ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅಪೇಕ್ಷೆಯಿಂದ ಸುದ್ದಿ ಪತ್ರಿಕೆಗಳ ಸಂಪಾದಕ ಸ್ಥಾನದಿಂದ ನಿವೃತ್ತಿ

0

ಸುಳ್ಯಕ್ಕೆ: ಹರೀಶ್ ಬಂಟ್ವಾಳ, ಪುತ್ತೂರಿಗೆ ಕರುಣಾಕರ್ ರೈ, ಬೆಳ್ತಂಗಡಿಗೆ ಸಂತೋಷ್ ಶಾಂತಿನಗರ

1985ರಿಂದ ಸುಳ್ಯದಲ್ಲಿ 1986ರಿಂದ ಬೆಳ್ತಂಗಡಿಯಲ್ಲಿ 1988ರಿಂದ ಪುತ್ತೂರಿನಲ್ಲಿ ಸುದ್ದಿ ಬಿಡುಗಡೆ ಪ್ರತ್ಯೇಕ ಪ್ರತ್ಯೇಕ ಪತ್ರಿಕೆಗಳ ಮ್ಹಾಲಕನಾಗಿ, ಎಟೆಂಡರ್‌ನಿಂದ ಹಿಡಿದು ಸಂಪಾದಕನವರೆಗೆ ಎಲ್ಲಾ ಕೆಲಸಗಳನ್ನು ನಿರ್ವಹಿಸಿದ್ದೇನೆ. ಪ್ರಾರಂಭದಲ್ಲಿ ಪತ್ರಿಕೆ ಮುದ್ರಣ ಆಗುವವರೇಗೆ ಪತ್ರಿಕಾಲಯದಲ್ಲಿದ್ದು, ವರದಿಗಾರನ ಕೆಲಸ, ಮುದ್ರಣದ ಕೆಲಸ, ಜಾಹೀರಾತುದಾರನ, ಚಂದಾ ಸಂಗ್ರಹದ, ಪತ್ರಿಕೆ ವಿತರಣೆ, ಪತ್ರಿಕಾ ಮುದ್ರಣದ ಎಲ್ಲಾ ಕೆಲಸಗಳೊಂದಿಗೆ ಪೇಪರ್ ಬಂಡಲ್ ಮಾಡಿ ಸಾಗಿಸುವವರೆಗೂ ಕೆಲಸ ಮಾಡಿದ್ದ ಅನುಭವ ಇದೆ. ಸುಳ್ಯದ ಅಂಬಿಕಾ ಪ್ರೆಸ್‌ನಲ್ಲಿ ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆ ಮುದ್ರಣಗೊಳ್ಳುತ್ತಿದ್ದ ಸಂದರ್ಭದಲ್ಲಿ ರಾತ್ರಿ ಪ್ರಿಂಟ್ ಆದ ಪತ್ರಿಕೆಯನ್ನು ಗಾಂಧಿನಗರದಿಂದ ಬಸ್‌ನಲ್ಲಿ ಪುತ್ತೂರಿಗೆ ವಿತರಣೆಗೆ ತಂದಿದ್ದೇನೆ. ಬಸ್ ಸಿಗದಾಗ ಮದ್ರಾಸ್‌ನಿಂದ ರಾತ್ರಿ 2 ಗಂಟೆಯ ಮೇಲೆ ಬರುತ್ತಿದ್ದ ಹಾಲಿನ ಲಾರಿಯಲ್ಲಿ ಅದರ ಕ್ಯಾನ್‌ಗಳ ಮೇಲೆ ಕುಳಿತುಕೊಂಡು ಸುಳ್ಯದಿಂದ ಪುತ್ತೂರಿಗೆ ತಂದು ಬೆಳಿಗ್ಗೆ ವಿತರಣೆಗೆ ನೀಡಿದ್ದ ಕಾಲ ಇತ್ತು. ಪುತ್ತೂರಿನಲ್ಲಿ ಹುಸೈನ್‌ರವರ ಕೆನರಾ ಪ್ರೆಸ್‌ನಲ್ಲಿ ಮುದ್ರಣವಾಗುತ್ತಿದ್ದ ಸಮಯದಲ್ಲಿ ವಿದ್ಯುತ್‌ನ ಅಭಾವ ಬಂದಾಗ ವರದಿಗಾರರನ್ನು, ಸಿಬ್ಬಂದಿಗಳನ್ನು, ಜನರನ್ನು ಸೇರಿಸಿ ಮೆಷಿನ್‌ನನ್ನು ದೂಡಿ ಮುದ್ರಿಸಿದ್ದೂ ಇತ್ತು. ಮಂಗಳೂರಿಗೆ ಆಫ್‌ಸೆಟ್ ಪ್ರಿಂಟ್‌ಗೆ ಹೋದಾಗ ತಡವಾದ ಕಾರಣಕ್ಕೆ ಅಂದು ಮುದ್ರಣವಾಗುತ್ತಿರಲಿಲ್ಲ. ರಾತ್ರಿ ಇಡೀ ಅಲ್ಲೇ ಕಳೆದು ನಮ್ಮ ಸಿಬ್ಬಂದಿಗಳು ಬೆಳಿಗ್ಗೆ ಪತ್ರಿಕೆಯನ್ನು ಮುದ್ರಿಸಿ ತಂದ ಸಂದರ್ಭಗಳಲ್ಲಿ ಕೆಲವೊಮ್ಮೆ ಅವರಿಗೆ ಪ್ರೋತ್ಸಾಹವಾಗಿ ಅವರೊಡನೆ ಸೇರಿಕೊಂಡದ್ದೂ ಇತ್ತು. ಪತ್ರಿಕಾ ವಿತರಣೆಗೆ ಏಜೆಂಟರನ್ನು ಮಾಡುವ ಸಂದರ್ಭಗಳಲ್ಲಿ ಮೂರು ತಾಲೂಕಿನಲ್ಲಿಯೂ ಸರಿಯಾದ ರಸ್ತೆಗಳಿಲ್ಲದ ಊರುಗಳಲ್ಲಿಯೂ ಮತ್ತು ಯಾವುದೇ ಫೋನ್ ಸಂಪರ್ಕವಿಲ್ಲದ ಅಂತಹ ಸಮಯದಲ್ಲಿ ಎಲ್ಲಾ ಕಡೆ ತಿರುಗಿ ಏಜೆಂಟರನ್ನು ಮಾಡುವ ಹುಡುಗರಿಗೆ ಸಾಥ್ ನೀಡಿದ್ದು ಉಂಟು. ಆ ಎಲ್ಲಾ ಸಂದರ್ಭಗಳಲ್ಲಿ ಅಂದು ನನ್ನೊಂದಿಗಿದ್ದ ಸಿಬ್ಬಂದಿಗಳು ಸೇರಿ ನನ್ನ ಎಲ್ಲಾ ಕೆಲಸಗಳಿಗೂ ತಮ್ಮದೇ ಪತ್ರಿಕೆಯೆಂದು ನನಗಿಂತಲೂ ಹೆಚ್ಚು ಕೆಲಸ ಮಾಡಿದ್ದಾರೆ ಮತ್ತು ಯಶಸ್ವಿಗೆ ಕಾರಣರಾಗಿದ್ದಾರೆ. ಪತ್ರಿಕಾ ಸಂಪಾದಕನಾಗಿ ಮಾಡಿದ ಒಳ್ಳೆಯ ಕೆಲಸಗಳಿಂದ ಮತ್ತು ಎಡವಟ್ಟುಗಳಿಂದ ಜನರ ಪ್ರೀತಿಯನ್ನು, ಬೈಗುಳಗಳನ್ನು ಪಡೆದದ್ದುಂಟು. ಪತ್ರಿಕೆ ಬೆಳೆದಂತೆ ಎಲ್ಲಾ ವಿಭಾಗಗಳಿಗೆ ಜನರು ಸೇರಿಕೊಂಡು ಪತ್ರಿಕೆಯನ್ನು ರಾಜ್ಯಕ್ಕೆ ಮಾದರಿ ಗ್ರಾಮೀಣ ಪತ್ರಿಕೆಯಾಗಿ ಬೆಳೆಸಿದ್ದಾರೆ. ಈಗ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನ ಎಲ್ಲಾ ಕಛೇರಿಗಳಲ್ಲಿ, ಎಲ್ಲಾ ವಿಭಾಗದಲ್ಲಿ ಸಾಕಷ್ಟು ಜನರು, ಪರಿಣಿತರು ಕೆಲಸ ಮಾಡುತ್ತಿದ್ದಾರೆ.

