ಉಪ್ಪಿನಂಗಡಿ ಗ್ರಾಮಕ್ಕೆ 39 ಕೋ.ಯಷ್ಟು ಅನುದಾನ: ಮಠಂದೂರು
ಉಪ್ಪಿನಂಗಡಿ: ಮುಂದಿನ 35 ವರ್ಷಗಳ ಭವಿಷ್ಯದ ಅಭಿವೃದ್ಧಿಯ ಚಿಂತನೆಯನ್ನು ಮುಂದಿಟ್ಟುಕೊಂಡು ನನ್ನ ಶಾಸಕತ್ವದ ಅವಧಿಯಲ್ಲಿ ಪುತ್ತೂರು ವಿಧಾನ ಸಭಾಕ್ಷೇತ್ರದ ಸಮಗ್ರ ಅಭಿವೃದ್ಧಿ ಕೆಲಸಗಳು ನಡೆದಿದ್ದು, ಉಪ್ಪಿನಂಗಡಿ ಗ್ರಾಮವೊಂದಕ್ಕೆ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ 39 ಕೋಟಿಯಷ್ಟು ಅನುದಾನವನ್ನು ನೀಡಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಶಾಸಕರ ಅನುದಾನದಿಂದ ಉಪ್ಪಿನಂಗಡಿ ಗ್ರಾಮದಲ್ಲಿ ಮಾಡಲಾಗುವ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಮಾಡಲ್ಪಟ್ಟ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾ.30ರಂದು ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಹೋಬಳಿ ಕೇಂದ್ರವಾದ ಉಪ್ಪಿನಂಗಡಿಯಲ್ಲಿ ಎಲ್ಲಾ ಸರಕಾರಿ ಕಚೇರಿಗಳು ಸ್ವಂತ ಕಟ್ಟಡದಲ್ಲಿ ಇರಬೇಕೆಂದು ಆಶಯ ಇಟ್ಟುಕೊಂಡ ನಾನು ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಕಚೇರಿಗಳನ್ನು ಸ್ವಂತ ಕಟ್ಟಡಕ್ಕೆ ತಂದಿದ್ದೇನೆ. ಈಗಾಗಲೇ ಅರಣ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆಗೆ ಸೇರಿದ ಕಟ್ಟಡಗಳಲ್ಲದೇ, ನಾಡ ಕಚೇರಿ, ರೈತ ಸಂಪರ್ಕ ಕೇಂದ್ರದ ಉದ್ಘಾಟನೆ ನಡೆದಿದೆ. ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್‌ಗಳನ್ನು ಒದಗಿಸಿದ್ದೇನೆ. ಇಲ್ಲಿನ ಪ್ರಾಥಮಿಕ, ಪ್ರೌಢಶಾಲೆಗಳು, ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ತರಗತಿ ಕೊಠಡಿ ನಿರ್ಮಾಣಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದ್ದೇನೆ. ನದಿ ಸವಕಳಿಯನ್ನು ತಡೆಗಟ್ಟುವ ಸಲುವಾಗಿ ತಡೆಗೋಡೆ ನಿರ್ಮಾಣಕ್ಕೂ ಕೋಟಿಗಳ ಲೆಕ್ಕದಲ್ಲಿ ಅನುದಾನಗಳನ್ನು ನೀಡಿದ್ದೇನೆ. ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ದಿ ಪಡಿಸಿದ್ದಲ್ಲದೆ, ಉಪ್ಪಿನಂಗಡಿಯ ಎಲ್ಲಾ ರಸ್ತೆಗಳಿಗೂ ಡಾಮರು ಕಾಮಗಾರಿ, ಕಾಂಕ್ರೀಟು ಕಾಮಗಾರಿಗೆ ಅನುದಾನ ನೀಡಿದ್ದೇನೆ. ಇನ್ನು ಕೊಳಚೆ ನೀರು ನದಿ ಸೇರುವುದನ್ನು ತಪ್ಪಿಸುವುದಕ್ಕಾಗಿ ಉಪ್ಪಿನಂಗಡಿ ಪೇಟೆಯಲ್ಲಿ ಒಳಚರಂಡಿ ನಿರ್ಮಾಣದ ಯೋಜನೆ ರೂಪಿಸಿದ್ದು, ಈಗಾಗಲೇ 5 ಕೋಟಿಯ ಡಿಪಿಆರ್ ಆಗಿದೆ. ಒಟ್ಟಿನಲ್ಲಿ ಮುಂದಕ್ಕೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಘೋಷಣೆಯಾದರೂ, ಆಗ ಅಗತ್ಯವಿರುವ ಅಭಿವೃದ್ಧಿ ಕೆಲಸಗಳೆಲ್ಲಾ ನನ್ನ ಶಾಸಕತ್ವದ ಅವಧಿಯಲ್ಲಿ ಮಾಡಿದ್ದೇನೆ. ಈ ಮೂಲಕ ಜನರಿಗೆ ಕೊಟ್ಟ ಭರವಸೆಯಲ್ಲಿ ಶೇ.