ಸಂತ ಫಿಲೋಮಿನಾ ಕಾಲೇಜಿನಲ್ಲಿ ಎಫ್‌ ಡಿ ಪಿ ಹಾಗೂ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸಿಬ್ಬಂದಿ ಅಭಿವೃದ್ಧಿ ಹಾಗೂ ಮೌಲ್ಯಮಾಪನ ಕೋಶ, ಗಣಕ ವಿಜ್ಞಾನ ವಿಭಾಗ ಹಾಗೂ ಇನ್ನೋವೇಶನ್‌ ಕೌನ್ಸಿಲ್‌ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಗಣಕವಿಜ್ಞಾನ ಪ್ರಯೋಗಶಾಲೆಯಲ್ಲಿ “ಆನ್ಲೈನ್‌ ಟೂಲ್ಸ್‌ ಟು ಸಿಂಪ್ಲಿಫೈ ಟೀಚಿಂಗ್‌ ಲರ್ನಿಂಗ್‌ ಪ್ರೊಸೆಸ್”‌ ಅಧ್ಯಾಪಕರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸುವುದರ ಮೂಲಕ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾಲೇಜಿನ ಪ್ರಾಂಶುಪಾಲ ಡಾ. ಆಂಟೊನಿ ಪ್ರಕಾಶ್‌ ಮೊಂತೆರೋ “ತಂತ್ರಜ್ಞಾನವು ನಮ್ಮ ಜೀವನದ ಮೇಲೆ ಮಹತ್ತರ ಪ್ರಭಾವ ಬೀರುತ್ತಿದೆ. ನಮ್ಮ ದಿನನಿತ್ಯದ ಹಲಾವಾರು ಕಾರ್ಯಗಳನ್ನು ತಂತ್ರಜ್ಞಾನದ ಸಹಾಯದಿಂದ ಸರಳವಾಗಿ ನಿರ್ವಹಿಸಬಹುದಾಗಿದೆ. ಆಧುನಿಕ ಜಗತ್ತಿಗೆ ತಂತ್ರಜ್ಞಾನವು ನೀಡಿದ ಕೊಡುಗೆಗಳನ್ನು ಗುರುತಿಸಲು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. ಅಧ್ಯಯನ ಮತ್ತು ಅಧ್ಯಾಪನ ಇವೆರಡರಲ್ಲೂ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಇನ್ನಷ್ಟು ಪರಿಣಾಮಕಾರಿಯಾಗಿ
ನಡೆಸಬಹುದಾಗಿದೆ. ಸಾಂಪ್ರದಾಯಿಕ ಶೈಕ್ಷಣಿಕ ಕಾರ್ಯತಂತ್ರಗಳಲ್ಲಿ ತಂತ್ರಜ್ಞಾನದ ಸಹಾಯದಿಂದ ಅಮೂಲಾಗ್ರ ಬದಲಾವಣೆಗಳನ್ನು ಮಾಡಬಹುದಾಗಿದೆ. ಒಂದು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೋರ್ವ ವ್ಯಕ್ತಿಯೂ ವಿಶೇಷ ಕೌಶಲ್ಯ, ದೃಷ್ಟಿಕೋನ ಮತ್ತು ಜೀವನಾನುಭವಗಳನ್ನು ಹೊಂದಿರುತ್ತಾನೆ. ಈ ಪರಿಣತಿಯ ವಿನಿಮಯಕ್ಕಾಗಿ ನಾವೆಲ್ಲ
ಜೊತೆಯಾದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಅಧ್ಯಾಪಕರು ಕಲಿಕೆಯನ್ನು ಆನಂದಿಸಬೇಕು ” ಎಂದು ಹೇಳಿದರು.


“ಸರ್ಚ್‌ ಚಾಟ್‌ ಬೋಟ್‌ & ಪಾರಾಫ್ರೇಜಿಂಗ್‌ʼ ಎಂಬ ವಿಷಯದ ಕುರಿತು ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ ಪ್ರಾತ್ಯಕ್ಷಿಕೆ ನೀಡಿದರು. ಬೋಧನೆಗೆ ಸಂಬಂಧಿಸಿ ಗೂಗಲ್‌ ಅಭಿವೃದ್ಧಿಪಡಿಸಿದ ಉಪಯುಕ್ತವಾದ ತಂತ್ರಾಂಶಗಳ ಬಳಕೆಯ ಬಗ್ಗೆ ಗಣಕವಿಜ್ಞಾನ ವಿಭಾಗದ ಉಪನ್ಯಾಸಕಿ ಗೀತಾ ಪೂರ್ಣಿಮಾ, ಗೂಗಲ್‌ ಫಾರ್ಮ್‌ಗಳ ಸಮರ್ಪಕ ಬಳಕೆಯ ಬಗ್ಗೆ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ರಾಜೇಶ್ವರಿ ಹಾಗೂ ಗೂಗಲ್‌ ಕ್ಲಾಸ್‌ರೂಮ್‌ ಬಳಸಿ ನಡೆಸಬಹುದಾದ ವಿವಿಧ ಕಾರ್ಯಗಳ ಬಗ್ಗೆ ಗಣಕವಿಜ್ಞಾನ ವಿಭಾಗದ ಉಪನ್ಯಾಸಕಿ ವಾರಿಜಾ ಪ್ರಾತ್ಯಕ್ಷಿಕೆ ನಡೆಸಿದರು.


ಕಾಲೇಜಿನ ಸಿಬ್ಬಂದಿ ಅಭಿವೃದ್ಧಿ ಹಾಗೂ ಮೌಲ್ಯಮಾಪನ ಕೋಶದ ಸಂಯೋಜಕ ಸ್ಟ್ಯಾನಿ ಪಿಂಟೋ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಉಪ-ಪ್ರಾಂಶುಪಾಲಡಾ| ಎ ಪಿ ರಾಧಾಕೃಷ್ಣ ವಂದಿಸಿ, ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ
ವಿಭಾಗದ ಬೋಧಕ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here