ಜನರ ಮಾಹಿತಿ ಮತ್ತು ಜನರಪರ ಆಂದೋಲನಗಳು ನಮ್ಮನ್ನು ಬೆಳೆಸಿದೆ:

ನಮ್ಮ ಪುತ್ತೂರು, ಸುಳ್ಯ, ಬೆಳ್ತಂಗಡಿ ಪತ್ರಿಕೆಗಳಲ್ಲಿ ಯಾರದ್ದೇ ವರದಿ ಬಂದರೂ, ಯಾರೇ ವಿರೋಧ ಮಾಡಿದರೂ ಹಾಕುವ ಛಾತಿಯನ್ನು ಬೆಳೆಸಿಕೊಂಡು ಬಂದಿದ್ದೇವೆ. ನಿಷ್ಪಕ್ಷಪಾತವಾಗಿ ಯಾವುದೇ ಜಾತಿ, ಧರ್ಮದ ಕಡೆ ವಾಲದೆ ಜನಪರವಾಗಿ ವರದಿ ಮಾಡಿದ್ದೇವೆ. ಗ್ರಾಮ ಗ್ರಾಮಗಳ ಎಲ್ಲಾ ಮದುವೆ, ಸಾವು, ಗೃಹ ಪ್ರವೇಶ, ನಾಮಕರಣ, ಜಾತ್ರೆ, ಶಾಲಾ ಚಟುವಟಿಕೆ, ಪಂಚಾಯತ್ ಸುದ್ದಿಗಳನ್ನು, ಸಂಘ ಸಂಸ್ಥೆಗಳ ವರದಿಗಳನ್ನು, ಇಲಾಖಾ ಮಾಹಿತಿಯನ್ನು ನಿತ್ಯ ನಡೆಯುವ ಚಟುವಟಿಕೆಗಳನ್ನು, ಗ್ರಾಮ ಸಭೆಗಳಲ್ಲಿ ಎಲ್ಲರ ಅಭಿಪ್ರಾಯಗಳು ಪತ್ರಿಕೆಯಲ್ಲಿ ಬರುವಂತೆ ಮಾಡಿದ್ದೇವೆ. ಅಧಿಕಾರಿಗಳ, ಜನಪ್ರತಿನಿಧಿಗಳ ಕಾರ್ಯಕ್ರಮಗಳನ್ನು, ವೇಳಾಪಟ್ಟಿಗಳನ್ನು ಪ್ರಕಟಿಸಿ ಜನರನ್ನು ವಿನಾಕಾರಣ ಅಲೆದಾಡುವ ಪರಿಸ್ಥಿತಿಯಿಂದ ತಪ್ಪಿಸಿದ್ದೇವೆ. ಸಾಕ್ಷರತಾ ಆಂದೋಲನದ ಸಂದರ್ಭದಲ್ಲಿ ಮನೆ ಮನೆಗೆ ಕಲಿಕೆಗೆ ಪತ್ರಿಕೆ ವಿತರಿಸಿ, ನವ ಸಾಕ್ಷರರ ಸುದ್ದಿಗಳನ್ನು ಪ್ರಕಟಿಸಿದ್ದೇವೆ. ಬಲಾತ್ಕಾರದ ಬಂದ್ ವಿರುದ್ಧದ, ಸಾಮಾಜಿಕ ಜಾಲತಾಣದ ದುರುಪಯೋಗ ವಿರುದ್ಧದ, ಲಂಚ-ಭ್ರಷ್ಟಾಚಾರದ ವಿರುದ್ಧದ ಹೋರಾಟಗಳು ಮುಂತಾದ ಅನೇಕ ಜನಪರ ಆಂದೋಲನಗಳನ್ನು ನಡೆಸಿದ್ದೇವೆ. ಉತ್ತಮ ಸೇವೆ ಮಾಡುವ ಅಧಿಕಾರಿಗಳನ್ನು ಗುರುತಿಸುವ ಕಾರ್ಯಕ್ರಮಗಳು ನಡೆದಿವೆ. ಕೃಷಿ ಮೇಳ, ಶಿಕ್ಷಣ ಮೇಳ, ಉದ್ಯೋಗ ಮಾಹಿತಿ, ಪರವೂರಿನಲ್ಲಿರುವ ಪುತ್ತೂರು, ಬೆಳ್ತಂಗಡಿ, ಸುಳ್ಯದವರ ಮಾಹಿತಿ ಮತ್ತು ಪರಿಚಯ ಹಾಕಿ, ಅವರಿಗೂ ಊರಿಗೂ ಸಂಪರ್ಕ ಬೆಳೆಸಿದ್ದೇವೆ, ಸಂಬಂಧವನ್ನು ಬೆಸೆದಿದ್ದೇವೆ. ಸಭೆ ಸಮಾರಂಭಗಳಲ್ಲಿ ಸ್ವಾಗತ ಮಾಡುವವರನ್ನೂ, ನಿರೂಪಣೆ ಮಾಡುವವರನ್ನೂ, ವಂದನಾರ್ಪಣೆ ಮಾಡುವವರನ್ನೂ ವೇದಿಕೆಯಲ್ಲಿ ಹಾಗೂ ವೇದಿಕೆಯ ಮುಂಭಾಗದಲ್ಲಿ ಉಪಸ್ಥಿತರಿದ್ದವರನ್ನೂ ಗುರುತಿಸುವುದಲ್ಲದೆ ಊಟ ಮತ್ತಿತರ ಎಲ್ಲಾ ವ್ಯವಸ್ಥೆಯ ಬಗ್ಗೆ ಪತ್ರಿಕೆಯಲ್ಲಿ ಬರೆದು ಸಂಘಟಕರಿಗೆ, ಅವರ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಮತ್ತು ಪ್ರಚಾರ ನೀಡಿದ್ದೇವೆ.

