ಕಾಣಿಯೂರು: ಮೊದಲ ಪತ್ನಿಯ ಪುತ್ರನಿಂದ ಹಲ್ಲೆಗೊಳಗಾದ ವ್ಯಕ್ತಿಯೋರ್ವರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸಂಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ದಿ.ಗುರುವ ಎಂಬವರ ಪುತ್ರ ಕಿಟ್ಟು (54) ಮೃತ ಪಟ್ಟವರು. ಮೇ 11ರಂದು ಕಿಟ್ಟು ಅವರ ಮನೆಗೆ ಅವರ ಮೊದಲ ಪತ್ನಿಯ ಮಗ ಹರ್ಷಿತ್ ಎಂಬಾತ ಬಂದು ಕಿಟ್ಟು ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಅಂಗಳದಲ್ಲಿದ್ದ ಅಡಿಕೆ ಮರದ ಸಲಾಕೆಯಿಂದ ಕಿಟ್ಟು ಅವರ ತಲೆಗೆ ಹೊಡೆದು ಗಾಯಗೊಳಿಸಿದ್ದು, ಕಿಟ್ಟು ಅವರು ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಅವರ ಪುತ್ರ ನಿತ್ಯಾನಂದ ಅವರು 108 ಅಂಬ್ಯುಲೆನ್ಸ್ ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಳೆ ದ್ವೇಷದ ಕಾರಣದಿಂದ ಕೃತ್ಯ ಎಸಗಲಾಗಿದೆ. ಆರಂಭದಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದ ಬೆಳ್ಳಾರೆ ಪೊಲೀಸರು, ಕಿಟ್ಟು ಅವರು ಮೃತಪಟ್ಟ ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ್ಯಾಯಾಂಗ ಬಂಧನ:
ಆರೋಪಿ ಹರ್ಷಿತ್‌ನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.