ಅಭಿವೃದ್ಧಿ ಮಾಡಲು ಗ್ರಾ.ಪಂನಿಂದ ಅನುದಾನ ಸಿಗುತ್ತಿಲ್ಲವೆಂದು ಅಸಮಾಧಾನ-ಮುಂಡೂರು ಗ್ರಾ.ಪಂ ಸದಸ್ಯ ದುಗ್ಗಪ್ಪ ಕಡ್ಯ ರಾಜೀನಾಮೆ

0

ಪುತ್ತೂರು: ಮುಂಡೂರು ಗ್ರಾ.ಪಂ ಸದಸ್ಯ ದುಗ್ಗಪ್ಪ ಗೌಡ ಕಡ್ಯ ಅವರು ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ತಾನು ರಾಜೀನಾಮೆ ನೀಡುತ್ತಿರುವುದಾಗಿ ಅವರು ಅಧ್ಯಕ್ಷರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೇ.25ರಂದು ನಡೆದ ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ದುಗ್ಗಪ್ಪ ಅವರ ರಾಜೀನಾಮೆ ವಿಚಾರ ಪ್ರಸ್ತಾಪವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದುಗ್ಗಪ್ಪ ಕಡ್ಯ ಅವರು ಗ್ರಾ.ಪಂ ಸದಸ್ಯನಾಗಿ ತಾನು ಪ್ರತಿನಿಧಿಸುವ ವಾರ್ಡ್‌ನ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ, ಗ್ರಾ.ಪಂ.ನಿಂದ ಯಾವುದೇ ರೀತಿಯ ಅನುದಾನವಾಗಲೀ, ಸಹಕಾರವಾಗಲೀ ಸಿಗುತ್ತಿಲ್ಲ ಇದರಿಂದ ಬೇಸತ್ತು ನಾನು ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದರು.


ನನ್ನ ಏರಿಯಾ ಅಭಿವೃದ್ಧಿ ಆಗಿಲ್ಲ, ಕಾಂಕ್ರೀಟ್ ರಸ್ತೆ ಆಗಿಲ್ಲ, ಲೋ ವೋಲ್ಟೇಜ್ ಸಮಸ್ಯೆಯಿಂದ ನೀರು ಪೂರೈಕೆ ಸಮಸ್ಯೆಯಾಗಿದ್ದು ಟ್ರಾನ್ಸ್‌ಫಾರ್ಮರ್ ಬೇಡಿಕೆ ಇಟ್ಟರೂ ಸ್ಪಂದನೆ ಸಿಕ್ಕಿಲ್ಲ, ಬೀದಿ ದೀಪವೂ ಇಲ್ಲ, ಮುಂಡೂರು ಪೇಟೆಗೆ ಶೌಚಾಲಯ ಬೇಡಿಕೆಯೂ ಈಡೇರಿಲ್ಲ, ಒಟ್ಟಾರೆಯಾಗಿ ನನ್ನ ಏರಿಯಾ ಅಭಿವೃದ್ಧಿಯೇ ಆಗಿಲ್ಲ. ಚುನಾವಣೆಯಲ್ಲಿ ನನ್ನನ್ನು ಆರಿಸಿ ಕಳಿಸಿದ ಜನರಿಗೆ ನಾನೇನು ಉತ್ತರ ಕೊಡಬೇಕು ಹಾಗಾಗಿ ನಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದರು.

