ಪುತ್ತೂರು: ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಅರುಣ್ ಪುತ್ತಿಲರವರ ’ಚುನಾವಣಾ ಪ್ರಚಾರವನ್ನು ಮಾಡುವ ವೇಳೆ ಅವರ ಬೆಂಬಲಿಗರಾದ ಶ್ರೀಕೃಷ್ಣ ಉಪಾಧ್ಯಾಯ ಎಂಬವರು ಕಪೋಲಕಲ್ಪಿತ ವಿಚಾರಗಳನ್ನೊಳಗೊಂಡ ಭಾಷಣ ಮಾಡಿ ಕೋಮು ದ್ವೇಷ ಬಿತ್ತಿದ್ದಾರೆ ಎಂದು ಆರೋಪಿಸಿ ಕೆದಿಲ ಪಾಟ್ರಕೋಡಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಉಮ್ಮರ್ ಹಾಜಿಯವರು ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕೆದಿಲ ಶ್ರೀ ಕೃಷ್ಣ ಉಪಾಧ್ಯಾಯರವರು ಭಾಷಣ ಮಾಡಿರುವಂತಹ ಪ್ರಕರಣ ನಮ್ಮ ಮಸೀದಿಯಲ್ಲಿ ಅಥವಾ ನಮ್ಮ ಪಾಟ್ರಕೋಡಿ ಪರಿಸರದಲ್ಲಿ ಯಾವತ್ತೂ ನಡೆದಿರುವುದಿಲ್ಲ. ಇಂತಹ ಪ್ರಕರಣವನ್ನು ಸೃಷ್ಠಿಸಿ ಹಿಂದು ಮುಸಲ್ಮಾನರ ಮಧ್ಯೆ ದ್ವೇಷವನ್ನು ಸೃಷ್ಟಿಸುವ ಉದ್ದೇಶದಿಂದ ಮಾಡಿರುವುದಾಗಿದೆ. ಇಂತಹ ಕಪೋಲಕಲ್ಪಿತ ವಿಷಯಗಳನ್ನು ಸೃಷ್ಟಿ ಮಾಡಿ ಭಾಷಣ್ಯದ ಮೂಲಕ ಹೇಳಿರುವುದರಿಂದ ನಮ್ಮ ಪರಿಸರದ ಮುಸಲ್ಮಾನ ಸಮುದಾಯದವರಿಗೆ ತೀರಾ ನೋವಾಗಿರುತ್ತದೆ.
ಚುನಾವಣಾ ಪ್ರಚಾರದಲ್ಲಿ ಕೋಮು ದ್ವೇಷಗಳನ್ನು ಬಿತ್ತಿ ಅಹಿತಕರ ಘಟನೆಗಳನ್ನು ಸೃಷ್ಟಿ ಮಾಡಿ ಸಮಾಜದಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಭಾಷಣ ಮಾಡಿದ ಶ್ರೀಕೃಷ್ಣ ಉಪಾಧ್ಯಾಯರ ಮೇಲೆ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.