ಉಪ್ಪಿನಂಗಡಿ: ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿದ್ದ ನಾಡಕಚೇರಿ ಕಟ್ಟಡವು ಸರ್ವಾಂಗ ಸುಂದರವಾಗಿ ನಿರ್ಮಾಣಗೊಂಡು ಲೋಕಾರ್ಪಣೆಗೊಂಡರೂ, ಸಾರ್ವಜನಿಕರ ಸೇವೆಗೆ ಒದಗದಿರುವುದರಿಂದ ಕಟ್ಟಡ ಮಾತ್ರ ಈಗ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿದೆ.
ತೀರಾ ಇಕ್ಕಟ್ಟಾದ ಹಂಚಿನ ಕಟ್ಟಡದಲ್ಲಿ ಉಪ್ಪಿನಂಗಡಿಯ ನಾಡಕಚೇರಿಯು ಈ ಹಿಂದೆ ಕಾರ್ಯನಿರ್ವಹಿಸುತ್ತಿತ್ತು. ಮಳೆಗಾಲದಲ್ಲಿ ಒಳಗೆಲ್ಲಾ ಸೋರಿಕೆಯಾಗಿ ಅಧಿಕಾರಿಗಳಿಗೆ ಕಡತಗಳ ರಕ್ಷಣೆಯೇ ಇಲ್ಲಿ ಸವಾಲಾಗಿತ್ತು. ಬರುಬರುತ್ತಾ ಈ ಹಳೆ ಕಟ್ಟಡವು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿತ್ತು. ಬಳಿಕ ಸಮೀಪದ ಗ್ರಾ.ಪಂ.ನ ಕಟ್ಟಡಕ್ಕೆ ಇಲ್ಲಿನ ನಾಡಕಚೇರಿಯನ್ನು ಸ್ಥಳಾಂತರಿಸಲಾಯಿತು. ಆರು ತಿಂಗಳಾವಧಿಗೆ ಅವಕಾಶ ಬಯಸಿ ಸ್ಥಳಾಂತರಗೊಂಡ ನಾಡಕಚೇರಿಯು ವರ್ಷಗಳು ಉರುಳಿದರೂ ಸ್ವಂತ ಕಟ್ಟಡ ನಿರ್ಮಾಣವಾಗದ ಕಾರಣ ಪಂಚಾಯತ್ ಕಟ್ಟಡದಲ್ಲೇ ಕಾರ್ಯಚಟುವಟಿಕೆಯನ್ನು ಮುಂದುವರೆಸುವ ಸ್ಥಿತಿ ನಿರ್ಮಾಣವಾಗಿತ್ತು. ಈ ಮಧ್ಯೆ ಗ್ರಾ.ಪಂ. ನಿಂದಲೂ ತನ್ನ ಅವಶ್ಯಕತೆಗಳಿಗೆ ಕೊಠಡಿಯ ಅಗತ್ಯ ಇದೆ ಎಂದು ನಾಡ ಕಚೇರಿಯು ಕಾರ್ಯ ನಿರ್ವಹಿಸುವ ಕೊಠಡಿಯನ್ನು ಆಪೇಕ್ಷಿಸಿ ಕಂದಾಯ ಇಲಾಖೆಗೆ ಪತ್ರ ರವಾನಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಈ ಹಿಂದಿನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರು ನೂತನ ನಾಡಕಚೇರಿ ಕಟ್ಟಡಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಕಂದಾಯ ಇಲಾಖೆಯಿಂದ ಕಟ್ಟಡ ರಚನೆಗೆ 18.84 ಲಕ್ಷ ರೂ. ಅನುದಾನ ಕೂಡಾ ಮಂಜೂರಾಗಿತ್ತು. ಇದಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದ ಅಂದಿನ ಶಾಸಕ ಸಂಜೀವ ಮಟಂದೂರುರವರು ಉಪ್ಪಿನಂಗಡಿ ನೆರೆ ಪೀಡಿತ ಪ್ರದೇಶವಾಗಿರುವುದರಿಂದ ಇಲ್ಲಿ ಮಳೆಗಾಲದಲ್ಲಿ ಕಂದಾಯ ಇಲಾಖಾಧಿಕಾರಿಗಳು ಮೊಕ್ಕಾಂ ಹೂಡಬೇಕಾದ ಅನಿವಾರ್ಯತೆ ಇರುವುದರಿಂದ ನಿರ್ಮಾಣವಾಗಲಿರುವ ನಾಡಕಚೇರಿಯಲ್ಲಿ ಒಂದು ವಿಶ್ರಾಂತಿ ಗೃಹವೂ ರಚನೆಯಾಗಲಿ ಅದಕ್ಕಾಗಿ ತನ್ನ ಶಾಸಕತ್ವದ ನಿಧಿಯಿಂದ 5 ಲಕ್ಷ ರೂ. ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸುವುದಾಗಿ ತಿಳಿಸಿದ್ದರು.
