ಕಡಬ: ವೃಷಭ ಧಾಮ ಉದ್ಘಾಟನೆ, ಧಾರ್ಮಿಕ ಸಭೆ

0

ಕಡಬ: ಇಲ್ಲಿನ ಶ್ರೀ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ನಂದಿಯ(ಬಸವ) ವಾಸ್ತವ್ಯಕ್ಕಾಗಿ ನಿರ್ಮಾಣಗೊಂಡಿರುವ ವೃಷಭ ಧಾಮದ ಉದ್ಘಾಟನೆಯು ಜೂ.5 ರಂದು ಸಂಜೆ ಗೋಧೊಳಿ ಲಗ್ನದಲ್ಲಿ ನೆರವೇರಿತು.

ವೃಷಭ ಧಾಮದ ಉದ್ಘಾಟನೆಯ ಪ್ರಯುಕ್ತ ಬೆಳಗ್ಗೆ ಗಣಪತಿ ಹೋಮ ಹಾಗೂ ಇತರ ವೈದಿಕ ಕಾರ್ಯಕ್ರಮಗಳು ನೆರವೇರಿತು. ಸಾಯಂಕಾಲ ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ, ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಯಶವಂತ ರೈ, ಶಿವನ ದೇವಸ್ಥಾನದಲ್ಲಿ ಶಿವನ ವಾಹನವಾಗಿರುವ ಸಾಕ್ಷಾತ್ ನಂದಿಯನ್ನು ಪೂಜಿಸುವ ಸುಯೋಗ ನಮ್ಮದಾಗಿದೆ. ಶಿವನ ದೇವಸ್ಥಾನದಲ್ಲಿ ನಂದಿಗೆ ಹೆಚ್ಚಿನ ಪ್ರಾಧ್ಯನ್ಯತೆ ಇದೆ. ಯಾವ ರೀತಿ ದೇವರಿಗೆ ನಿತ್ಯ ಪೂಜೆ ಪುನಸ್ಕಾರಗಳು ನೆರವೇರುತ್ತವೆಯೋ ಅದೇ ರೀತಿ ನಂದಿಯ ನಿರ್ವಹಣೆಯು ಕೂಡ ಯಾವುದೇ ಲೋಪಗಳಿಲ್ಲದೆ ನಡೆಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲ ಕರ್ತವ್ಯವಾಗಿದೆ ಎಂದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ರವರು ಮಾತನಾಡಿ ನಂದಿಗೆ ಪ್ರತಿನಿತ್ಯ ಹೊತ್ತು ಹೊತ್ತಿಗೆ ಆಹಾರ ನೀಡುವುದರೊಂದಿಗೆ ಅದರ ಆರೋಗ್ಯವನ್ನು ಗಮನಿಸಿಕೊಂಡು ಪಾಲನೆ ಮಾಡುವುದು ಸವಾಲಿನ ಕೆಲಸವೇ ಸರಿ. ಅತ್ಯಂತ ಜವಾಬ್ದಾರಿಯುತವಾಗಿ ಆ ಕೆಲಸವನ್ನು ಕೈಗೆತ್ತಿಕೊಂಡಿರುವ ನಂದಿ ನಿರ್ವಹಣಾ ಪ್ರತಿಷ್ಠಾನ ಸಮಿತಿಯ ಕಾರ್ಯ ಶ್ಲಾಘನಾರ್ಹ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮುತ್ತುಕುಮಾರ್ ರವರು ಆರ್ಥಿಕ ಸಂಪನ್ಮೂಲದ ಅಗತ್ಯತೆ ಮತ್ತು ನಂದಿ ನಿರ್ವಹಣೆಯ ಖರ್ಚು ವೆಚ್ಚಗಳ ಕುರಿತು ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು.

ಪ್ರಧಾನ ಅರ್ಚಕ ಕೇಶವ ಬೈಪಾಡಿತ್ತಾಯ, ಪುರೋಹಿತ ಪ್ರಸಾದ ಕೆದಿಲಾಯ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಎ.ಬಿ.ಮನೋಹರ ರೈ ಮುಂತಾದವರು ಉಪಸ್ಥಿತರಿದ್ದರು. ದೇವಸ್ಥಾನಕ್ಕೆ ನಂದಿಯನ್ನು ದಾನವಾಗಿ ನೀಡಿದ ಪೂವಪ್ಪ ಮೂಲ್ಯ ಬಳ್ಳಮಂಜ, ವೃಷಭ ಧಾಮದ ನೀಲ ನಕಾಶೆ ಸಿದ್ಧಪಡಿಸಿದ ಕೌಶಿಕ್ ಕೋಲ್ಪೆ, ಶ್ರಮದಾನ ಮೇಲುಸ್ತುವಾರಿ ವಹಿಸಿದ್ದ ಸುಂದರ ಅಂಗಡಿಮನೆ, ಸಹಕರಿಸಿದ ವಿಹಿಂಪ ಕಡಬ ಪ್ರಖಂಡದ ಅಧ್ಯಕ್ಷ ರಾಧಕೃಷ್ಣ ಗೌಡ ಕೋಲ್ಪೆ ಅವರನ್ನು ನಂದಿ ನಿರ್ವಹಣಾ ಪ್ರತಿಷ್ಠಾನ ಸಮಿತಿಯ ವತಿಯಿಂದ ಗೌರವಿಸಲಾಯಿತು.

ನಂದಿ ನಿರ್ವಹಣಾ ಪ್ರತಿಷ್ಠಾನ ಸಮಿತಿಯ ಕಾರ್ಯದರ್ಶಿ ಸತೀಶ್ ನಾಯ್ಕ್ ಮೇಲಿನಮನೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿವಪ್ರಸಾದ್ ರೈ ಮೈಲೇರಿ ನಿರೂಪಿಸಿ, ಸದಸ್ಯ ಪ್ರಸಾದ್ ಅಮೈ ವಂದಿಸಿದರು.

LEAVE A REPLY

Please enter your comment!
Please enter your name here