ಜಗತ್ತಿನಾದ್ಯಂತ ಆಯಾ ತಾಲೂಕಿನವರು ಓದುವ ನಂ.1 ಪತ್ರಿಕೆಯಾಗಿದೆ:

ಈ ಮೇಲಿನ ಎಲ್ಲಾ ಕಾರಣಗಳಿಂದ ಸುದ್ದಿ ಪತ್ರಿಕೆ ಸುಳ್ಯದಲ್ಲಿ ‘ಸುಳ್ಯದವರ ಸುದ್ದಿ ಪತ್ರಿಕೆ’ಯಾಗಿ, ಬೆಳ್ತಂಗಡಿಯಲ್ಲಿ ‘ಬೆಳ್ತಂಗಡಿಯವರ ಸುದ್ದಿ ಪತ್ರಿಕೆ’ಯಾಗಿ, ಪುತ್ತೂರಿನಲ್ಲಿ ‘ಪುತ್ತೂರಿನವರ ಸುದ್ದಿ ಪತ್ರಿಕೆ’ಯಾಗಿ ಬೆಳೆದಿದೆ. ಇಂದು ಪತ್ರಿಕೆ ವಿಶಾಲವಾಗಿ ಬೆಳೆದಿದೆ. ಜಗತ್ತಿನಾದ್ಯಂತ ಇರುವ ಪುತ್ತೂರು ಸುಳ್ಯ, ಬೆಳ್ತಂಗಡಿಯವರು ಓದುವ ಅತ್ಯಂತ ಪ್ರಸಾರದ ಪತ್ರಿಕೆ ಇದಾಗಿದ್ದು, ಆಯಾ ತಾಲೂಕಿನಲ್ಲಿ ನಂಬರ್ 1 ಪತ್ರಿಕೆಯಾಗಿ ಪರಿಗಣಿಸಲ್ಪಟ್ಟಿದೆ. ತಂತ್ರಜ್ಞಾನದ ಅನುಕೂಲದಿಂದ ಸುದ್ದಿ ವೆಬ್‌ಸೈಟ್‌ನಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ದೇಶ ವಿದೇಶಗಳಲ್ಲಿ ಪ್ರಸಾರಗೊಳ್ಳುತ್ತಿದೆ. ಸುದ್ದಿ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್, ಸ್ಟುಡಿಯೋ ಇರುವುದರಿಂದ ಕಾರ್ಯಕ್ರಮದ ನೇರಪ್ರಸಾರಗಳು, ಸ್ಟುಡಿಯೋ ಪ್ರೋಗ್ರಾಮ್‌ಗಳು, ಫೋನ್ ಇನ್ ಕಾರ್ಯಕ್ರಮಗಳು ನಡೆದಿವೆ. ಪಂಚಾಯತ್ ಎಲೆಕ್ಷನ್ ಸಂದರ್ಭಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಘಟನೆಗಳು ನೇರವಾಗಿ ಪ್ರಸಾರಗೊಳಿಸಿದ್ದೇವೆ.