ಐದು ಲಕ್ಷನೂ ಬರಲಿಲ್ಲ: ಶೌಚಾಲಯನೂ ಆಗಿಲ್ಲ!: ಕಟ್ಟಡ ರಚನೆಗೆ ಕಂದಾಯ ಇಲಾಖೆಯಿಂದ ಬಂದ 18.84 ಲಕ್ಷ ರೂ. ಅನುದಾನದಲ್ಲಿ ಶೌಚಾಲಯವೂ ಕಟ್ಟಡದ ರೂಪು- ರೇಷೆಯಲ್ಲಿ ಸೇರಿತ್ತು. ಆದರೆ ಅದು ಕಟ್ಟಡದ ಒಳಗೆ ರಚನೆ ಮಾಡಬೇಕಿತ್ತು. ನಿರ್ಮಿತಿ ಕೇಂದ್ರದ ಮೂಲಕ ಈ ಕಾಮಗಾರಿ ಅನುಷ್ಠಾನಗೊಂಡಿದ್ದು, ಕಟ್ಟಡದೊಳಗೆ ಶೌಚಾಲಯ ನಿರ್ಮಿಸಿದರೆ ಕಚೇರಿಗೆ ಸ್ಥಳಾವಕಾಶ ಕಡಿಮೆ ಆಗುತ್ತದೆ ಎಂದು ಕಟ್ಟಡದ ಹೊರಗೆ ಶೌಚಾಲಯ ನಿರ್ಮಿಸಲು ಅಧಿಕಾರಿಗಳು ನಿರ್ಮಿತಿ ಕೇಂದ್ರದವರಿಗೆ ಸೂಚಿಸಿದ್ದರು. ಮತ್ತೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಿಂದ ಬರುವ 5 ಲಕ್ಷದಲ್ಲಿ ಕಟ್ಟಡದ ಹೊರಗೆ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸಿಟೌಟ್ನಂತಹ ವ್ಯವಸ್ಥೆ, ವರಾಂಡಕ್ಕೆ ಇಂಟರ್ಲಾಕ್ ಸೌಲಭ್ಯ ಸೇರಿದಂತೆ ಇನ್ನಿತರ ಅಗತ್ಯ ಕೆಲಸಗಳನ್ನು ಮಾಡಲು ಹಾಗೂ ಈ ಕಾಮಗಾರಿಯ ಸಂದರ್ಭ ಶೌಚಾಲಯವನ್ನು ನಿರ್ಮಿಸಲು ನಿರ್ಮಿತಿಯವರು ಯೋಜನೆ ಹಾಕಿಕೊಂಡಿದ್ದರು. ಶಾಸಕರು ಹೇಳಿದ್ದ ಹೆಚ್ಚುವರಿ ಅನುದಾನವಾದ ಐದು ಲಕ್ಷ ರೂ. ಕೂಡಾ ಈವರೆಗೆ ಬಂದಿಲ್ಲ. ಅದು ಇನ್ನು ಬರುತ್ತೋ, ಇಲ್ಲವೋ ಎಂಬ ಬಗ್ಗೆಯೂ ಮಾಹಿತಿಯಿಲ್ಲ. ಯಾಕೆಂದರೆ ಅಂದಿನ ಶಾಸಕರು ಈಗ ಅಧಿಕಾರದಲ್ಲಿಲ್ಲ. ಆದ್ದರಿಂದ ಇಲ್ಲಿ ಐದು ಲಕ್ಷ ರೂ. ಹೆಚ್ಚುವರಿ ಅನುದಾನದಲ್ಲಿ ಯೋಜನೆ ಹಾಕಿಕೊಂಡಿದ್ದ ಕೆಲಸಗಳು ಬಾಕಿ ಉಳಿಯುವುದರೊಂದಿಗೆ ಇದರೊಟ್ಟಿಗೆ ಮಾಡೋಣ ಎಂದು ಇಟ್ಟಿದ್ದ ಶೌಚಾಲಯದ ಕೆಲಸವೂ ಬಾಕಿ ಉಳಿಯುವಂತಾಗಿದೆ.