ನಾನು ಒಬ್ಬಂಟಿಯಾಗಿದ್ದು ಅನುದಾನ ವಿಚಾರದಲ್ಲಿ ಗ್ರಾ.ಪಂ ಸೇರಿದಂತೆ ಯಾರಿಂದಲೂ ಸಹಕಾರ ಸಿಗುತ್ತಿಲ್ಲ, ಯಾವ ಕೆಲಸವೂ ಕಾರ್ಯಗತವಾಗುತ್ತಿಲ್ಲ ಎಂದು ದುಗ್ಗಪ್ಪ ಕಡ್ಯ ಬೇಸರ ವ್ಯಕ್ತಪಡಿಸಿದರು. ದುಗ್ಗಪ್ಪ ಗೌಡ ಕಡ್ಯ ಅವರು ಬಿಜೆಪಿ ಬೆಂಬಲಿತ ಸದಸ್ಯರಾಗಿ ಮೊದಲ ಬಾರಿಗೆ ಗ್ರಾ.ಪಂ ಸದಸ್ಯರಾಗಿ ಚುನಾಯಿತರಾಗಿದ್ದರು.
ಸದಸ್ಯ ಬಾಬು ಕಲ್ಲಗುಡ್ಡೆ ಮಾತನಾಡಿ ದುಗ್ಗಪ್ಪ ಅವರು ಬೇಸರಗೊಂಡು ರಾಜೀನಾಮೆ ನೀಡಿದ್ದು ಅವರ ಸಮಸ್ಯೆಗೆ ಪರಿಹಾರವಾದರೆ ಉತ್ತಮ ಎಂದು ಹೇಳಿದರು.


ಸದಸ್ಯ ಕಮಲೇಶ್ ಸರ್ವೆದೋಳಗುತ್ತು ಮಾತನಾಡಿ ಅನುದಾನ ಹಂಚಿಕೆಯನ್ನು ಸರಿಯಾಗಿ ಮಾಡಿದರೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರವಾಗುತ್ತದೆ, ಅಧ್ಯಕ್ಷರು ಇದಕ್ಕೆಲ್ಲಾ ಆಸ್ಪದ ಕೊಡಬಾರದು, ಸಮಸ್ಯೆ ಎಲ್ಲಿ ಇದೆಯೋ ಅಲ್ಲಿಗೆ ಹೆಚ್ಚಿನ ಆದ್ಯತೆ ನೀಡಿ ಅನುದಾನ ಹಂಚಿಕೆ ಮಾಡಬೇಕು ಎಂದು ಅವರು ಹೇಳಿದರು.


ಸದಸ್ಯರಾದ ಬಾಲಕೃಷ್ಣ ಪೂಜಾರಿ, ಕಮಲೇಶ್ ಸರ್ವೆದೋಳಗುತ್ತು, ಮಹಮ್ಮದ್ ಆಲಿ ಮೊದಲಾದವರು ರಾಜೀನಾಮೆ ನೀಡದಂತೆ ದುಗ್ಗಪ್ಪ ಅವರ ಮನವೊಲಿಸಿದರು. ರಾಜೀನಾಮೆಯನ್ನು ನಾನು ಸ್ವೀಕರಿಸುವುದಿಲ್ಲ ಎಂದು ಅಧ್ಯಕ್ಷೆ ಪುಷ್ಪಾ ಎನ್ ಹೇಳಿದರು.

ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಿಡಿಓ ಗೀತಾ ಬಿ.ಎಸ್, ಉಪಾಧ್ಯಕ್ಷೆ ಪ್ರೇಮಾ ಎಸ್, ಕಾರ್ಯದರ್ಶಿ ಸೂರಪ್ಪ ಉಪಸ್ಥಿತರಿದ್ದರು. ಸಭೆಯಲ್ಲಿ ಸದಸ್ಯರಾದ ಕರುಣಾಕರ ಗೌಡ ಎಲಿಯ, ಅಶೋಕ್ ಕುಮಾರ್ ಪುತ್ತಿಲ, ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ಉಮೇಶ್ ಗೌಡ ಅಂಬಟ, ಚಂದ್ರಶೇಖರ ಎನ್‌ಎಸ್‌ಡಿ ಮೊದಲಾದವರು ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು. ಸದಸ್ಯರಾದ ಕಾವ್ಯ ಕಡ್ಯ, ಅರುಣಾ ಎ.ಕೆ, ರಸಿಕಾ ರೈ, ಕಮಲ, ವಿಜಯ ಕರ್ಮಿನಡ್ಕ, ದೀಪಿಕಾ, ಸುನಂದ ಬೊಳ್ಳಗುಡ್ಡೆ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಕೊರಗಪ್ಪ ನಾಯ್ಕ, ಶಶಿಧರ ಕೆ ಮಾವಿನಕಟ್ಟೆ, ಸತೀಶ ಸಹಕರಿಸಿದರು.

LEAVE A REPLY

Please enter your comment!
Please enter your name here