ಸಂತ ಫಿಲೋಮಿನಾ ಕಾಲೇಜಿನಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕರಿಗೆ 5 ದಿನಗಳ ಇಂಗ್ಲೀಷ್‌ ಭಾಷಾ ಕಾರ್ಯಗಾರ

0

ಪುತ್ತೂರು : ಕ್ಯಾಥೋಲಿಕ್‌ ಬೋರ್ಡ್‌ ಆಫ್‌ ಎಜುಕೇಶನ್‌ ಹಾಗೂ ಸಂತ ಫಿಲೋಮಿನಾ ಕಾಲೇಜು ಇದರ ಸಹಯೋಗದಲ್ಲಿ ಕ್ಯಾಥೊಲಿಕ್‌ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿರುವ ಪ್ರಾಥಮಿಕ ಶಾಲಾ ಅಧ್ಯಾಪಕರಿಗೆ 5 ದಿನಗಳ ಇಂಗ್ಲೀಷ್‌ ಭಾಷಾ ಕಾರ್ಯಗಾರವನ್ನು ಆಯೋಜಿಸಲಾಗಿದ್ದು, ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಂಗಣದಲ್ಲಿ ಎ.24ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಸಂಚಾಲಕ ಅತಿ ವಂ| ಲಾರೆನ್ಸ್‌ ಮಸ್ಕರೇಞಸ್‌ “ಯಾವುದೇ ವೃತ್ತಿಯಲ್ಲಿ ಯಶಸ್ವಿಯಾಗಲು ನಿರಂತರ ಕಲಿಕೆಯು ಕನಿಷ್ಠ ಅವಶ್ಯಕತೆಯಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಶಿಕ್ಷಕರು ಸಂವಹನ ಕಲೆಯನ್ನು ಅಭಿವೃದ್ಧಿಪಡಿಸಿಕೊಂಡಲ್ಲಿ ಯಾವುದೇ ವಿಷಯವನ್ನೂ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಬಹುದಾಗಿದೆ. ಯಾವ ಶಿಕ್ಷಕರಲ್ಲಿ ಅಗತ್ಯವಿರುವ ಕೌಶಲ್ಯಗಳಿವೆಯೋ ಅವರು ತರಗತಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು” ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆಂಟೊನಿ ಪ್ರಕಾಶ್‌ ಮೊಂತೆರೋ “ ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದೆ. ಹೊಸ ವಿಷಯಗಳನ್ನು ಕಲಿತಾಗ ಮಾತ್ರವೇ ಶಿಕ್ಷಕನು ಪರಿಣಾಮಕಾರಿಯಾಗಿ ಪಾಠಗಳನ್ನು ಮಾಡಬಹುದು. ಭಾಷೆಯ ಸಮರ್ಪಕ ಬಳಕೆಯಿಂದ ಎಂತಹ ವಿಷಯವನ್ನೂ ಪರಿಣಾಮಕಾರಿಯಾಗಿ
ವಿವರಿಸಬಹುದಾಗಿದೆ. ಭಾಷೆಯನ್ನು ಕರಗತಗೊಳಿಸಿಕೊಂಡವನು ಪದಗಳೊಡನೆ ಲೀಲಾಜಾಲವಾಗಿ ಆಟವಾಡಬಹುದು“ ಎಂದರು.


ಅಧ್ಯಕ್ಷೀಯ ಭಾಷಣದಲ್ಲಿ ಕ್ಯಾಥೊಲಿಕ್‌ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾದ ಅತಿ ವಂ| ಆಂಟೊನಿ ಮೈಕೆಲ್‌ ಶೆರಾರವರು “ ಪ್ರಾಥಮಿಕ ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಗೆ ಭದ್ರವಾದ ತಳಹದಿಯನ್ನು ಹಾಕುತ್ತಾರೆ. ತಳಹದಿಯು ಸುಭದ್ರವಾಗಿದ್ದಲ್ಲಿ ಯಾವುದೇ ಬಾಹ್ಯ ಶಕ್ತಿಗೂ ಅಂಜದೆ ಕಟ್ಟಡವು ನೇರವಾಗಿ ನಿಲ್ಲಬಹುದಾಗಿದೆ. ವಿದ್ಯಾರ್ಥಿಗಳ
ಪ್ರಾಥಮಿಕ ಶಿಕ್ಷಣವು ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕೆಂದಿದ್ದಲ್ಲಿ ಶಿಕ್ಷಕರು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸುವುದು ಅತೀ ಅಗತ್ಯ.“ ಎಂದು ಹೇಳಿದರು.

ನಾಗ ಪ್ರಸಾದ್‌ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಇಂಗ್ಲೀಷ್‌ ವಿಭಾಗದ ಮುಖ್ಯಸ್ಥರಾದ ಭಾರತಿ ಎಸ್‌ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗ್ಲೀಷ್‌ ವಿಭಾಗದ ಉಪನ್ಯಾಸಕಿ ನೋವೆಲಿನ್‌ ಡಿಸೋಜ ವಂದಿಸಿದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಗೀತಾ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಕ್ಯಾಂಪಸ್‌
ನಿರ್ದೇಶಕರು ಮತ್ತು ಇಂಗ್ಲೀಷ್‌ ವಿಭಾಗದ ಉಪನ್ಯಾಸಕರೂ ಆದ ವಂ| ಸ್ಟ್ಯಾನಿ ಪಿಂಟೋ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

5 ದಿನಗಳ ಅವಧಿಯ ಈ ಕಾರ್ಯಗಾರವು ಕ್ಯಾಥೋಲಿಕ್‌ ಶಿಕ್ಷಣ ಸಂಸ್ಥೆಗಳ ಅಧೀನಕ್ಕೊಳಪಟ್ಟ ಪುತ್ತೂರಿನ ಸುತ್ತುಮುತ್ತಲಿನ ಪ್ರಾಥಮಿಕ ಶಾಲೆಗಳ ಅಧ್ಯಾಪಕರ ಇಂಗ್ಲೀಷ್‌ ಸಂವಹನ ಕೌಶಲ್ಯವನ್ನು ಅಭಿವೃ‍ದ್ಧಿಪಡಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಗಾರದಲ್ಲಿ ಕಾಲೇಜಿನ ಇಂಗ್ಲೀಷ್‌ ಉಪನ್ಯಾಸಕರಾದ ಭಾರತಿ ಎಸ್‌ ರೈ, ನೋವೆಲಿನ್‌ ಡಿಸೋಜ ಹಾಗೂ ವಂ|
ಸ್ಟ್ಯಾನಿ ಪಿಂಟೋರವರು ಸಂಪನ್ಮೂಲವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here