಯುತ್ತಾರೆ: ಎಂ ಜಿ ಹೆಗಡೆ

0

ಪುತ್ತೂರು: ಚುನಾವಣೆಯ ಸಂದರ್ಭ ಸೇರಿದಂತೆ ತನಗೆ ಎಲ್ಲೆಲ್ಲಾ ಲಾಭವಾಗುತ್ತದೋ ಅಲ್ಲೆಲ್ಲಾ ಅಮಾಯಕ ಯುವಕರನ್ನು ಬಿಜೆಪಿ ಬಳಸಿ ಅಧಿಕಾರ ಪಡೆದುಕೊಳ್ಳುತ್ತದೆ. ಅಧಿಕಾರದ ಕುರ್ಚಿಗೇರಿದ ಬಳಿಕ ಅದೇ ಯುವಕರನ್ನು ನಿಧಾನಕ್ಕೆ ಮೂಲೆಗುಂಪು ಮಾಡುತ್ತಾರೆ. ಇದು ಬಿಜೆಪಿಯಲ್ಲಿ ಅಂದಿನಿಂದ ಇಂದಿನ ತನಕ ನಡೆಯುತ್ತಿರುವ ಬೆಳವಣಿಗೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಎಂ ಜಿ ಹೆಗಡೆ ಆರೋಪಿಸಿದರು.

ಅವರು ಮಾ. 1 ರಂದು ಅರಿಯಡ್ಕ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಕೌಡಿಚ್ಚಾರ್ ಎಂ ಎಸ್ ಬಿಲ್ಡಿಂಗ್ ಮುಂಭಾಗದಲ್ಲಿ ನಡೆದ ಕಾಂಗ್ರೆಸ್ ಉತ್ಸವ 2023 ರ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.

ಚುನಾವಣೆ ಬಂದಾಗ ಯುವಕರನ್ನು ಗಲಭೆ ಸೃಷ್ಟಿಸಲು ಬಳಸುತ್ತಾರೆ, ಉಗ್ರವಾದ ಭಾಷಣ ಮಾಡಿಸುತ್ತಾರೆ, ಅವರಿವರ ಮೇಲೆ ಹಸಿ ಸುಳ್ಳುಗಳನ್ನು ಸೃಷ್ಟಿಸಿ ಒಂದಷ್ಟು ಯುವಕರ ಮೇಲೆ ಕೇಸು ಜಡಿಯುವಂತೆ ಮಾಡಿ ಬಿಜೆಪಿ ನಾಯಕರು ಅದಿಕಾರ ಪಡೆಯುತ್ತಾರೆ. ಇದು ಬಿಜೆಪಿಯವರ ನೀಚ ಬುದ್ಧಿ. ಪುತ್ತೂರು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಇವರು ಇದನ್ನೇ ಮಾಡಿಕೊಂಡು ಬರುತ್ತಿದ್ದು ಇದರ ಬಗ್ಗೆ ಬಿಜೆಪಿಯಲ್ಲಿರುವ ಯುವಕರು ಚಿಂತನೆ ಮಾಡಬೇಕು ಎಂದು ಹೇಳಿದರು. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಹಸಿ ಸುಳ್ಳನ್ನು ಬಿತ್ತರಿಸುತ್ತಾರೆ. ಬಿಜೆಪಿಗೆ ಅಭಿವೃದ್ದಿ ವಿಚಾರ ಬೇಕಿಲ್ಲ, ಸಮಾಜವನ್ನು ಒಡೆಯುವುದೇ ಇವರ ಮುಖ್ಯ ಅಜೆಂಡಾವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರ ತುಷ್ಟೀಕರಣ ಮಾಡುತ್ತಾರೆ ಎಂದು ಬಿಜೆಪಿ ಹೇಳುತ್ತಿದೆ.