ಅಂದು ವಿರೋಧಿಸಿದವರು ಇಂದು ಸ್ನೇಹಿತರು, ಪ್ರೋತ್ಸಾಹಕರೂ ಆಗಿದ್ದಾರೆ :

ಸುದ್ದಿಯ ಸಂಪಾದನೆಯಲ್ಲಿ ನಾವು ಎಂದೂ ಅಡ್ಡ ದಾರಿ ಹಿಡಿಯಲಿಲ್ಲ. ವರದಿಗಳನ್ನು ಮಾರಿಕೊಳ್ಳಲಿಲ್ಲ. ರೋಲ್ ಕಾಲ್, ಬ್ಲ್ಯಾಕ್‌ಮೇಲ್ ಮಾಡಲಿಲ್ಲ. ನಿಷ್ಪಕ್ಷಪಾತ ವರದಿ ಎಷ್ಟೋ ಸಲ ಸಂಪಾದನೆಗೆ ಕಡಿವಾಣ ಹಾಕಿದೆ. ಜಾಹೀರಾತು ಕಡಿಮೆ ಮಾಡಿದೆ. ಎಷ್ಟೋ ಸಲ ತೊಂದರೆ ಅನುಭವಿಸಿದ್ದರೂ ಪತ್ರಿಕೆಗಳನ್ನು ನಿಲ್ಲಿಸಿ, ಪ್ರತಿಭಟಿಸಿ ಮತ್ತೆ ಮುಂದುವರೆಸುವ ಸಂದರ್ಭ ಬಂದಿದ್ದರೂ ನಾನು ಮತ್ತು ನನ್ನ ವರದಿಗಾರರು, ಸಿಬ್ಬಂದಿಗಳು ನೇರ ದಾರಿಯಿಂದ ಹಿಂದೆ ಸರಿಯಲಿಲ್ಲ. ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಮಾತ್ರವಲ್ಲ ನಮ್ಮ ಪತ್ರಕರ್ತರಲ್ಲಿ ಯಾರಿಗೂ ತಾವು ಪತ್ರಕರ್ತರು ಆದ್ದರಿಂದ ಎಲ್ಲಾ ತಿಳಿದವರು, ಮೇಧಾವಿಗಳು, ಏನೂ ಬರೆದರೂ ನಡೆಯುತ್ತದೆ, ನಮಗೆ ವಿಶೇಷ ಗೌರವ, ಸೌಲಭ್ಯ ದೊರಕಬೇಕೆಂಬ ಅಹಂಕಾರವಿಲ್ಲ. ಅವರೆಲ್ಲಾ ಅತ್ಯಂತ ಸರಳ, ನೇರ ಮತ್ತು ಸ್ನೇಹಪರ ವ್ಯಕ್ತಿಗಳಾಗಿದ್ದಾರೆ. ಈ ಕಾರಣಕ್ಕೆ ಸುದ್ದಿ ಪತ್ರಿಕೆ ಜನರ ಪತ್ರಿಕೆಯಾಗಿ ಬೆಳೆದಿದೆ. ನಮ್ಮ ವಿರೋಧಿಗಳು ಮತ್ತು ಬೇರೆ ಬೇರೆ ಕಾರಣಕ್ಕೆ ವಿರೋಧ ಕಟ್ಟಿಕೊಂಡವರು ಹಿಂದಿನದನ್ನು ಮರೆತು ಸ್ನೇಹದ ಹಸ್ತ ಚಾಚಿದ್ದಾರೆ, ಪ್ರೋತ್ಸಾಹಕರಾಗಿದ್ದಾರೆ. ವರದಿಯ ಕಾರಣಕ್ಕೆ ನಮ್ಮ ಮುಖ್ಯ ವರದಿಗಾರ ಹರೀಶ್ ಬಂಟ್ವಾಳರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳು ಅವರಲ್ಲಿ ಆ ಬಗ್ಗೆ ವಿಷಾದ ವ್ಯಕ್ತಪಡಿಸಿ ಸ್ನೇಹಿತರಾಗಿದ್ದಾರೆ ಎಂಬುದು ಅದಕ್ಕೊಂದು ಉತ್ತಮ ನಿದರ್ಶನ. ಒಂದು ಸಮಯದಲ್ಲಿ ಸುದ್ದಿಯನ್ನು, ನನ್ನನ್ನು, ಸಿಬ್ಬಂದಿಗಳನ್ನು ವಾಚಾಮಗೋಚರವಾಗಿ, ಅವಾಚ್ಯವಾಗಿ ನಿಂದಿಸುತ್ತಿದ್ದ ವ್ಯಕ್ತಿಗಳು ಇಂದು ನಮ್ಮ ವಿರೋಧಿಗಳಾಗಿ ಉಳಿದಿಲ್ಲ. ಯಾಕೆಂದರೆ ನಾವು ಎಂದೂ ನಮ್ಮ ತಪ್ಪುಗಳನ್ನು ಸಮರ್ಥಿಸಿಕೊಂಡಿರುವುದಿಲ್ಲ, ತಪ್ಪುಗಳಾದಾಗ ತಿದ್ದಿಕೊಂಡಿದ್ದೇವೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಜನರು ನಮ್ಮನ್ನು ತಮ್ಮವರಾಗಿ ಸ್ವೀಕರಿಸಿದ್ದಾರೆ ಎಂಬುವುದು ನಮಗೆ ಅತ್ಯಂತ ಹೆಮ್ಮೆಯ ಮತ್ತು ಸಂತೋಷದ ವಿಷಯವಾಗಿದೆ.

ಪತ್ರಿಕೋದ್ಯಮದ ನನ್ನ ಸಾಧನೆಗೆ ನನ್ನ ಸಿಬ್ಬಂದಿಗಳ ಕೆಲಸವೇ ಮುಖ್ಯ ಕಾರಣ :

