ಪುತ್ತೂರು: ಶ್ರೀ ಸತ್ಯಸಾಯಿ ಸೇವಾ ಸಮಿತಿ ಹಾಗೂ ಎ.ಜೆ ಆಸ್ಪತ್ರೆ ಮಂಗಳೂರು ಇದರ ಕಣ್ಣಿನ ವಿಭಾಗದ ಸಹಯೋಗದಲ್ಲಿ ಕೋರ್ಟ್ ರಸ್ತೆಯ ಶ್ರೀ ಸತ್ಯಸಾಯಿ ಮಂದಿರದಲ್ಲಿ 54ನೇ ಉಚಿತ ನೇತ್ರಾ ಚಿಕಿತ್ಸಾ ಶಿಬಿರವು ಮೇ.21ರಂದು ನೆರವೇರಿತು.
ಶಿಬಿರದಲ್ಲಿ ದೀಪ ಬೆಳಗಿಸಿದ ಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಪ್ರಸನ್ನ ಎನ್ ಭಟ್ ಮಾತನಾಡಿ, ಸತ್ಯಸಾಯಿ ಸೇವಾ ಸಮಿತಿಯು ಆಧ್ಯಾತ್ಮಿಕತೆ, ಸೇವೆ ಹಾಗೂ ಶೈಕ್ಷಣಿಕ ಎಂಬ ಮೂರು ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಸೇವಾ ಕಾರ್ಯವೂ ಒಂದು. ಆಧ್ಯಾತ್ಮಿಕದ ಜೊತೆಗೆ ಭಗವಂತನ ಸೇವೆ ನಡೆಸಲಾಗುತ್ತಿದೆ. ಸೇವಾ ಸಮಿತಿ ಮೂಲಕ ದಂತ ಚಿಕಿತ್ಸೆ, ರಕ್ತದಾನ ಶಿಬಿರ, ಕಣ್ಣಿನ ಚಿಕಿತ್ಸೆ ಹಾಗೂ ಪ್ರತಿ ವಾರ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ. ಅರ್ಹರ ಸೇವೆ ಮಾಡುವ ಮೂಲಕ ಭಗವಂತನ ಸೇವೆ ಮಾಡಲಾಗುತ್ತಿದೆ. ಸೇವೆ ಪ್ರಚಾರಕ್ಕಾಗಿ ಅಲ್ಲ. ಯಾವುದೇ ದೇಣಿಗೆ,ಕಾಣಿಕೆ ಸಂಗ್ರಹಿಸದೇ ಸಂಪೂರ್ಣವಾಗಿ ಸೇವೆ ನೀಡಲಾಗುತ್ತದೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಇನ್ನೊಬ್ಬರ ಸೇವೆ ಮಾಡುವ ಮೂಲಕ ಭಗವಂತನನ್ನು ಕಾಣಲಾಗುತ್ತದೆ ಎಂದರು.
ಸತ್ಯಸಾಯಿ ಮಂದಿರದ ಮುಖ್ಯಸ್ಥ ಪದ್ಮನಾಭ ನಾಯಕ್ ಮಾತನಾಡಿ, ಶಿಬಿರದಲ್ಲಿ ಉಚಿತ ಚಿಕಿತ್ಸೆ ಹಾಗೂ ಕನ್ನಡಕ ವಿತರಸಲಾಗುವುದು. ದೂರದೃಷ್ಟಿ ಹಾಗೂ ಹತ್ತಿರ ದೃಷ್ಟಿ ದೋಷವಿರುವವರಿಗೆ ಜೂ.4 ರಂದು ಕನ್ನಡಕ ವಿತರಿಸಲಾಗುವುದು. ಪೊರೆ ಶಸ್ತ್ರ ಚಿಕಿತ್ಸೆ ಅವಶ್ಯವಿರುವವರಿಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ಇದರ ದಿನಾಂಕವನ್ನು ತಿಳಿಸಲಾಗುವುದು. ತೆರಲುವವರಿಗೆ ಮಂದಿರದ ಆವರಣದಿಂದ ವಾಹನದ ಸೌಲಭ್ಯವಿದೆ ಎಂದು ತಿಳಿಸಿದರು.
ಶಾಯೀಶ್ವರಿ ಹಾಗೂ ಜೀವಿತ ಪ್ರಾರ್ಥಿಸಿದರು. ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಸತ್ಯಸುಂದರ ರಾವ್ ಸ್ವಾಗತಿಸಿದರು. ಸಮಿತಿ ಸದಸ್ಯರಾದ ರಘುನಾಥ ರೈ ಕಾರ್ಯಕ್ರಮ ನಿರೂಪಿಸಿ, ಕಾಂಚಣ ಮಾಲಾ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಎ.ಜೆ ಆಸ್ಪತ್ರೆಯ ವೈದ್ಯರಾದ ಡಾ. ಜಯರಾಮ ಶೆಟ್ಟಿ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನಡೆಸಿದರು.