ಕಡಬ: ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಅಡೀಲು ಎಂಬಲ್ಲಿ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಸಿದ್ದ ಸ್ಥಳಕ್ಕೆ ಕಡಬ ಪಟ್ಟಣ ಪಂಚಾಯಿತಿ , ಕಂದಾಯ ಇಲಾಖಾ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅಭಿವೃದ್ದಿಯ ಭರವಸೆ ನೀಡಿ ಬಳಿಕ ಮತದಾನದಲ್ಲಿ ಭಾಗವಹಿಸುವಂತೆ ಕೇಳಿಕೊಂಡರು.
ಅಡೀಲು ಎಂಬಲ್ಲಿ ಮೂರು ಮನೆಗಳಿಗೆ ರಸ್ತೆ ಸಂಪರ್ಕವಿಲ್ಲ , ಈ ಬಗ್ಗೆ ಸಮಸ್ಯೆ ಬಗೆಹರಿಸಿ ಎಂದು ಸಂಬಂಧಪಟ್ಟವರಿಗೆ ಹಲವಾರು ಭಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅರೋಪಿಸಿ ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಬ್ಯಾನರ್ ಅಳವಡಿಸಲಾಗಿತ್ತು. ಮಾಹಿತಿ ಪಡೆದು ಸ್ಥಳಕ್ಕೆ ಕಡಬ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಪ್ರಕಾಶ್ ಮೂಲ್ಯ, ಕಡಬ ಗ್ರಾಮಕರಣಿಕ ಶೇಷಾದ್ರಿ ಮತ್ತು ಸಿಬ್ಬಂದಿಗಳು ತೆರಳಿ ಸ್ಥಳಿಯರೊಂದಿಗೆ ಮಾತುಕತೆ ನಡೆಸಿ ಬ್ಯಾನರ್ ತೆರವುಗೊಳಿಸಲಾಯಿತು. ಈ ರಸ್ತೆಯ ಅಭಿವೃದ್ದಿಗೆ ಪಟ್ಟಣ ಪಂಚಾಯಿತಿಯ ಮುಂದಿನ ಕ್ರಿಯಾ ಯೋಜನೆಯಲ್ಲಿ ಅನುದಾನ ಮೀಸಲಿರಿಸಲಾಗುವುದು. ರಸ್ತೆ ಕಾಮಗಾರಿಗೂ ಮುನ್ನ ರಸ್ತೆ ನಿರ್ಮಾಣದ ಜಾಗದಲ್ಲಿ ತಕರಾರಿನ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ ಎಂದು ಪಕೀರಮೂಲ್ಯ ತಿಳಿಸಿದರು.