ಮನೆಯೊಂದು ಮೂರು ಬಾಗಿಲಿನಂತಾದ ಬಿಜೆಪಿ: ಹೇಮನಾಥ ಶೆಟ್ಟಿ ಲೇವಡಿ
ಪುತ್ತೂರು: ಪುತ್ತೂರು ಬಿಜೆಪಿ ಛಿದ್ರವಾಗಿದೆ, ಹಿಂದುತ್ವದ ಹೆಸರಿನಲ್ಲಿ ಜನರನ್ನು ಒಡೆದು ಅಧಿಕಾರಕ್ಕೇರುತ್ತಿದ್ದವರ ಸ್ಥಿತಿ ಇಂದು ಮನೆಯೊಂದು ಮೂರು ಬಾಗಿಲಿನಂತಾಗಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಲೇವಡಿ ಮಾಡಿದ್ದಾರೆ.
ರೆಬೆಲ್ಗಳ ಅಟ್ಟಹಾಸಕ್ಕೆ ನಲುಗಿದ ಬಿಜೆಪಿಗೆ ಈಗ ಪ್ರಚಾರಕ್ಕೆ ತೆರಳಲು ಕಾರ್ಯಕರ್ತರೇ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಇದು ಪುತ್ತೂರು ಶ್ರೀ ಮಹಾಲಿಂಗೆಶ್ವರ ಮಣ್ಣಿನಲ್ಲಿ ಇದ್ದು ಬಿಜೆಪಿ ಜನತೆಗೆ ಮಾಡಿದ ದ್ರೋಹದಿಂದ ತಟ್ಟಿದ ಶಾಪದ ಪರಿಣಾಮವಾಗಿದೆ, ಈ ಶಾಪ ನಿರಂತರವಾಗಿ ಬಿಜೆಪಿ ಗೆ ತಟ್ಟಲಿದೆ. ಅಧಿಕಾರ ಇದ್ದಾಗ ನಾವು ಏನು ಮಾಡಿದರೂ ದಕ್ಕುತ್ತದೆ ನಮ್ಮನ್ನು ಕೇಳುವವರೇ ಇಲ್ಲ ನಾವು ಮಾಡಿದ್ದೇ ಶಾಸ್ತ್ರ ಎಂಬ ದುರಹಂಕಾರ ಬಿಜೆಪಿ ತಲೆಗೆ ಅಡರಿತ್ತು. ಅದನ್ನು ಅವರ ಮೂಲಕವೇ ಪರಮಾತ್ಮ ಭಸ್ಮ ಮಾಡಿದ್ದಾನೆ ಎಂದು ಹೇಳಿದರು.
ಅಧಿಕಾರ ಬರುತ್ತದೆ ಹೋಗುತ್ತದೆ ಯಾರೇ ಆಗಲಿ ಅಧಿಕಾರದಲ್ಲಿದ್ದಾಗ ಅನ್ಯಾಯ ಮಾಡಬಾರದು. ಬಡವರ ಕಣ್ಣೀರು ಹಾಕಿಸುವ ಕೆಲಸವನ್ನು ಮಾಡಲೇಬಾರದು ಎಂದು ಹೇಳಿದ ಅವರು ಹಿಂದೆ ತಡವಾಗಿ ಸಿಗುತ್ತಿತ್ತು ಈಗ ಆಗಲೇ ಡ್ರಾ ಆಗಲೇ ಬಹುಮಾನ ಸಿಗುತ್ತದೆ. ಇನ್ನಾದರೂ ಪುತ್ತೂರಿನ ಜನತೆ ನೆಮ್ಮದಿಯಿಂದ ಜೀವನ ನಡೆಸುವ ಕಾಲ ಬರಬಹುದು ಎಂಬ ಸಂತಸದಲ್ಲಿ ಪುತ್ತೂರಿನ ಜನತೆ ಇದ್ದಾರೆ. ಈ ಕನಸು ಶೀಘ್ರದಲ್ಲೇ ನನಸಾಗಲಿದೆ. ಪುತ್ತೂರಿನಲ್ಲಿ ಜಂಟಲ್ ಮ್ಯಾನ್ ಅಶೋಕ್ ರೈ ಗೆದ್ದೇ ಗೆಲ್ಲುತ್ತಾರೆ, ಪುತ್ತೂರಿನ ಜನತೆಯ ಬೇಡಿಕೆಯನ್ನು ಈಡೇರಿಸಿ ಪುತ್ತೂರನ್ನು ಸಮಗ್ರ ಅಭಿವೃದ್ದಿ ಮಾಡಿಯೇ ಮಾಡುತ್ತಾರೆ ಈ ಬಾರಿ ಕಾಂಗ್ರೆಸ್ಸನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಅಭ್ಯರ್ಥಿ ಅಶೋಕ್ ರೈ ಸೇರಿದಂತೆ ಕಾಂಗ್ರೆಸ್ನ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.