ಅಗಣಿತ ಕಾರಣಿಕ ಕ್ಷೇತ್ರ ಅನಂತಾಡಿ ಶ್ರೀ ಉಳ್ಳಾಲ್ತಿ ಸಾನ್ನಿಧ್ಯ; ಇಂದು (ಮಾ.6) ಭಂಡಾರ ಏರಿ ನಾಳೆ(ಮಾ.7) ವಾರ್ಷಿಕ ಉತ್ಸವ-ಅನಂತಾಡಿ ಮೆಚ್ಚಿ

0

ಪುತ್ತೂರು: ದ.ಕ. ಜಿಲ್ಲೆಯ ಕಾರಣಿಕತೆಯ ಕ್ಷೇತ್ರವಾಗಿರುವ ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನ ನಂಬಿದ ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಪುಣ್ಯಕ್ಷೇತ್ರ. ವನದುರ್ಗೆಯೇ ಉಳ್ಳಾಲ್ತಿ ಸ್ವರೂಪದಿಂದ ತುಳುನಾಡಿನ ಅಲ್ಲಲ್ಲಿ ಆರಾಧನೆಗೆ ಒಳಪಡುತ್ತಿದ್ದಾಳೆ ಎಂದು ನಂಬಲಾಗಿದೆ. ಹಿಂದೆ ರಾಜರ ಕಾಲದಲ್ಲಿ ದೇವಿ ಶಕ್ತಿಯನ್ನು ಆರಾಧಿಸುತ್ತಿದ್ದ ರಾಣಿಯೇ ಉಳ್ಳಾಲ್ತಿಯಾದಳೆಂಬ ಐತಿಹ್ಯವೂ ಇದೆ. ಏನೇ ಐತಿಹ್ಯವಿದ್ದರೂ ಉಳ್ಳಾಲ್ತಿ ಸಾನ್ನಿಧ್ಯಗಳ ಕಾರಣಿಕತೆ ಬಹಳ ವಿಶಿಷ್ಟವಾದುದು ಮತ್ತು ವಿಭಿನ್ನವಾದುದು. ಕ್ಷೇತ್ರದಲ್ಲಿ ಈ ಬಾರಿ ಮಾ.6ರಂದು ಭಂಡಾರ ಏರಿ ಮಾ.7ರಂದು ಮೆಚ್ಚಿಜಾತ್ರೆ ನಡೆಯಲಿದೆ.

