ಬೆಟ್ಟಂಪಾಡಿ: ನಿಡ್ಪಳ್ಳಿ ಬ್ರಹ್ಮರಗುಂಡ ನಿವಾಸಿ ಪದ್ಮನಾಭ ಪ್ರಭು (78 ವ.) ಎಂಬವರಿಗೆ ಕಾಡುಕೋಣ ತಿವಿದು ಗಂಭೀರಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಾ. 26 ರಂದು ಬೆಳಿಗ್ಗೆ ನಡೆದಿದೆ. ಪದ್ಮನಾಭ ಪ್ರಭುರವರು ಬೆಳಿಗ್ಗೆ ಸುಮಾರು 8.00 ಗಂಟೆಯ ವೇಳೆಗೆ ತನ್ನ ತೋಟಕ್ಕೆಂದು ಹೋಗುತ್ತಿದ್ದಾಗ ದಿಢೀರನೆ ಪ್ರತ್ಯಕ್ಷವಾದ ಒಂಟಿ ಕಾಡುಕೋಣ ಅವರಿಗೆ ತಿವಿದಿದೆ.
ತಿವಿದ ತೀವ್ರತೆಗೆ ಅವರ ಕಾಲು ತುಂಡಾಗಿದ್ದು, ತೊಡೆ ಭಾಗದಲ್ಲಿ ಕೋಣದ ಕೊಂಬು ಹೊಕ್ಕಿ ಗಂಭೀರಗೊಂಡಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣ ಅವರನ್ನು ನಿಡ್ಪಳ್ಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪದ್ಮನಾಭ ಬೋರ್ಕರ್ ಬ್ರಹ್ಮರಗುಂಡರವರು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೆರವಾಗಿದ್ದಾರೆ. ಪುತ್ತೂರಿನ ದರ್ಬೆ ಹಿತ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಭಾಗದಲ್ಲಿ ಇತ್ತೀಚೆಗೆ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು ಇಲ್ಲಿಯವರೆಗೆ ಕೃಷಿ ಬೆಳೆಗಳನ್ನು ಹಾನಿಗೈಯುತ್ತಿತ್ತು. ಆದರೆ ಇದೀಗ ಮನುಷ್ಯರನ್ನೂ ತಿವಿದು ಉಪದ್ರವ ಕೊಡುತ್ತಿರುವುದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಪ್ರಾಣ ಹಾನಿ ಸಂಭವಿಸುವ ಮೊದಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.