ಪುತ್ತೂರು: ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಕನ್ಯಾನದ ಆತ್ಮಿಕಾ ಕುಟುಂಬಸ್ಥರಿಗೆ ನೆರವು ನೀಡುವಂತೆ ಆಗ್ರಹಿಸಿ ಶಾಸಕರ ಕಚೇರಿಗೆ ಮುತ್ತಿಗೆ ನಿರ್ಧಾರ ಕೈಗೊಂಡು ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯವರು ಶಾಸಕ ಸಂಜೀವ ಮಠಂದೂರು ಅವರ ಭರವಸೆಯ ಬಳಿಕ ಪ್ರತಿಭಟನೆ ಹಿಂಪಡೆದ ಘಟನೆ ಮಾ.13ರಂದು ನಡೆದಿದೆ.
ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ನೇತೃತ್ವದಲ್ಲಿ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಯಿತು. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಾರಾಡಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರೂ. 10 ಕೋಟಿ ಹಾಗೂ ವಿಟ್ಲ ಕಸಬಾ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಂಬೇಡ್ಕರ್ ಭವನಕ್ಕೆ ರೂ. 2 ಕೋಟಿ ಅನುದಾನ ಒದಗಿಸುವಂತೆ ಹಾಗು ಕನ್ಯಾನದಲ್ಲಿ ಸಾವಿಗೀಡಾದ ವಿದ್ಯಾರ್ಥಿನಿ ಆತ್ಮಿಕಾರವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವ ಭರವಸೆಯನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕಾಗಮಿಸಿದ ಶಾಸಕ ಸಂಜೀವ ಮಠಂದೂರು ಅವರು ಪ್ರತಿಭಟನಾನಿರತರನ್ನು ಉದ್ದೇಶಿಸಿ, ನಿಮಗೆಲ್ಲಾ ತಿಳಿದಿರುವಂತೆ ನಾಲ್ಕು ಗ್ರಾಮ ಪಂಚಾಯಿತಿಗಳಿಗೆ 4 ಅಂಬೇಡ್ಕರ್ ಭವನ ಮಂಜೂರಾಗಿದೆ. ಇದಕ್ಕಾಗಿ ತಲಾ ರೂ. 20 ಲಕ್ಷ ಅನುದಾನವೂ ಬಿಡುಗಡೆಗೊಂಡಿದೆ. ತಾಲೂಕು ಮಟ್ಟದ ಅಂಬೇಡ್ಕರ್ ಭವನಕ್ಕೆ ರೂ.50 ಲಕ್ಷ ಸರಕಾರ ಮಂಜೂರು ಮಾಡುತ್ತದೆ. ಈ ಅನುದಾನ ಮಂಜೂರಾಗಿದ್ದು, ಪುತ್ತೂರಿನಲ್ಲಿ ಸುವ್ಯವಸ್ಥಿತ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕೆಂಬುದು ನಮ್ಮ ಕನಸು. ಇದಕ್ಕಾಗಿ ಪಾರ್ಕಿಂಗ್ ವ್ಯವಸ್ಥೆಯೂ ಅಗತ್ಯ. ಇಷ್ಟೆಲ್ಲಾ ವ್ಯವಸ್ಥೆ ಕಲ್ಪಿಸಬೇಕಿದ್ದರೆ, ದೊಡ್ಡ ಅನುದಾನದ ಅಗತ್ಯವಿದೆ. ಈಗಾಗಲೇ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೂ ಮನವಿ ನೀಡಲಾಗಿದೆ. ಜೊತೆಗೆ ಸರಕಾರದ ಹಂತದಲ್ಲೂ ಮಾತುಕತೆ ನಡೆಯುತ್ತಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಪ್ರಕ್ರಿಯೆ ಸ್ವಲ್ಪ ನಿಧಾನವಾಗುತ್ತಿದೆ. ವಿಟ್ಲದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಬೇಡ್ಕರ್ ಭವನಕ್ಕೆ ಯಾವುದೇ ತೊಂದರೆಯಿಲ್ಲ.ಅನುದಾನವೂ ಮಂಜೂರಾಗಿದೆ. ಇದಕ್ಕೆ ಸ್ವಲ್ಪ ಅನುದಾನವನ್ನು ತಾನು ಸೇರಿಸುತ್ತೇನೆ. ಶೀಘ್ರದಲ್ಲಿ, ಸಾಧ್ಯವಾದರೆ ವಾರದೊಳಗೆ ಶಿಲಾನ್ಯಾಸ ನಡೆಸಲು ದಿನ ನಿಗದಿ ಮಾಡಲು ಸೂಚಿಸುತ್ತೇನೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಆತ್ಮಿಕಾ ಕುಟುಂಬಿಕರಿಗೆ ಸ್ಪಂದನೆ ನೀಡುತ್ತೇನೆ ಎಂದು ತಿಳಿಸಿದ್ದೇನೆ. ಅದರಂತೆ ನಾನು ಹಾಗೂ ಬಂಟ್ವಾಳ ಶಾಸಕರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಇಂತಹ ಘಟನೆಗಳಿಗೆ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಮಂಜೂರಾಗುವುದು ಕಷ್ಟ. ಆದ್ದರಿಂದ ಮುಖ್ಯಮಂತ್ರಿಗಳ ಜೊತೆ ಖುದ್ದಾಗಿ ಮಾತುಕತೆ ನಡೆಸಿ, ಪರಿಹಾರ ಕಲ್ಪಿಸಬೇಕಾಗುತ್ತದೆ ಎಂದರು. ಶಾಸಕರ ಭರವಸೆಯ ಮಾತಿಗೆ ದಲಿತ್ ಸೇವಾ ಸಮಿತಿಯವರು ಪ್ರತಿಭಟನೆ ಹಿಂಪಡೆದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಶಾಸಕರ ಜೊತೆಗಿದ್ದರು. ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ವಿಟ್ಲ, ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಸುಂದರ ನರಿಮೊಗರು ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ನಿರತರಾಗಿದ್ದರು.