ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವರ ಆರಾಟ ಮಹೋತ್ಸವದ ಪ್ರಯುಕ್ತ ಹಳೆ ಬಸ್‌ನಿಲ್ದಾಣದಲ್ಲಿ ‘ಗೆಳೆಯರು- 94’ ವತಿಯಿಂದ 30ನೇ ವರ್ಷದ ‘ಸಂಗೀತ ಗಾನ ಸಂಭ್ರಮ’ ಹಾಗೂ ಶಾಸಕರ ಅನುದಾನದಲ್ಲಿ ನಡೆದ ಇಂಟರ್‌ಲಾಕ್ ಅಳವಡಿಕೆಯ ಮತ್ತು ಪೇಟೆ ರಸ್ತೆಯ ಮರು ಡಾಮರೀಕರಣ ಕಾಮಗಾರಿಯ ಉದ್ಘಾಟನೆ ನಡೆಯಿತು.
ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು, ಭಗವಂತನ ಆರಾಧನೆಯೊಂದಿಗೆ ಕಲೆಯನ್ನು ಆರಾಧಿಸಬೇಕು. ಈ ನಿಟ್ಟಿನಲ್ಲಿ ‘ಗೆಳೆಯರು- 94’ ಬಳಗದವರು ಕಳೆದ 29 ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಅವರ ಬೇಡಿಕೆಯಂತೆ ದೇವರು ಕಟ್ಟೆಪೂಜೆಯನ್ನು ಸ್ವೀಕರಿಸುವ ಹಳೆಯ ಬಸ್ ನಿಲ್ದಾಣವು ಅನಾಥವಾಗಬಾರದು ಎಂಬ ನಿಟ್ಟಿನಲ್ಲಿ ಇಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್ ಅಳವಡಿಸಲಾಗಿದೆ. ಅಲ್ಲದೇ, ಮಖೆ ಜಾತ್ರೆಗೆ ಮೊದಲು 55 ಲಕ್ಷ ರೂ. ವೆಚ್ಚದಲ್ಲಿ ಇಡೀ ಪೇಟೆಯ ರಸ್ತೆಗಳಿಗೆ ಮರು ಡಾಮರೀಕರಣ ನಡೆಸಲಾಗಿದೆ ಎಂದರು.
ಈ ಸಂದರ್ಭ ನಿವೃತ್ತ ಶಿರಸ್ತೇದಾರರಾದ ದಾಸಪ್ಪ ಗೌಡ ಕುದ್ಲೂರು ಅವರನ್ನು ಸನ್ಮಾನಿಸಲಾಯಿತು. ಕೇರಳ ಹಾಗೂ ಕರ್ನಾಟಕದ ಪ್ರಖ್ಯಾತ ಗಾಯಕರನ್ನೊಳಗೊಂಡ ಮಂಗಳೂರಿನ ಅನುಗ್ರಹ ಮೆಲೋಡಿಸ್‌ನವರಿಂದ ‘ಸಂಗೀತ ಗಾನ ಸಂಭ್ರಮ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ, ಸದಸ್ಯರಾದ ಸುರೇಶ್ ಅತ್ರೆಮಜಲು, ಧನಂಜಯ ನಟ್ಟಿಬೈಲ್, ಮಾಜಿ ಸದಸ್ಯರಾದ ರಾಜಗೋಪಾಲ ಹೆಗ್ಡೆ, ಚಂದ್ರಶೇಖರ ನಟ್ಟಿಬೈಲ್, ಬಜತ್ತೂರು ಗ್ರಾ.ಪಂ. ಸದಸ್ಯ ಸಂತೋಷ್ ಕುಮಾರ್ ಪಂರ್ದಾಜೆ, ಹಿರೇಬಂಡಾಡಿ ಗ್ರಾ.ಪಂ. ಸದಸ್ಯ ಸದಾನಂದ ಶೆಟ್ಟಿ, ಪ್ರಮುಖರಾದ ಉಮೇಶ್ ಶೆಣೈ ಎನ್., ವಿದ್ಯಾಧರ ಜೈನ್, ಹರೀಶ್ ನಾಯಕ್ ನಟ್ಟಿಬೈಲು, ಕೃಷ್ಣ ಕೋಟೆ, ಡಾ. ಗೋವಿಂದ ಪ್ರಸಾದ ಕಜೆ, ವರದರಾಜ್, ಶರತ್ ಕೋಟೆ, ಗೆಳೆಯರು- 94 ಬಳಗದ ಜಗದೀಶ್ ಶೆಟ್ಟಿ, ಯು.ಜಿ.ರಾಧಾ, ರವಿಕಿರಣ್ ಕೊಯಿಲ, ವಾಮನ ಉಬಾರ್, ರವೀಶ್ ಎಚ್.ಟಿ., ಲೋಕೇಶ್ ಆಚಾರ್ಯ, ಪ್ರಕಾಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಗೆಳೆಯರು- 94 ಬಳಗದ ಅಧ್ಯಕ್ಷ ಗುಣಕರ ಅಗ್ನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಶೇಖರ ವಂದಿಸಿದರು. ಸುಧಾಕರ ಶೆಟ್ಟಿ ಗಾಂಧಿಪಾರ್ಕ್ ಕಾರ್ಯಕ್ರಮ ನಿರೂಪಿಸಿದರು.