ಸಿದ್ದರಾಮಯ್ಯರವರ ಉಚಿತ ಅಕ್ಕಿಯನ್ನು ಬಿಜೆಪಿಯವರು ಅನ್ನ ಮಾಡಿಲ್ಲವೇ, ಕಾಂಗ್ರೆಸ್‌ನವರು ಕಟ್ಟಿದ ಅಣೆಕಟ್ಟಿನಿಂದ ಬಿಜೆಪಿ ಹಿಂದುಗಳು ನೀರು ಕುಡಿದಿಲ್ಲವೇ ಎಂದು ಪ್ರಶ್ನಿಸಿದರು. ದೇಶದಲ್ಲಿ ಧಾರ್ಮಿಕ ದತ್ತಿ ಇಲಾಖೆಯನ್ನು ಸ್ಥಾಪಿಸಿ ದೇವಸ್ಥಾನವನ್ನು ಉಳಿಸುವ ಕೆಲಸ ಮಾಡಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಇಲಾಖೆಯನ್ನೇ ನಾಶ ಮಾಡಿದೆ. ಬಜರಂಗದಳದಲ್ಲಿ ಗುರುತಿಸಿಕೊಂಡವರಿಗೆ ಬಿಜೆಪಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಲಿ ಎಂದು ಸವಾಲು ಹಾಕಿದ ಹೆಗಡೆ, ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡವರಿಗೆ ಟಿಕೆಟ್ ಕೊಟ್ಟಲ್ಲಿ ತಾನು ಬಿಜೆಪಿ ಸೇರುವುದಾಗಿ ಸವಾಲು ಹಾಕಿದರು. ದೂರದೃಷ್ಟಿ ಆಲೋಚನೆಯಿಲ್ಲದ ಬಿಜೆಪಿ ನಾಯಕರು ಹಸಿ ಸುಳ್ಳನ್ನು ಹರಿಯಬಿಟ್ಟು ಅಧಿಕಾರಕ್ಕೆ ಬರುತ್ತಾರೆ. ದೇಶದಲ್ಲಿ ಮೋದಿ ಪ್ರಧಾನಿಯಾದ ಬಳಿಕ ಜನಸಾಮಾನ್ಯರು ಹೊಟ್ಟೆ ತುಂಬ ಊಟ ಮಾಡದ ಸ್ಥಿತಿ ನಿರ್ಮಾಣವಾಗಿದೆ. ದಿನ ಬಳಕೆ ವಸ್ತುಗಳು, ಇಂಧನ, ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. 40% ಕಮಿಷನ್ ದಂಧೆ ನಡೆಸುವ ಬಿಜೆಪಿ ಸರಕಾರಕ್ಕೆ ಅಭಿವೃದ್ದಿ ಬೇಕಿಲ್ಲ. ಅಭಿವೃದ್ಧಿ ಬಗ್ಗೆ ಕೇಳಬೇಡಿ ಲವ್‌ಜಿಹಾದ್ ಬಗ್ಗೆ ಮಾತನಾಡಿ ಎಂದು ಬಿಜೆಪಿ ಅಧ್ಯಕ್ಷರೇ ಬಹಿರಂಗವಾಗಿ ಹೇಳಿಕೆ ಕೊಡುತ್ತಾರೆ ಇದಕ್ಕಿಂತ ದೊಡ್ಡ ನಾಚಿಕೆಗೇಡು ಮತ್ತೊಂದಿಲ್ಲ ಎಂದು ಹೇಳಿದರು.

ಬೆಲೆ ಏರಿಕೆಯ ಬಗ್ಗೆ ಜನರಿಗೆ ತಿಳಿಸಿ; ಶಕುಂತಳಾ ಶೆಟ್ಟಿ
ಕಾರ್ಯಕ್ರಮವನ್ನು ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬಿಜೆಪಿ ಸರಕಾರದ ದುಷ್ಟ ಆಡಳಿತದ ಬಗ್ಗೆ ಕಾರ್ಯಕರ್ತರು ಮನೆ ಮನೆಯಲ್ಲಿ ತಿಳಿಸಬೇಕು. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ, ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಅಧಿಕಾರಕ್ಕೆ ಬಂದರೆ ಅಚ್ಚೇದಿನ್ ಕೊಡುವುದಾಗಿ ಹೇಳಿದ ಪ್ರಧಾನಿ ಮೋದಿ ದೇಶವನ್ನು ಅಂಬಾನಿ, ಅದಾನಿಗೆ ಮಾರಾಟ ಮಾಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ 70 ವರ್ಷದಲ್ಲಿ ಏನು ಮಾಡಿದೆ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ಕಾಂಗ್ರೆಸ್ ಮಾಡಿಟ್ಟಿದ್ದನ್ನು ಮೋದಿ ಒಂದೊಂದಾಗಿ ಮಾರುತ್ತಿದ್ದಾರೆ. ದೇಶದಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ, ಕೇವಲ ಶೋಕಿಗಳು ಮಾತ್ರ ನಡೆಯುತ್ತಿದೆ. ಜನ ಸಾಮಾನ್ಯರ ಸಂಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಪ್ರತಿಯೊಂದು ವಿಚಾರಕ್ಕೂ ಧರ್ಮವನ್ನು ಎಳೆದು ತಂದು ಸಮಾಜದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದ್ದಾರೆ. ಜನ ಬಿಜೆಪಿ ಬಗ್ಗೆ ಬೇಸತ್ತಿದ್ದಾರೆ ಮುಂದಿನ ಬಾರಿ ನಮ್ಮದೇ ಸರಕಾರ, ನಮ್ಮದೇ ಶಾಸಕರು ಬರಲಿದ್ದಾರೆ ಎಂದು ಹೇಳಿದರು.