ಚುನಾವಣೆ ಘೋಷಣೆಗೆ ಮೊದಲೇ ಉದ್ಘಾಟನೆ: 18.84 ಲಕ್ಷ ರೂ. ಅನುದಾನದಲ್ಲಿ ಕಚೇರಿ ಕಟ್ಟಡವೊಂದರಲ್ಲಿ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತಮ್ಮ ದೇಹ ಬಾಧೆ ತೀರಿಸಿಕೊಳ್ಳಲು ಅಗತ್ಯವಾಗಿ ಬೇಕಾಗಿದ್ದ ಶೌಚಾಲಯದ ವ್ಯವಸ್ಥೆ ಆಗದಿದ್ದರೂ, ನಿರ್ಮಾಣವಾಗಿದ್ದ ಮೂರು ಕೊಠಡಿಗಳ ನಾಡಕಚೇರಿ ಕಟ್ಟಡವನ್ನು ಕಳೆದ ಬಾರಿ ವಿಧಾನ ಸಭಾ ಚುನಾವಣಾ ಘೋಷಣೆಗೆ ಮುನ್ನವೇ ಈ ಹಿಂದಿನ ಶಾಸಕರು ಉದ್ಘಾಟಿಸಿದ್ದರು. ಕಳೆದ ಮಾ.20ರಂದು ನಾಡ ಕಚೇರಿ ಕಟ್ಟಡ ಉದ್ಘಾಟನೆಗೊಂಡರೂ, ಸಾರ್ವಜನಿಕರ ಉಪಯೋಗಕ್ಕೆ ಇದು ಬಂದಿಲ್ಲ. ನಾಡ ಕಚೇರಿಯ ಆವರಣವೀಗ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಬಿಟ್ಟಿದೆ. ಉಪ್ಪಿನಂಗಡಿಯು ಮಳೆಗಾಲದಲ್ಲಿ ನೆರೆ ಪೀಡಿತ ಪ್ರದೇಶವಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಇಲ್ಲೇ ಮೊಕ್ಕಾಂ ಹೂಡಬೇಕಾದ ಸ್ಥಿತಿಯಿದೆ. ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ನಾಡ ಕಚೇರಿಯನ್ನು ನೂತನ ಕಚೇರಿಗೆ ಸ್ಥಳಾಂತರಿಸಿದಲ್ಲಿ ಸಾರ್ವಜನಿಕರಿಗೆ ಹಾಗೂ ಅಽಕಾರಿಗಳಿಗೂ ಪ್ರಯೋಜನ ಇದೆ. ಆದ್ದರಿಂದ ಶೀಘ್ರವಾಗಿ ಈ ಕಚೇರಿಗೆ ಕಾರ್ಯಾರಂಭದ ಭಾಗ್ಯ ನೀಡಲು ಕಂದಾಯ ಇಲಾಖೆ ಯೋಚಿಸಬೇಕಾಗಿದೆ ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.