ಮೆಚ್ಚಿ ಜಾತ್ರೆಯ ಸಂಭ್ರಮ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜರಗುವ ಅನೇಕ ಜಾತ್ರೋತ್ಸವಗಳಲ್ಲಿ ಅನಂತಾಡಿ ಮೆಚ್ಚಿ ಜಾತ್ರೆಗೆ ವಿಶೇಷ ಸ್ಥಾನವಿದೆ ಪ್ರತಿ ವರ್ಷ ಕುಂಭ ಮಾಸ ಶುಕ್ಲ ಚರ್ತುದರ್ಶಿಯ ರಾತ್ರಿ ಭಂಡಾರ ಏರಿ, ಮರುದಿನ ಮಾಯಿಯ ಹುಣ್ಣಿಮೆಯ ದಿನದಂದು. ಜರಗುವ ಹಗಲು ಮೆಚ್ಚಿ ಜಾತ್ರೆಯು ಊರ ಪರವೂರ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಮೆಚ್ಚಿ ಜಾತ್ರೆಗೆ ಒಂದು ವಾರಕ್ಕೆ ಮೊದಲೇ ಗೊನೆ ಕಡಿಯುವ ಮುಹೂರ್ತದೊಂದಿಗೆ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ’ಉಗ್ರರೂಪಿಣಿ ಉಳ್ಳಾಲ್ತಿ’ ಮಾತೆಗೆ ರಕ್ತ ಸಮರ್ಪಿಸುವ ನಿಟ್ಟಿನಲ್ಲಿ ಜಾತ್ರೋತ್ಸವದ ಮುನ್ನಾ ದಿನ ಸಂಜೆಯವರೆಗೆ ಕೋಳಿ ಅಂಕ ಜರಗುತ್ತದೆ. ಇದು ಜಿಲ್ಲೆಯಲ್ಲೇ ಪ್ರಸಿದ್ಧಿ ಪಡೆದಿದೆ. ಸಂಜೆಯ ಹೊತ್ತಿಗೆ ಜಾತ್ರೆ ನಡೆಯುವ ಬಂಟ್ರಿಂಜ ಸನ್ನಿಧಿಯಲ್ಲಿ ಚೆಂಡಾಟ ಆಡಿ ಕೋಳಿ ಗೂಟ ಕಿತ್ತು, ಕೋಳಿ ಅಂಕಕ್ಕೆ ತೆರೆ ಬೀಳುತ್ತದೆ. ಜಾತ್ರೆಯ ಅಂಗವಾಗಿ ಮೂರು ದಿನ ಚೆಂಡಾಟ ನಡೆಯುವುದು ಇಲ್ಲಿನ ಸಂಪ್ರದಾಯ. ನಂತರ ದೇವಿಯ ಭಂಡಾರದ ಮನೆ, ಚಿತ್ತರಿಗೆ ಮೂಲ ಸ್ಥಾನಗಳೆಲ್ಲವೂ ತಳಿರು, ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಿ ಕಂಗೊಳಿಸುತ್ತದೆ. ಗುತ್ತು ಮನೆತನದವರು, ಚಾಕರಿ ವರ್ಗದವರು ಸೇರಿ ಭಂಡಾರದ ಮನೆಯಲ್ಲಿ ಉಳ್ಳಾಲ್ತಿ ಅಮ್ಮನ ಬೆಳ್ಳಿ, ಚಿನ್ನದ ಮೂರ್ತಿಗಳು, ಮಲರಾಯ ವ್ಯಾಘ್ರ ಚಾಮುಂಡಿ ಪರಿವಾರ ದೈವಗಳ ಆಯುಧ, ಆಭರಣಗಳನ್ನು ಶೃಂಗರಿಸಿ ಚಾಕರಿ ವರ್ಗದವರು, ದರ್ಶನ ಪಾತ್ರಿಗಳು, ವಿಶೇಷ ದಿರಿಸುಗಳನ್ನು ತೊಟ್ಟು ಶೃಂಗಾರಗೊಂಡ ಪಲ್ಲಕ್ಕಿಯಲ್ಲಿ ದೈವದ ಭಂಡಾರವನ್ನು ಹೊತ್ತು ಚಿತ್ತರಿಗೆಯ ಮೂಲ ಸ್ಥಾನಕ್ಕೆ ಬರುತ್ತಾರೆ. ಇಲ್ಲಿ ದೇವಿಯ ಚಂದನ ಹಾಗೂ ಬೆಳ್ಳಿ ಮೂರ್ತಿಗಳನ್ನು ಉಯ್ಯಾಲೆಯಲ್ಲಿ ಇಟ್ಟು ಪೂಜಿಸಿ, ಭಂಡಾರವು ಜಾತ್ರೆ ನಡೆಯುವ ಬಂಟ್ರಿಂಜ ಸನ್ನಿಧಾನಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಭಕ್ತರು ಹಣತೆ ದೀಪ ಉರಿಸಿ ದೇವಿಯನ್ನು ಸ್ವಾಗತಿಸುವ ದೃಶ್ಯಗಳು ನಯನಮನೋಹರ. ಭಂಡಾರವನ್ನು ದೈವಸ್ಥಾನದ ಒಳಗೆ ಇರಿಸಿ ಧ್ಚಜಾರೋಹಣ ನಡೆಯುತ್ತದೆ.