೯೦ ಭರವಸೆಗಳನ್ನು ಈಡೇರಿಸಿದ್ದೇನೆ ಎಂಬ ತೃಪ್ತಿ ನನಗಿದೆ ಎಂದರಲ್ಲದೆ, ಉಪ್ಪಿನಂಗಡಿಯಲ್ಲಿ ನೂತನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ನಿರ್ಮಿಸಬೇಕೆಂಬ ಕನಸು ನನ್ನದಾಗಿದ್ದು, ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ಆದರೆ ಸ್ಥಳವಕಾಶದ ಕೊರತೆಯಿಂದ ಅದು ನನಸಾಗಿಲ್ಲ ಎಂದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಉಪ್ಪಿನಂಗಡಿ- ಹಿರೇಬಂಡಾಡಿ- ಕೊಲ- ಅಲಂತಾಯ- ನೆಲ್ಯಾಡಿ ಜಿಲ್ಲಾ ಮುಖ್ಯ ರಸ್ತೆಯ ಆಯ್ದ ಭಾಗಗಳಲ್ಲಿ ಅಗಲೀಕರಣ ಹಾಗೂ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನವನ್ನು ನಾನು ತಂದಿದ್ದು, ಈ ದಿನ ಇದರ ಗುದ್ದಲಿ ಪೂಜೆ ಸೇರಿದಂತೆ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ 12 ಕೊಠಡಿಗಳ ನಿರ್ಮಾಣಕ್ಕೆ 3 ಕೋಟಿ 60 ಸಾವಿರ ರೂ. ಅನುದಾನ ನೀಡಿದ್ದು, ಅದರಲ್ಲಿ ಈಗಾಗಲೇ ನಿರ್ಮಾಣವಾದ 6 ಕೊಠಡಿಗಳ ಉದ್ಘಾಟನೆ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ, ಮೂರು ಕೋಟಿ ಅರುವತ್ತು ಸಾವಿರ ರೂಪಾಯಿಯಲ್ಲಿ ನಿರ್ಮಾಣವಾಗುತ್ತಿರುವ ಪದವಿ ಪೂರ್ವ ಕಾಲೇಜಿನ 12 ಕೊಠಡಿಗಳಿಗೆ ಶಿಲಾನ್ಯಾಸ, 3ಕೋಟಿ 26 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ನೂತನ ವಿದ್ಯಾರ್ಥಿನಿಲಯ ಕಟ್ಟಡಕ್ಕೆ ಶಿಲಾನ್ಯಾಸ, ಒಟ್ಟು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ರೈತ ಸಂಪರ್ಕ ಕೇಂದ್ರದ ಹಾಗೂ 18.84 ಲಕ್ಷ ರೂ.ನಲ್ಲಿ ನಿರ್ಮಾಣವಾದ ನಾಡಕಚೇರಿಗಳ ಉದ್ಘಾಟನೆಯನ್ನು ನೆರವೇರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಹಿರಿಯ ನಾಗರಿಕರ ಪ್ರಕೋಷ್ಟದ ಸಂಚಾಲಕರಾದ ಎನ್. ಉಮೇಶ್ ಶೆಣೈ, ಬಿಜೆಪಿಯ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುರೇಶ್ ಅತ್ರೆಮಜಲು, ಗ್ರಾ.ಪಂ. ಸದಸ್ಯರಾದ ಧನಂಜಯ ನಟ್ಟಿಬೈಲು, ತೌಸೀಫ್ ಯು.ಟಿ., ಲೊಕೇಶ್ ಬೆತ್ತೋಡಿ, ಸಂಜೀವ ಮಡಿವಾಳ, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷರಾದ ಪ್ರಸಾದ್ ಕೆ.ವಿ., ನಿರ್ದೇಶಕರಾದ ಯಶವಂತ ಗುಂಡ್ಯ, ಯತೀಶ್ ಶೆಟ್ಟಿ, ಸುಜಾತ ರೈ ಅಲಿಮಾರ್, ಮಾಜಿ ನಿರ್ದೇಶಕ ರಾಮಚಂದ್ರ ಮಣಿಯಾಣಿ, ಬಿಎಸ್ಸೆಫ್‌ನ ನಿವೃತ ಡೆಪ್ಯೂಟಿ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ಭಾರತೀಯ ಭೂ ಸೇನೆಯ ನಿವೃತ ಹವಾಲ್ದಾರ್ ವಿಶ್ವನಾಥ ಶೆಣೈ, ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ಹಮ್ಮಬ್ಬ ಶೌಕತ್ ಅಲಿ, ಸದಾನಂದ ಶೆಟ್ಟಿ, ನಿತಿನ್ ತಾರಿತ್ತಡಿ, ಬಜತ್ತೂರು ಗ್ರಾ.ಪಂ. ಸದಸ್ಯ ಸಂತೋಷ್ ಕುಮಾರ್ ಪಂರ್ದಾಜೆ, ಗಂಗಾಧರ ಗೌಡ, ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷ ರಾಮಚಂದ್ರ ಪೂಜಾರಿ, ಪ್ರಮುಖರಾದ ಹರೀಶ್ ನಾಯಕ್ ನಟ್ಟಿಬೈಲ್, ಕೈಲಾರು ರಾಜಗೋಪಾಲ ಭಟ್, ಜಗದೀಶ್ ಶೆಟ್ಟಿ, ಚಂದ್ರಶೇಖರ ಮಡಿವಾಳ, ಸುಜಾತಕೃಷ್ಣ, ವಿಶ್ವನಾಥ ಶೆಟ್ಟಿ ಕಂಗ್ವೆ, ಸದಾನಂದ ನೆಕ್ಕಿಲಾಡಿ, ಜಗದೀಶ್ ಕುಮಾರ್ ಪರಕಜೆ, ದೀಪಕ್ ಪೈ ಮತ್ತಿತರರು ಇದ್ದರು.