ನನ್ನ ಪತ್ರಿಕೋದ್ಯಮದ ಪ್ರಶಸ್ತಿಗಳಿಗೆಲ್ಲಾ, ಜನರ ಪ್ರೀತಿ ಸಂಪಾದನೆಗೆ ನನ್ನ ಸಂಪಾದಕೀಯವೂ ಒಂದು ಕಾರಣವಾಗಿದ್ದರೂ ನನ್ನ ಬಳಗದ ಸಾಧನೆಯೇ ಅದಕ್ಕಿಂತ ಹೆಚ್ಚು ಮುಖ್ಯವಾಗಿತ್ತು ಎಂಬುವುದನ್ನು ನಾನು ಅರಿತಿದ್ದೇನೆ. ಅದೇನಿದ್ದರೂ ಇಷ್ಟು ವರ್ಷ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ನಾನು ಮಾಡಿದ ಸಾಧನೆಗೆ ಸಂತೃಪ್ತನಾಗಿದ್ದೇನೆ. ಅದನ್ನು ಮುಂದುವರಿಸಿಕೊಂಡು ಹೋಗುವ ಸಾಮರ್ಥ್ಯವನ್ನು, ಶಕ್ತಿಯನ್ನು ಈಗ ಇರುವವರಿಗೆ ನೀಡಿ, ಅವರ ಸಲಹೆಗಾರನಾಗಿ ಪ್ರೋತ್ಸಾಹಕನಾಗಿ, ಮಾರ್ಗದರ್ಶಕನಾಗಿ ಮುಂದುವರಿಯಬೇಕೆಂದಿದ್ದೇನೆ. ಅದಕ್ಕಾಗಿ ಮೂರು ತಾಲೂಕಿನ ಪತ್ರಿಕೆಗಳನ್ನು ನಡೆಸಿಕೊಂಡು ಹೋಗಲು, ಆಯಾ ತಾಲೂಕಿನ ತಂಡಗಳಿಗೆ ಜವಾಬ್ದಾರಿಯನ್ನು ನೀಡಲಿದ್ದೇನೆ. ಸುಳ್ಯಕ್ಕೆ ಹರೀಶ್ ಬಂಟ್ವಾಳ್, ಪುತ್ತೂರಿಗೆ ಕರುಣಾಕರ್ ರೈ ಸಿ.ಹೆಚ್., ಬೆಳ್ತಂಗಡಿಗೆ ಸಂತೋಷ್ ಕುಮಾರ್ ಶಾಂತಿನಗರರವರಿಗೆ ಸಂಪಾದಕತ್ವವನ್ನು ಅವರಿಗೆ ಬಿಟ್ಟುಕೊಡಲಿದ್ದೇನೆ. ನಾನು ಇತರ ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸಲು ಅದರಿಂದ ಬಿಡುವು ಸಿಗುತ್ತದೆ ಎಂಬ ನಂಬಿಕೆ ನನ್ನಲ್ಲಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನ ಜನರು ತಮ್ಮ ತಮ್ಮ ತಾಲೂಕಿನ ಸುದ್ದಿ ಬಳಗಕ್ಕೆ ಸಲಹೆ, ಸಹಕಾರ, ಪ್ರೋತ್ಸಾಹ, ಆರ್ಥಿಕ ಭದ್ರತೆ ನೀಡಿ, ಜನಪರ ಹಾದಿಯಲ್ಲಿ ಅವರನ್ನು ಮುನ್ನೆಡೆಸುತ್ತೀರಿ (ಆ ಕಾರ್ಯದಲ್ಲಿ ನಾನೂ ನಿಮ್ಮೊಂದಿಗೆ ಇರುತ್ತೇನೆ) ಎಂಬ ನಂಬಿಕೆಯೊಂದಿಗೆ ಬದಲಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.

ನನ್ನ ಪತ್ರಿಕಾ ಅವಧಿಯಲ್ಲಿ ನನ್ನ ಮೇಲೆ, ನನ್ನ ಸಿಬ್ಬಂದಿಗಳ ಮೇಲೆ ಇರಿಸಿದ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ. ನನ್ನ ಪತ್ರಿಕಾ ವರದಿಯಿಂದ, ನನ್ನ ಸಂಪಾದಕತ್ವದಿಂದ ಯಾರಿಗಾದರು ನೋವು ಆಗಿದ್ದರೆ ಅದು ಆ ಸಂದರ್ಭಕ್ಕೆ ಅನಿವಾರ್ಯವಾದ ಕಾರಣಗಳಿಂದ ಆಗಿರಬಹುದೇ ಹೊರತು ನಮಗೆ ಯಾರಿಗೂ ಯಾರನ್ನೂ ನೋಯಿಸುವ ಉದ್ಧೇಶವಿಲ್ಲ ಎಂದು ಹೇಳುತ್ತಾ ಅವರಿಗೆ ಆದ ನೋವಿಗೆ ಮತ್ತು ನಮ್ಮ ತಪ್ಪಿಗೆ ಕ್ಷಮೆಯಾಚಿಸಿ ವಿರಮಿಸುತ್ತಿದ್ದೇನೆ.

LEAVE A REPLY

Please enter your comment!
Please enter your name here