ಪುತ್ತಿಲರಿಗೆ ಸೀಟು ಸಿಗುವುದಿಲ್ಲ ಶಾಪ ಸಿಗ್ತದೆ: ಹೇಮನಾಥ ಶೆಟ್ಟಿ
ಪುತ್ತೂರು ಕಾಂಗ್ರೆಸ್‌ನಲ್ಲಿ ಬಣ ರಾಜಕೀಯವಿಲ್ಲ, ನಾವೆಲ್ಲರೂ ಒಂದೇ ನಮ್ಮಲ್ಲಿ ಟಿಕೆಟ್ ಆಕಾಂಕ್ಷಿಗಳಿರಬಹುದು. ಆದರೆ ಯಾರಿಗೆ ಅವಕಾಶ ಸಿಕ್ಕಿದರೂ ಪರವಾಗಿಲ್ಲ ನಾವೆಲ್ಲರೂ ಒಂದಾಗಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಪುತ್ತೂರಿನಲ್ಲಿ ಪುತ್ತಿಲರಿಗೆ ಟಿಕೆಟ್ ಸಿಗುತ್ತದೆ ಎಂದು ಹೇಳುತ್ತಾರೆ ಅವರಿಗೆ ಸಿಗುವುದು ಟಿಕೆಟ್ ಅಲ್ಲ ಜನರ ಶಾಪವಾಗಿದೆ. ಇಷ್ಟು ದಿನ ಸಂಘರ್ಷವನ್ನು ಸೃಷ್ಟಿಸಿದ್ದ ಅವರನ್ನು ಬಿಜೆಪಿ ಮೂಲೆಗುಂಪು ಮಾಡುತ್ತದೆ ಎಂದು ಹೇಳಿದರು. ಸೋಲುತ್ತೇವೆ ಎಂಬ ಕಾರಣಕ್ಕೆ ಬಿಜೆಪಿ ಸರಕಾರ ಜಿಪಂ ಮತ್ತು ತಾಪಂ ಚುನಾವಣೆಯನ್ನು ನೆಪ ಒಡ್ಡಿ ಮುಂದೂಡುತ್ತಿದೆ. ಬಿಜೆಪಿ ಆಡಳಿತ ಬಿಜೆಪಿಯವರಿಗೆ ಮಾತ್ರ ಎಂಬಂತಾಗಿದೆ. ಅರಿಯಡ್ಕ ಗ್ರಾಪಂ ಚುನಾವಣೆಯಲ್ಲಿ ಹಣ, ಹೆಂಡ ಹಂಚುವ ಕೆಲಸವನ್ನು ಬಿಜೆಪಿ ಮಾಡಿದೆ. ಅಭಿವೃದ್ದಿ ವಿಚಾರ ಮಾತನಾಡಬೇಡಿ. ಲವ್‌ಜಿಹಾದ್ ಬಗ್ಗೆ ಮಾತನಾಡಿ ಎಂದು ಹೇಳುತ್ತಿರುವ ಸಂಸದ ನಳಿನ್‌ಕುಮಾರ್ ಕಟೀಲ್‌ಗೆ ತಲೆ ಕೆಟ್ಟಿದೆ ಎಂದು ಹೇಳಿದ ಅವರು ಮುಂದಿನ ಸರಕಾರ ನಮ್ಮದೆ. ಆಗ ನಾವು ಉತ್ತರ ಕೊಡುವ ಕಾಲ ಬರುತ್ತದೆ. 40% ಸರಕಾರದ ಬಗ್ಗೆ ಜನ ಬೇಸತ್ತಿದ್ದಾರೆ ಎಂದು ಹೇಳಿದರು.

