ಕಡಬ,: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕಡಬ ಸಮುದಾಯ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಆಸ್ಪತ್ರೆಯ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|ಸುಚಿತ್ರಾ ರಾವ್ ಆಸ್ಪತ್ರೆಯ ಸಿಬಂದಿ ಕೊರತೆ ಹಾಗೂ ಇತರ ಅಗತ್ಯತೆಗಳ ಕುರಿತು ಶಾಸಕಿಗೆ ಮಾಹಿತಿ ನೀಡಿದರು. ಆಸ್ಪತ್ರೆಗೆ ಹೊಸ ಡಿಜಿಟಲ್ ಎಕ್ಸ್‌ರೆ ಯಂತ್ರ ನೀಡಲಾಗಿದ್ದರೂ ಎಕ್ಸ್‌ರೆ ತಂತ್ರಜ್ಞ ಹುದ್ದೆ ಖಾಲಿ ಇರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಶಾಸಕಿ ಜಿಲ್ಲಾ ವೈದ್ಯಾಧಿಕಾರಿ ಡಾ|ಕಿಶೋರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ ನಿಯೋಜನೆ ನೆಲೆಯಲ್ಲಾದರೂ ಎಕ್ಸ್‌ರೆ ತಂತ್ರಜ್ಞರನ್ನು ನೇಮಿಸುವಂತೆ ಸೂಚಿಸಿದರು.
ಡಯಾಲಿಸಿಸ್ ಕೇಂದ್ರ ಶೀಘ್ರ ಆರಂಭಿಸಲು ಕ್ರಮದ ಭರವಸೆ: ಕಡಬ ಸಮುದಾಯ ಆಸ್ಪತ್ರೆಯಲ್ಲಿ ಶೀಘ್ರ ಡಯಾಲಿಸಿಸ್ ಕೇಂದ್ರ ಆರಂಭಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದ ಶಾಸಕಿ ಭಾಗೀರಥಿ ಮುರುಳ್ಯ, ಕಳೆದ ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ಸಚಿವ ಅಂಗಾರ ಅವರ ಮುತುವರ್ಜಿಯಿಂದಾಗಿ ಕಡಬ ಸಮುದಾಯ ಆಸ್ಪತ್ರೆಗೆ 3 ಡಯಾಲಿಸಿಸ್ ಯಂತ್ರಗಳು ಮತ್ತು ಡಿಜಿಟಲ್ ಎಕ್ಸ್‌ರೆ ಯಂತ್ರ ನೀಡಲಾಗಿತ್ತು. ಬಳಿಕ ಚುನಾವಣೆಯ ಕಾರಣದಿಂದಾಗಿ ಡಯಾಲಿಸಿಸ್ ಯಂತ್ರಗಳ ಅಳವಡಿಕೆ ಹಾಗೂ ಡಯಾಲಿಸಿಸ್ ಕೇಂದ್ರಕ್ಕೆ ಅಗತ್ಯವಾಗಿ ಬೇಕಿರುವ ಆರ್‌ಒ ಪ್ಲಾಂಟ್ ನಿರ್ಮಾಣದ ಕೆಲಸ ನಡೆದಿರಲಿಲ್ಲ. ಶೀಘ್ರ ಈ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು. ಪ್ರಯೋಗಾಲಯದ ಯಂತ್ರೋಪಕರಣಗಳು ಪದೇ ಪದೇ ದುರಸ್ತಿಗೊಳಗಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಯಂತ್ರಗಳನ್ನು ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ಭರವಸೆ ನೀಡಿದರು.
ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಪುತ್ತೂರು ತಾ.ಪಂ. ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ, ಅಕ್ರಮ ಸಕ್ರಮ ಸಮಿತಿಯ ನಿಕಟಪೂರ್ವ ಸದಸ್ಯ ರಾಕೇಶ್ ರೈ ಕೆಡೆಂಜಿ, ಬಿಜೆಪಿ ಸುಳ್ಯ ಮಂಡಲ ಯುವ ಮೋರ್ಚಾ ಅಧ್ಯಕ್ಷ ಶ್ರೀಕೃಷ್ಣ ಎಂ.ಆರ್., ಬಿಜೆಪಿ ಕಡಬ ಶಕ್ತಿಕೇಂದ್ರದ ಅಧ್ಯಕ್ಷ ಗಿರೀಶ್ ಎ.ಪಿ., ಪ್ರಮುಖರಾದ ಫಯಾಝ್ ಕಡಬ, ಅಶೋಕ್‌ಕುಮಾರ್ ಪಿ, ಲಕ್ಷ್ಮೀಶ ಬಂಗೇರ, ಶಿವಪ್ರಸಾದ್ ರೈ ಮೈಲೇರಿ, ಮೆಬಿನ್ ನೆಕ್ಕಿತ್ತಡ್ಕ ಮತ್ತಿತರರು ಶಾಸಕರೊಂದಿಗೆ ಇದ್ದರು.
ಸುಳ್ಯ ಕ್ಷೇತ್ರದ ಬಗ್ಗೆ ಬೇರೆಯವರು ತಲೆಕೆಡಿಸಿಕೊಳ್ಳಬೇಕಿಲ್ಲ:
ಸುಳ್ಯ ವಿಧಾನಸಭಾ ಕ್ಷೇತ್ರವನ್ನೂ ನೋಡಿಕೊಳ್ಳುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸೂಚಿಸಿದ್ದ ಬಗ್ಗೆ ಮಾಧ್ಯಮ ವರದಿಗಳ ಕುರಿತು ಪರೋಕ್ಷವಾಗಿ ಪ್ರಸ್ತಾಪಿಸಿದ ಶಾಸಕಿ, ಸುಳ್ಯ ಕ್ಷೇತ್ರದ ಬಗ್ಗೆ ಬೇರೆಯವರು ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಪ್ರತಿಕ್ರಿಯೆಸಿದರು.