ಕಡಬ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೇಟೆ ಹಾಗೂ ಪರಿಸರದಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ನಡೆಸಬೇಕಾದ ಚರಂಡಿ ಸ್ವಚ್ಚತಾ ಕಾರ್ಯ ಇನ್ನೂ ನಡೆದಿಲ್ಲ. ಕೆಲ ದಿನಗಳ ಹಿಂದೆ ಸುರಿದ ಮಳೆ ನೀರು ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ರಸ್ತೆಯಲ್ಲಿಯೇ ಹರಿದುಹೋಗಿದೆ. ಪೇಟೆಯ ಚರಂಡಿಗಳಲ್ಲಿ ಸಂಗ್ರಹವಾದ ಮಳೆನೀರು ತೋಡುಗಳಿಗೆ ಹರಿದುಹೋಗುವ ದಾರಿಗಳಲ್ಲಿ ಪೊದೆ, ಗಿಡಗಂಟಿಗಳು ಬೆಳೆದು ಕಸಕಡ್ಡಿಗಳು ಸೇರಿಕೊಂಡು ನೀರಿನ ಹರಿವಿಗೆ ತಡೆಯಾಗಿದೆ. ಮಳೆಗಾಲ ಆರಂಭವಾಗುವ ಮೊದಲೇ ನೀರು ಹರಿದು ಹೋಗುವ ಮಾರ್ಗಗಳಲ್ಲಿನ ತೊಡಕುಗಳನ್ನು ನಿವಾರಿಸಿದರೆ ಅಲ್ಲಲ್ಲಿ ಉಂಟಾಗುವ ಕೃತಕ ನೆರೆಯನ್ನು ತಪ್ಪಿಸಬಹುದು. ಕಡಬ ತಾಲೂಕು ಕೇಂದ್ರವಾಗಿ, ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಪರಿರ್ತನೆಯಾದ ಬಳಿಕ ಪೇಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಇಲ್ಲಿನ ಒಳಚರಂಡಿ ವ್ಯವಸ್ಥೆ ಸುಧಾರಿಸಬೇಕಾಗಿದೆ.
ಕಡಬ ಪೇಟೆಗೆ ಹೊಂದಿಕೊಂಡಿರುವ ಅಂಗಡಿ ಮನೆ ಕಾಲನಿ ಬಳಿಯ ದ್ರವತ್ಯಾಜ್ಯ ಸಂಸ್ಕರಣ ಘಟಕದ ಪಕ್ಕದಿಂದ ಬೈಲಿನ ಕಡೆಗೆ ಮಳೆನೀರು ಹರಿದುಹೋಗುವ ಸಣ್ಣ ತೋಡಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು, ಗಿಡಗಂಟಿಗಳು ಹಾಗೂ ಹೂಳು ತುಂಬಿಕೊಂಡಿದೆ. ಕಾಲನಿಯಿಂದ ಹರಿದುಬರುವ ಕೊಳಚೆನೀರು ಕೂಡ ಅಲ್ಲಲ್ಲಿಯೇ ಶೇಖರಣೆಯಾಗಿ ದುರ್ವಾಸನೆಯೊಂದಿಗೆ ರೋಗ ಹರಡುವ ಭೀತಿ ಎದುರಾಗಿದೆ. ಇನ್ನು ಕಡಬ ಪೇಟೆಯ ಸಂತೆಕಟ್ಟೆಯ ಪರಿಸರದ ಚರಂಡಿಗಳ ನೀರು ಹರಿದು ತೋಡು ಸೇರುವಲ್ಲಿ ಕೂಡ ಪೂರ್ತಿ ಗಿಡಗಂಟಿಗಳು ಬೆಳೆದು ನೀರಿನ ಹರಿವಿಗೆ ತಡೆಯುಂಟಾಗಿದೆ. ಪೇಟೆಯಲ್ಲಿ ಕೆಲವು ಕಡೆ ಚರಂಡಿಯಲ್ಲಿಯೇ ಕುಡಿಯುವ ನೀರಿನ ಪೈಪ್ಗಳು ಹಾದು ಹೋಗಿರುವುದರಿಂದ ಅದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಹಾಗೂ ಕಸಕಡ್ಡಿ ಸಿಲುಕಿಕೊಂಡು ನೀರು ಸರಾಗವಾಗಿ ಹರಿದುಹೋಗಲು ತೊಡಕಾಗುತ್ತಿದೆ. ಕಡಬ ಪೇಟೆಯ ಅಡ್ಡಗದ್ದೆ ಕಾಲೇಜು ರಸ್ತೆ, ಪಂಜ ರಸ್ತೆಯಲ್ಲಿಯೂ ಮಳೆನೀರು ಹರಿದುಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆನೀರು ರಸ್ತೆಯಲ್ಲಿಯೇ ಹರಿದು ಕೃತಕ ನೆರೆ ಉಂಟಾಗುತ್ತಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೋಡಿಂಬಾಳ ಪೇಟೆಯಲ್ಲೂ ಚರಂಡಿ ಸ್ವಚ್ಚತಾ ಕಾರ್ಯವಾಗಬೇಕಾಗಿದೆ. ಇಲ್ಲಿ ತಾಜ್ಯ ನೀರು ಹರಿಯಲು ಸರಿಯಾದ ವ್ಯವಸ್ಥೆ ಕಲ್ಪಿಸಬೇಕಾಗಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚರಂಡಿಗಳ ದುರಸ್ತಿಗಾಗಿ 4.5 ಲಕ್ಷ ರೂ. ಅನುದಾನ ಕಾದಿರಿಸಲಾಗಿದೆ. ಚುನಾವಣೆಯ ಕಾರಣದಿಂದಾಗಿ ಕಾಮಗಾರಿ ನಿರ್ವಹಿಸಲು ಸಾಧ್ಯವಾಗಲಿಲ್ಲ. ಜೂನ್ ತಿಂಗಳ ಆರಂಭಕ್ಕೆ ಮುನ್ನ ಚರಂಡಿಗಳಲ್ಲಿನ ತ್ಯಾಜ್ಯ, ಗಿಡಗಂಟಿ ತೆರವು ಹಾಗೂ ಹೂಳೆತ್ತುವ ಕೆಲಸಗಳನ್ನು ಮಾಡಿ ಕೊಳಚೆ ಹಾಗೂ ಮಳೆ ನೀರು ನಿಲ್ಲದಂತೆ ಮಾಡಲಾಗುವುದು.
-ಪಕೀರ ಮೂಲ್ಯ, ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ ಕಡಬ