ಮರುದಿನ ಬೆಳಿಗ್ಗೆ ಶುಭ ಮುರ್ಹೂತದಲ್ಲಿ ಬೆಳಗ್ಗಿನ ಪೂಜಾ ಕಾರ್ಯಗಳು ಮುಗಿದು ದೈವಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಮೆಚ್ಚಿ ಜಾತ್ರೆ ಪ್ರಾರಂಭವಾಗುತ್ತದೆ. ಬೆಳ್ಳಿಯ ಮೊಗವಾಡದ ಬಲಿಯನ್ನು ಸೀಯರು ನೋಡಬಾರದು ಎಂಬುದು ಪರಂಪರಾಗತವಾಗಿ ಬಂದ ನಿಯಮ. ಈ ಜಾತ್ರೆ ಸಂದರ್ಭದಲ್ಲಿ ವಿದ್ಯಾರ್ಜನೆ, ಉದ್ಯೋಗ, ಸಂತಾನ ಪ್ರಾಪ್ತಿ, ವಿವಾಹ ಸಂಬಂಽ ಹಾಗೂ ಅನೇಕ ಕಾರಣಕ್ಕೆ ಹರಕೆ ಒಪ್ಪಿಸುವುದು ಇಲ್ಲಿನ ವಿಶೇಷ. ದೇವಿಯ ಜಾತ್ರೆಯ ಬಳಿಕ ದೇವಿಗೆ ವಿಶೇಷ ಶುದ್ದಿಕಲಶಗಳು ಜರಗಿ ಪಲ್ಲಕ್ಕಿ ಸಮೇತವಾಗಿ ಮತ್ತೆ ಚಿತ್ತರಿಗೆ ಮೂಲಸ್ಥಾನ ತಲುಪಿ ದೇವಿಯ ಆಭರಣ ತೆಗೆದು ಶುದ್ದಿ ಕಲಶಾಭಿಷೇಕಗಳನ್ನು ಮಾಡಿ ಸಿರಿ ತಂಬಿಲ ಜರಗಿ ನಂತರ ಭಂಡಾರದ ಮನೆಗೆ ತೆರಳಿ ಅವುಗಳನ್ನು ಸ್ವಸ್ಥಾನಗಳಲ್ಲಿ ಇರಿಸುವುದರ ಮೂಲಕ ಮೆಚ್ಚಿ ಜಾತ್ರೆ ಸಮಾಪ್ತಿಯಾಗುತ್ತದೆ. ಮಾಯ ಸೇರಿದ ಉಳ್ಳಾಲ್ತಿ ಅಮ್ಮನನ್ನು ಕಾಯಕ್ಕೆ ತಂದು ನೇಮ ನಡಾವಳಿ ಕೊಡುವ ಮೂಲಕ ನಂಬಿದ ಭಕ್ತ ಕೋಟಿ ಧನ್ಯತಾ ಭಾವ ತಳೆಯುತ್ತಾರೆ. ಉಳ್ಳಾಲ್ತಿಯ ದರ್ಶನ, ನರ್ತನ ಸೇವೆಯನ್ನು ಕಣ್ತುಂಬಿಕೊಳ್ಳುವುದೇ ಒಂದು ದೊಡ್ಡ ಭಾಗ್ಯವೂ ಹೌದು.

ಬೇಡಿದ್ದನ್ನು ಅನುಗ್ರಹಿಸುವ ತಾಯಿ: ಸಂತಾನ ಭಾಗ್ಯ ಇಲ್ಲದ ಅದೆಷ್ಟೊ ಮಂದಿ ಇಲ್ಲಿ ಭಕ್ತಿಯಿಂದ ಬೇಡಿಕೊಂಡ ಪ್ರಕಾರ ಅವರಿಗೆ ಸಂತಾನ ಭಾಗ್ಯ ದೊರಕಿದೆ. ಅಮ್ಮನಿಗೆ ತೊಟ್ಟಿಲು ಬಾಲೆ ಹಾಕುತ್ತೇನೆ ಎಂದು ಹರಕೆ ಹೇಳಿಕೊಂಡರೆ, ಆ ದಂಪತಿಗೆ ಸಂತಾನ ಭಾಗ್ಯ ದೊರಕುತ್ತದೆ. ಇಂತಹ ಸಾವಿರಾರು ನಿದರ್ಶನಕ್ಕೆ ಪ್ರತಿ ವರ್ಷ ಇಲ್ಲಿಗೆ ಹರಕೆಯಾಗಿ ಬರುವ ತೊಟ್ಟಿಲು ಬಾಲೆ(ಮಗು)ಯ ಚಿನ್ನ, ಬೆಳ್ಳಿ ಮೂರ್ತಿಗಳೇ ಸಾಕ್ಷಿಯಾಗಿದೆ. ದನಗಳು ಕರು ಹಾಕದಿದ್ದಲ್ಲಿ, ಇದಲ್ಲದೆ ದನ ಕರುಗಳಿಗೆ ಬರುವ ಖಾಯಿಲೆ, ಕಳವು ಪ್ರಕರಣ. ಇತ್ಯಾದಿಗಳಿಗೆ ಅಮ್ಮನಲ್ಲಿ ಬೇಡಿಕೊಂಡರೆ ಪರಿಹಾರ ನಿಶ್ಚಿತ ಎಂದು ನಂಬಿಕೆ ಇದೆ.

LEAVE A REPLY

Please enter your comment!
Please enter your name here