ಮುಸ್ಲಿಮರನ್ನು ಬೈದರೆ ಬಿಜೆಪಿಗೆ ಓಟು ಬೀಳ್ತದೆ: ಎಂ ಎಸ್
ಬಿಜೆಪಿ ಅಧಿಕಾರದ ಆಸೆಯಿಂದ ಧರ್ಮಗಳ ಹೆಸರಿನಲ್ಲಿ ಪರಸ್ಪರ ಹೊಡೆದಾಡುವ ಸನ್ನಿವೇಶವನ್ನು ಸೃಷ್ಟಿಮಾಡುತ್ತಿದೆ. ಮುಸ್ಲಿಮರನ್ನು ಬೈದರೆ ಮಾತ್ರ ಬಿಜೆಪಿಗೆ ಜನ ಓಟು ಹಾಕುತ್ತಾರೆಂದು ಡಿ ವಿ ಸದಾನಂದ ಗೌಡರು ನನ್ನಲ್ಲಿ ಹೇಳಿದ್ದಾರೆ. ಮುಸ್ಲಿಮರನ್ನು ಬೈದರೆ ಸಾಕು ಬಿಜೆಪಿ ಜನಪ್ರತಿನಿಧಿಗಳು ಅಭಿವೃದ್ದಿ ಕೆಲಸ ಮಾಡಬೇಕಾಗಿಲ್ಲ ಎಂಬುದು ಇದರಿಂದ ಸಷ್ಟವಾಗುತ್ತದೆ. ನಮ್ಮ ಸರಕರ ಬಂದರೆ ಬಿಜೆಪಿಯರಿಗೂ ಉಚಿತ ಅಕ್ಕಿ, ಕರೆಂಟ್ ಕೊಡುತ್ತೇವೆ ಎಂದು ಕೆಪಿಸಿಸಿ ಸದಸ್ಯ ಎಂ ಎಸ್‌ ಮಹಮ್ಮದ್ ಹೇಳಿದರು.

ದರಪಟ್ಟಿ ತಯಾರಿಸಿ ಮನೆ ಮನೆಗೆ ಹಂಚಿ: ಅಶೋಕ್‌ಕುಮಾರ್ ರೈ
ಕಾಂಗ್ರೆಸ್ ಸರಕಾರ ಇದ್ದಾಗ ದಿನಬಳಕೆ ವಸ್ತುಗಳ ಬೆಲೆ ಎಷ್ಟಿತ್ತು ಈಗ ಎಷ್ಟಿದೆ ಎಂಬುದನ್ನು ದರಪಟ್ಟಿ ಮಾಡಿ ಗ್ರಾಮಗಳ ಪ್ರತೀ ಮನೆಗೂ ಹಂಚುವ ಕೆಲಸ ಆಗಬೇಕಿದೆ. ಜನ ಸಾಮಾನ್ಯ ನಲುಗಿ ಹೋಗಿದ್ದು ಪ್ರತೀ ದಿನವೂ ಬೆಲೆ ಏರುತ್ತಲೇ ಇದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್‌ರೈ ಕೋಡಿಂಬಾಡಿ ಹೇಳಿದರು. ಹಸಿ ಸುಳ್ಳನ್ನು ಸೃಷ್ಟಿಸಿ ಅದನ್ನು ಪ್ರಚಾರ ಮಾಡುವುದೇ ಬಿಜೆಪಿ ಕೆಲಸವಾಗಿದೆ . ಬಿಜೆಪಿಗೆ ಜನರ ನೋವಿನ ಅರಿವಿಲ್ಲ ಕೇವಲ 40% ಮಾತ್ರ ಚಿಂತೆಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡೆ ಕೃಪಾ ಆಳ್ವರವರು ಮಾತನಾಡಿ ಬಿಜೆಪಿ ಸರಕಾರದ ದುರಾಡಳಿತದ ಬಗ್ಗೆ ವಿವರಣೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮಾತನಾಡಿ ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ಮಾತ್ರ ಜನ ಸಾಮಾನ್ಯ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗುತ್ತದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಈ ದೇಶವನ್ನು ಆಳುವುದಕ್ಕೆ ಸೂಕ್ತ ಎಂಬುದು ಜನತೆಗೆ ಅರಿವಾಗಿದೆ. ದಿನದಿಂದ ದಿನಕ್ಕೆ ದೇಶದಲ್ಲಿ ಜನರ ಬದುಕು ಬರ್ಬರವಾಗುತ್ತಿದೆ. ಬದುಕುವುದೇ ಕಷ್ಟ ಎಂಬ ಭಾವನೆ ಜನರಲ್ಲಿ ವ್ಯಕ್ತವಾಗುತ್ತದೆ. ಪುತ್ತೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆಗಳಲ್ಲಿಯೂ ಕಾಂಗ್ರೆಸ್ ಶಾಸಕರು ಗೆದ್ದು ಬರಬೇಕು. ನಮ್ಮ ಅಭ್ಯರ್ಥಿ ಕೈ ಚಿಹ್ನೆಯಾಗಿದೆ ಎಂದು ಹೇಳಿದ ಅವರು ಎಲ್ಲರೂ ಒಗ್ಗಟ್ಟಿನಿಂದ ಪುತ್ತೂರಿನಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಸನ್ಮಾನ
ಇದೇ ಸಂದರ್ಭದಲ್ಲಿ ಅರಿಯಡ್ಕ ವಲಯ ಕಾಂಗ್ರೆಸ್ ವ್ಯಾಪ್ತಿಯಲ್ಲಿರುವ ಪಕ್ಷದ ಹಿರಿಯ ಕಾರ್ಯಕರ್ತರು ಮತ್ತು ಸಾಧಕರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ತಿಮ್ಮಣ್ಣ ಮೂಲ್ಯ, ಸತೀಶ್ಚಂದ್ರ ಗೋಳ್ತಿಲ, ರಾಮಣ್ಣ ನಾಯ್ಕ ಬಳ್ಳಿಕಾನ, ಶ್ರೀಧರ ಮಣಿಯಾಣಿ, ಕೂಜಿರ ಜಾರತ್ತಾರು, ಸೋಮಪ್ಪ ನಾಯ್ಕ, ನಾರಾಯಣ ನಾಯ್ಕ, ಇಸುಬು ಬಂಡಸಾಲೆ, ಇಸ್ಮಾಯಿಲ್ ಹಾಜಿ ಕೌಡಿಚ್ಚಾರ್, ಅಬ್ದುಲ್ಲ ಶೇಖಮಲೆ, ವೇಂಬಡಿ ಕೌಡಿಚ್ಚಾರ್, ಸುಲೈಮಾನ್ ಪನೆಕ್ಕಳ, ಗುರುಪ್ರಸಾದ್ ದರ್ಬೆತ್ತಡ್ಕ, ಗುರುವಪ್ಪ ನಾಯ್ಕ ಶೇಕಮಲೆ, ಪಾಚು, ಪುಷ್ಪಾವತಿ, ಲೀಲಾವತಿ, ಮುತ್ತು ಮಣಿಯಾಣಿ,ಗ್ರಾಪಂ ಸದಸ್ಯೆ ವಿನೀತಾ, ಜಯಂತಿ ಪಟ್ಟುಮೂಲೆ, ದಿವ್ಯನಾಥ ಶೆಟ್ಟಿ ಕಾವು, ಗೋಪಣ್ಣ ಶೆಟ್ಟಿ, ಸಂಕಪ್ಪ ಪೂಜಾರಿ, ಭಾಗೀರತಿ, ಶಾಂತಾಕುಮಾರಿ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಶಂಕರ್ ಮಾಡಂದೂರು, ಮೋನಪ್ಪ ಕೆರೆಮಾರು ಮತ್ತು ಸಾಧಕ ವಿದ್ಯಾರ್ಥಿನಿಯರಾದ ಶಮ್ನಾ ಮತ್ತು ಅಮ್ನಾರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಮಾಜಿ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ರಾಜೀವ ರೈ ಕುತ್ಯಾಡಿ, ಸಂತೋಷ್ ರೈ ಇಳಂತಾಜೆ, ದಿವ್ಯಪ್ರಭಾ ಚಿಲ್ತಡ್ಕ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾದ ಜೋಕಿಂ ಡಿಸೋಜಾ, ಶುಕೂರ್ ಹಾಜಿ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್‌ಪೂಜಾರಿ ಬೊಳ್ಳಾಡಿ, ಮಾಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಬಲ್ಯಾಯ, ಅನ್ವರ್ ಖಾಸಿಂ ಸಾಲ್ಮರ, ಮೆಲ್ವಿನ್ ಮೊಂತೆರೋ ಕುಂಬ್ರ, ಇಸಾಕ್ ಸಾಲ್ಮರ, ಮನೋಹರ್ ರೈ ಎಂಡೆಸಾಗು, ಪುರಂದರ ರೈ ನಿಶ್ಮಿತಾ, ಸಲಾಂ ಸಂಪ್ಯ, ಪ್ರಮೋದ್ ಕುಮಾರ್ ಕೊಳ್ತಿಗೆ, ರಾಮಪಂಬಾರು, ಖಾದ್ರಿ ಕಲ್ಲರ್ಪೆ, ವಿಶಾಲಾಕ್ಷಿ ಬನ್ನೂರು, ರಫೀಕ್ , ಎ ಆರ್ ಇಬ್ರಾಹಿಂ ,ಚಂದ್ರಶೇಖರ ಮಣಿಯಾಣಿ ಕುರಿಂಜ, ದಶರಥ ರೈ ಕುತ್ಯಾಡಿ, ವಸಂತ ರೈ ಕುತ್ಯಾಡಿ, ತ್ಯಾಂಪಣ್ಣ ರೈ ಕುತ್ಯಾಡಿ ವಿಠಲ ನಾಯ್ಕ ಬಲ್ಲಿಕಾನ, ವನತರಾಜ್ ಸಿಆರ್‌ಸಿ, ಕೆ ಸಿ ಅಶೋಕ್ ಶೆಟ್ಟಿ, ಶಿವಕುಮಾರ್ ಕೌಡಿಚ್ಚಾರ್, ನಾಗರಾಜ್ ಕೌಡಿಚ್ಚಾರ್, ರಫೀಕ್ ದರ್ಖಾಸ್, ವಿನೋದ್‌ ಕುಮಾರ್ ಬಲ್ಲಿಕಾನ, ಸಾರ್ಥಕ್ ರೈ ಅರಿಯಡ್ಕ, ಬಶೀರ್ ಕೌಡಿಚ್ಚಾರ್, ಅಸ್ಮಾ ಗಟ್ಟಮನೆ, ರಿಯಾಝ್ ಶೇಖಮಲೆ, ಹನೀಫ್ ಪಟ್ಲಕಾನ, ಭವಿತ್ ಜಾರತ್ತಾರು, ಕೇಶವ ಶೇಖಮಲೆ, ಸಾವಿತ್ರಿ ಪೈಲಕಲ್ಲು, ಶಶಿಕಾಂತ್ ಕೆಮ್ಮನಡ್ಕ, ಗಂಗಾಧರ ಪಾಟಾಳಿ, ಗೋಪಾಲ ಪಾಟಾಳಿ ಪಟ್ಟುಮೂಲೆ, ಶಿವರಾಂ ಮಣಿಯಾಣಿ ಪೊನ್ನತಲಕ, ಸಂತೋಷ್ ಕುಲಾಲ್, ಸುಂದರ ಭಂಡಾರಿ, ಸುಧಾಕರ ಸಿಆರ್‌ಸಿ , ಯೂಸುಫ್ ಪಟ್ಲಕಾನ, ಆದಂ ಕಲ್ಲರ್ಪೆ ಮೊದಲಾದವರು ಉಪಸ್ಥಿತರಿದ್ದರು.

ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಸ್ವಾಗತಿಸಿದರು. ಶಿವರಾಮ ಮಣಿಯಾಣಿ ಕುರಿಂಜ ವಂದಿಸಿದರು. ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here