ಪುತ್ತೂರು: ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ‘ಸಂಪಾಜೆ ಯಕ್ಷೋತ್ಸವ, ಬ್ರಹ್ಮೈಕ್ಯ ಎಡನೀರು ಕೇಶವಾನಂದ ಶ್ರೀಗಳ ಪುಣ್ಯಸ್ಮೃತಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಮಾ. 11 ರಂದು ಸಂಜೆಯಿಂದ ಕಲ್ಲುಗುಂಡಿ ಶಾಲಾ ವಠಾರದಲ್ಲಿ ನಡೆಯಲಿದೆ.
ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಯವರಿಗೆ ಗೌರವ ಸಮರ್ಪಣೆ ನಡೆಯಲಿದೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿಯವರಿಗೆ ಶ್ರೀ ಕೇಶವಾನಂದ ಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿ, ಡಾ. ಎ.ಜೆ. ಶೆಟ್ಟಿ ಮಂಗಳೂರುರವರಿಗೆ ‘ಶ್ರೀ ಕೇಶವಾನಂದ ಭಾರತೀ ಶೈಕ್ಷಣಿಕ ಪ್ರಶಸ್ತಿ, ಖ್ಯಾತ ಸಂಗೀತ ಕಲಾವಿದ ಆನೂರು ಅನಂತ ಕೃಷ್ಣ ಶರ್ಮರಿಗೆ ‘ಶ್ರೀ ಕೇಶವಾನಂದ ಭಾರತೀ ಸಂಗೀತ ಪ್ರಶಸ್ತಿ’, ಕಟೀಲು ಶ್ರೀ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಯವರಿಗೆ ‘ಶ್ರೀ ಕೇಶವಾನಂದ ಭಾರತೀ ಯಕ್ಷಗಾನಧ್ವರ್ಯು ಪ್ರಶಸ್ತಿ’, ಬೆಂಗಳೂರಿನ ಹಿರಿಯ ನ್ಯಾಯವಾದಿ ಪಿ. ಶಶಿಕಿರಣ್ ಶೆಟ್ಟಿಯವರಿಗೆ ‘ಕಲಾಪೋಷಕ ಪ್ರಶಸ್ತಿ, ಮೂಡಬಿದ್ರೆ ಬಡಗು ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ವೇ. ಮೂ. ಆಲಂಗಾರು ಈಶ್ವರ ಭಟ್ ರಿಗೆ ವೈದಿಕ ಪ್ರಶಸ್ತಿ ಪ್ರದಾನ ನಡೆಯಲಿದೆ.
ಯಕ್ಷಗಾನ ಕಲಾವಿದ ಜಗದಾಭಿರಾಮ ಪಡುಬಿದ್ರೆಯವರಿಗೆ ‘ಯಕ್ಷೋತ್ಸವ ಸನ್ಮಾನ’ ನಡೆಯಲಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರಾದ ಡಾ. ಎಂ. ಪ್ರಭಾಕರ ಜೋಷಿ, ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ಸರಪಾಡಿ ಅಶೋಕ್ ಶೆಟ್ಟಿಯವರಿಗೆ ಅಭಿನಂದನೆ ನಡೆಯಲಿದೆ.
ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿಯವರು ಗುರುವಂದನೆ ಮಾಡಲಿದ್ದಾರೆ. ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ರವರು ಡಾ. ಕೀಲಾರು ಸಂಸ್ಮರಣೆ ಮಾಡಲಿದ್ದಾರೆ. ನ್ಯಾಯವಾದಿ ಕೆ. ಪಿ. ಬಾಲಸುಬ್ರಹ್ಮಣ್ಯ, ವೈದಿಕ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ಟರು, ಯಕ್ಷಗಾನ ಕಲಾವಿದ ವಾಸುದೇವ ರಂಗಾಭಟ್ ರವರು ಅಭಿನಂದನಾ ನುಡಿ ಆಡಲಿದ್ದಾರೆ.
ಅಹರ್ನಿಶಿ ಯಕ್ಷಗಾನ ಬಯಲಾಟ
ಸಮಾರಂಭದ ಪ್ರಯುಕ್ತ ಮಾ. 11 ರಂದು ಸಂಜೆ ಗಂ. 4. 00 ರಿಂದ ಮರುದಿನ ಬೆಳಿಗ್ಗೆ ಗಂ. 7 ರವರೆಗೆ ತೆಂಕುತಿಟ್ಟು ಯಕ್ಷಗಾನ ಮೇಳಗಳ ಪ್ರಸಿದ್ದ ಕಲಾವಿದರ ಸಮಾಗಮದಲ್ಲಿ ಯಕ್ಷಗಾನ ಬಯಲಾಟ ನಡೆಯಲಿದೆ. ‘ಚೂಡಾಮಣಿ’, ‘ತಾರಾ – ಶಶಾಂಕ’, ‘ಉಷಾ ಪರಿಣಯ’, ‘ಜ್ವಾಲಾ ಪ್ರತಾಪ’,’ ನಾಗಾಸ್ತ್ರ’ ಎಂಬ ಪೌರಾಣಿಕ ಕಥಾಪ್ರಸಂಗಗಳು ಬಯಲಾಟವಾಗಿ ನಡೆಯಲಿದೆ.