ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮೂವರು ಸದಸ್ಯರಿಂದ ರಿಟ್
ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ ಇಲಾಖೆ, ಸಹಾಯಕ ಆಯುಕ್ತರು ಮತ್ತು ದ.ಕ.ಜಿಲ್ಲಾಧಿಕಾರಿ ಪ್ರತಿವಾದಿಗಳೂ ಪ್ರತಿವಾದಿಗಳಿಗೆ ನೊಟೀಸ್
ಇಂದು ವಿಚಾರಣೆ ಮುಂದುವರಿಕೆ
ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಕೆಲ ಸದಸ್ಯರು ಅಧಿಕಾರ ದುರುಪಯೋಗಪಡಿಸಿಕೊಂಡು ದೇವಸ್ಥಾನ ಮತ್ತು ಭಕ್ತಾದಿಗಳ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಾ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದು ಭಕ್ತಾದಿಗಳ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಂಡಿರುವುದರಿಂದ ಉತ್ತಮ ಆಡಳಿತ ನಿರ್ವಹಣೆಗಾಗಿ ದೇವಸ್ಥಾನಕ್ಕೆ ಆಡಳಿತಾಧಿಕಾರಿಯನ್ನು ನೇಮಕಗೊಳಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿರುವ ಕೆ.ಬಾಲಚಂದ್ರ ಗೌಡ ಕಡ್ಯ, ನಾರಾಯಣ ನಾಯ್ಕ್ ಕಾಳಿಂಗಹಿತ್ಲು ಮತ್ತು ಅವಿನಾಶ್ ಎಂ.ಇಂದಿರಾನಗರ ಇವರು ಹಿರಿಯ ವಕೀಲ ಎಸ್.ರಾಜಶೇಖರ್ ಅವರ ಮೂಲಕ ರಾಜ್ಯ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ ಇಲಾಖೆ, ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ ಇಲಾಖೆಯ ಮಂಗಳೂರು ಸಹಾಯಕ ಆಯುಕ್ತರು, ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು ದ.ಕ.ಜಿಲ್ಲಾಧಿಕಾರಿಯವರನ್ನು ಪ್ರತಿವಾದಿಗಳಾಗಿ ರಿಟ್ ಅರ್ಜಿಯಲ್ಲಿ ಕಾಣಿಸಲಾಗಿದೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಅವರು ಸಮಿತಿಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ದೇವಸ್ಥಾನ ಮತ್ತು ಭಕ್ತಾದಿಗಳ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ.ಸಮಿತಿಯ ಸದಸ್ಯರ ಗಮನಕ್ಕೆ ತಾರದೇ ತಾನೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.ಅವರು ಅಧಿಕಾರ ದುರುಪಯೋಗ ಮತ್ತು ದೇವಳದ ನಿಧಿಯ ದುರ್ಬಳಕೆ ಮಾಡುತ್ತಿದ್ದು ಸಮಿತಿಯು ಕಾನೂನು ಸಮ್ಮತ ರೀತಿಯಲ್ಲಿ ನಿರ್ವಹಣೆಯಾಗದೇ ದೇವಸ್ಥಾನದ ಹಿತಾಸಕ್ತಿಗೆ ವ್ಯತಿರಿಕ್ತವಾಗಿ ವರ್ತಿಸುತ್ತಾ ಭಕ್ತಾದಿಗಳ ನಡುವೆ ಭಿನ್ನಾಭಿಪ್ರಾಯ ಮೂಡಲು ಕಾರಣರಾಗಿದ್ದಾರೆ.ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿರುವ ಅಧ್ಯಕ್ಷರು ಅಕ್ರಮವೆಸಗಿದ್ದು ಸಂಸ್ಥೆಯ ಆಸ್ತಿ ದುರ್ಬಳಕೆ ಮಾಡಿರುವುದಲ್ಲದೆ ಅಧ್ಯಕ್ಷರು ಮತ್ತು ಕೆಲವು ಸದಸ್ಯರು ಸೇರಿಕೊಂಡು ಅಧಿಕಾರ ದುರುಪಯೋಗಪಡಿಸಿ ನ್ಯಾಯ ಮತ್ತು ಸಮಾನತೆಯ ವಿರುದ್ಧವಾಗಿ ವರ್ತಿಸುತ್ತಾ ದೇವಸ್ಥಾನ ಮತ್ತು ಭಕ್ತಾದಿಗಳ ನಂಬಿಕೆ ಕಳೆದುಕೊಂಡಿದ್ದು ದೇವಸ್ಥಾನ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.ಈ ಎಲ್ಲ ವಿಚಾರಗಳ ಕುರಿತು ಇಲಾಖೆಯ ಗಮನಕ್ಕೆ ತಂದಿದ್ದರೂ ಇಲ್ಲಿಯವರೆಗೆ ಯಾವುದೇ ಕಾನೂನು ಕ್ರಮಕೈಗೊಂಡಿಲ್ಲ.ಈ ನಿಟ್ಟಿನಲ್ಲಿ ಅರ್ಜಿಯ ಇತ್ಯರ್ಥವಾಗುವ ತನಕ ದೇವಳದಲ್ಲಿ ಸುಗಮ ಮತ್ತು ಪಾರದರ್ಶಕ ಆಡಳಿತದ ಉದ್ದೇಶದಿಂದ ಕೂಡಲೇ ಆಳಿತಾಧಿಕಾರಿಯನ್ನು ನೇಮಕಗೊಳಿಸಬೇಕು ಮತ್ತು ಅಲ್ಲಿಯವರೆಗೆ ವ್ಯವಸ್ಥಾಪನಾ ಸಮಿತಿ ಕಾರ್ಯನಿರ್ವಹಣೆಗೆ ಅವಕಾಶ ನೀಡಬಾರದು ಎಂದು ರಿಟ್ ಅರ್ಜಿಯಲ್ಲಿ ಕೋರಿದ್ದಾರೆ.
ಪ್ರತಿವಾದಿಗಳಿಗೆ ನೊಟೀಸ್-ಇಂದು ವಿಚಾರಣೆ:
ಮಾ.7ರಂದು ರಿಟ್ ಅರ್ಜಿ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದು ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಲು ಸೂಚಿಸಿ, ವಿಚಾರಣೆಯನ್ನು ಮಾ.೨೦ಕ್ಕೆ ಮುಂದೂಡಿದ್ದಾರೆ.ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆ, ಸಹಾಯಕ ಆಯುಕ್ತರು ಮತ್ತು ದ.ಕ.ಜಿಲ್ಲಾಧಿಕಾರಿಯವರ ಪರ ನೋಟೀಸ್ ಸ್ವೀಕರಿಸಲು ಎಡಿಷನಲ್ ಅಡ್ವೊಕೇಟ್ ಜನರಲ್ ಅವರಿಗೆ ನಿರ್ದೇಶಿಸಿದ್ದು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಪರ ವಕೀಲ ವಿ.ಜಿ.ಭಾನುಪ್ರಕಾಶ್ ಅವರು ನೋಟೀಸ್ ಸ್ವೀಕರಿಸಲು ಒಪ್ಪಿಗೆ ಸೂಚಿಸಿದ್ದಾರೆ.ಮಾ.೨೦ರಂದು ವಿಚಾರಣೆ ಮುಂದುವರಿಯಲಿದೆ.