ಶೀಘ್ರ ಅನುದಾನ ಬಿಡುಗಡೆ: ಶಾಸಕ ಅಶೋಕ್ ರೈ
ಉಪ್ಪಿನಂಗಡಿಯ ಹಾಗೆ ವಿಟ್ಲದ ನಾಡಕಚೇರಿ ಕಟ್ಟಡದಲ್ಲೂ ಇದೇ ಸಮಸ್ಯೆಯಾಗಿದೆ. ಈ ಕಟ್ಟಡಗಳು ಶೀಘ್ರವಾಗಿ ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕು. ಅದಕ್ಕಾಗಿ ಇಲ್ಲಿಗೆ ಬೇಕಾಗಿರುವ ತಲಾ ಐದು ಲಕ್ಷದಂತೆ 10 ಲಕ್ಷ ಹೆಚ್ಚುವರಿ ಅನುದಾನವನ್ನು ತಾನು ತನ್ನ ಅನುದಾನದಿಂದ ತಕ್ಷಣವೇ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ.
- ಅಶೋಕ್ ಕುಮಾರ್ ರೈ,
ಶಾಸಕರು, ಪುತ್ತೂರು ವಿಧಾನ ಸಭಾ ಕ್ಷೇತ್ರ
ಕಂದಾಯ ಇಲಾಖೆಯ 18.84 ಲಕ್ಷ ರೂ. ಅನುದಾನದಲ್ಲಿ ನೂತನ ನಾಡಕಚೇರಿ ಕಟ್ಟಡವನ್ನು ನಿರ್ಮಿಸಲಾಗಿದೆ. ಯೋಜನೆಯ ರೂಪುರೇಷೆಯಂತೆ ಇದರಲ್ಲಿ ಕಟ್ಟಡದ ಒಳಗಡೆ ಶೌಚಾಲಯ ಇತ್ತು. ಆದರೆ ಇಲ್ಲಿನ ಅಧಿಕಾರಿಗಳು ಒಳಗಡೆ ಶೌಚಾಲಯ ಬೇಡ. ಹೊರಗಡೆ ಇರಲಿ ಎಂದದ್ದಕ್ಕೆ ಅದು ಬಾಕಿ ಉಳಿಯಿತು. ಇನ್ನು ಹೊರಗಡೆ ವರಾಂಡಕ್ಕೆ ಇಂಟರ್ಲಾಕ್, ಸಾರ್ವಜನಿಕರು ಸಿಟೌಟ್ ವ್ಯವಸ್ಥೆ ಸೇರಿದಂತೆ ಇನ್ನಿತರ ಕೆಲಸಗಳಿಗಾಗಿ ಶಾಸಕರ ಸ್ಥಳೀಯಾಭಿವೃದ್ಧಿ ನಿಧಿಯಿಂದ 5 ಲಕ್ಷ ರೂ.ಗಳನ್ನು ಕೊಡುತ್ತೇನೆ ಎಂದು ಅಂದಿನ ಶಾಸಕರು ತಿಳಿಸಿದ್ದರು. ಆಗ ಶೌಚಾಲಯ ನಿರ್ಮಾಣದ ಕೆಲಸ ಕೂಡಾ ಒಟ್ಟಿಗೆ ಮಾಡೋಣ ಅಂತ ಅದನ್ನು ಹಾಗೆ ಬಾಕಿ ಉಳಿಸಿ, ಕಟ್ಟಡವನ್ನು ಮಾತ್ರ ನಿರ್ಮಿಸಿದ್ದೇವೆ. ಆದರೆ ಶಾಸಕರು ಹೇಳಿದ ಐದು ಲಕ್ಷ ರೂ. ಹೆಚ್ಚುವರಿ ಅನುದಾನ ಬರಲಿಲ್ಲ. ಆದ್ದರಿಂದ ಈ ಮೊದಲಿನ ರೂಪುರೇಷೆಯಲ್ಲಿದ್ದ ಶೌಚಾಲಯವನ್ನು ಒಳಗಡೆ ಅಥವಾ ಹೊರಗಡೆ ಎಲ್ಲಿ ಬೇಕೋ ಅಲ್ಲಿ 10 ದಿನಗಳೊಳಗೆ ನಿರ್ಮಿಸಲಾಗುವುದು.
- ಹರೀಶ್ , ಸಹಾಯಕ ಯೋಜನಾ ವ್ಯವಸ್ಥಾಪಕರು,
ನಿರ್ಮಿತಿ ಕೇಂದ್ರ ದ.ಕ. ಜಿಲ್ಲೆ
ಕಟ್ಟಡ ಕಾಮಗಾರಿ ಯೋಜನೆಯ ರೂಪುರೇಷೆಯಲ್ಲಿದ್ದಂತೆ ಕಟ್ಟಡದ ಒಳಗಡೆ ಶೌಚಾಲಯ ಮಾಡಿದರೆ, ಅಲ್ಲಿ ಸ್ಥಳಾವಕಾಶದ ಕೊರತೆ ಎದುರಾಗುತ್ತದೆ. ಆದ್ದರಿಂದ ಅದನ್ನು ಹೊರಗಡೆ ಮಾಡಿ ಎಂದು ನಾವು ಹೇಳಿದ್ದೆವು. ಅದಕ್ಕೆ ಅವರು ಒಪ್ಪಿಕೊಂಡಿದ್ದರು. ಈಗ ಕಟ್ಟಡದ ನಿರ್ಮಾಣ ಮಾತ್ರ ಆಗಿದೆ. ಕಟ್ಟಡದೊಳಗೆ ಉಪತಹಶೀಲ್ದಾರ್, ಕಂದಾಯ ನಿರೀಕ್ಷಕರ ಕಚೇರಿಗೆ ಪಾರ್ಟೇಶನ್, ಬಂದ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಕಟ್ಟಡದ ಹೊರಭಾಗದಲ್ಲಿ ಸಿಟೌಟ್ನಂತಹ ರಚನೆ ಮೊದಲಾದ ಕೆಲಸಗಳು ಆಗಬೇಕಿದೆ. ಈ ಎಲ್ಲಾ ಹೆಚ್ಚುವರಿ ಕಾಮಗಾರಿಗೆ ಆಗಿನ ಶಾಸಕರು ಐದು ಲಕ್ಷ ರೂ. ಅನುದಾನವನ್ನು ಹೆಚ್ಚುವರಿಯಾಗಿ ನೀಡುತ್ತೇನೆ ಎಂದಿದ್ದರು. ಆದರೆ ಆ ಅನುದಾನ ಇನ್ನೂ ಬಂದಿಲ್ಲವೆಂಬ ಮಾಹಿತಿ ಇದೆ. ಆದ್ದರಿಂದ ಈ ಕೆಲಸಗಳೆಲ್ಲಾ ಪೆಂಡಿಂಗ್ ಆಗಿದೆ. ಶೌಚಾಲಯವನ್ನು ನಿರ್ಮಿಸಿಕೊಡಲು ನಿರ್ಮಿತಿ ಕೇಂದ್ರದವರಿಗೆ ತಿಳಿಸಿದ್ದೇವೆ.
- ಚೆನ್ನಪ್ಪ ಗೌಡ, ಉಪತಹಶೀಲ್ದಾರರು
ಉಪ್ಪಿನಂಗಡಿ ಕಂದಾಯ ಹೋಬಳಿ