ನಮ್ಮ ನಡುವೆ ಇರುವ ನಿರ್ವಾಹಕ ಬಂಧು

0

ಈಗಿನ ಕಾಲದಲ್ಲಿ ಎಲ್ಲರೂ ವಾಹನಗಳನ್ನು ಅವಲಂಬಿಸಿಯೇ ಜೀವನ ಸಾಗಿಸುತ್ತಿದ್ದಾರೆ. ಕೆಲವರು ಸ್ವಂತ ವಾಹನದಲ್ಲಿ ಪ್ರಯಾಣಿಸಿದರೆ ಇನ್ನೂ ಹೆಚ್ಚಿನವರು ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುತ್ತಾರೆ. ಸಾರ್ವಜನಿಕರ ಪ್ರಯಾಣ ಸುಖಕರವಾಗಿರಲಿ ಎಂದು ವಾಹನ ಚಾಲಕರು ಆದಷ್ಟು ಜಾಗರೂಕತೆಯಿಂದ ಚಲಾಯಿಸುತ್ತಾರೆ. ಹಿಂದೆಲ್ಲ ಈಗಿನ ಹಾಗೆ ಪೆಟ್ರೋಲ್, ಡೀಸೆಲ್ ಮೂಲಕ ಸಾಗುವ ವಾಹನಗಳಿರಲಿಲ್ಲ ಬದಲಾಗಿ ಎತ್ತಿನಗಾಡಿ,ಕುದುರೆಗಾಡಿಯ ಮೂಲಕ ಒಂದು ಊರಿಂದ ಇನ್ನೊಂದು ಊರಿಗೆ ಪ್ರಯಾಣ ಬೆಳೆಸುತ್ತಿದ್ದರು.

ನಾವು ಓಡಾಡುವ ಬಸ್ಸಿನಲ್ಲಿ ನಿರ್ವಾಹಕರ ಪಾತ್ರ ಮಹತ್ವದ್ದು. ಪ್ರಯಾಣಿಕರ ಜೊತೆ ಅವರ ಸಂಭಾಷಣೆಯ ಶೈಲಿ ಬಹಳ ಮುಖ್ಯವಾಗಿರುತ್ತದೆ. ಅವರು ಯಾವ ರೀತಿಯಾಗಿ ವರ್ತಿಸುತ್ತಾರೋ ಅದರ ಮೇಲೆ ಅವರ ವ್ಯಕ್ತಿತ್ವ ನಿಂತಿರುತ್ತದೆ. ಕೆಲವರಂತೂ ಯಾವಾಗಲೂ ಕೋಪಿಷ್ಠರಂತೆ ಇರುತ್ತಾರೆ. ಇನ್ನು ಕೆಲವರು ಬಹಳ ತಾಳ್ಮೆಯಿಂದ ವರ್ತಿಸುತ್ತಾರೆ. ತಾಳ್ಮೆ ಇರುವ ವ್ಯಕ್ತಿ ಎಂತಹ ಕಲ್ಲು ಮನಸ್ಸನ್ನು ಕೂಡ ಗೆಲ್ಲಬಹುದು. ಹೀಗೆ ನಾನು ಪದವಿಗೆ ಬಂದ ನಂತರ ನೋಡಿದ ಅಷ್ಟೂ ನಿರ್ವಾಹಕರಲ್ಲಿ ಒಬ್ಬ ವ್ಯಕ್ತಿ ಮಾತ್ರ ನನ್ನ ಹೃದಯದಲ್ಲಿ ಗೌರವದ ಸ್ಥಾನಕ್ಕೆ ಪಾತ್ರರಾಗಿದ್ದಾರೆ.

ನಮ್ಮ ಊರು ಕಡಬದಿಂದ ಪುತ್ತೂರಿಗೆ ಶಾಂತಿಮೊಗರು ದಾರಿಯಾಗಿ ಬರುವ ಬಸ್ಸಿನಲ್ಲಿ ನಾನು ಮೂವರು ನಿರ್ವಾಹಕರನ್ನು ನೋಡಿದ್ದೇನೆ. ಆದರೆ ಅವರಲ್ಲಿ ಒಬ್ಬರಿಗೆ ಅತಿಯಾದ ತಾಳ್ಮೆ. ಒಬ್ಬರ ಮುಖ ನೋಡಿಯೇ ಅವರ ಗುಣವನ್ನು ಅಂದಾಜು ಮಾಡಬಹುದಲ್ಲ ಹಾಗೆಯೇ ಇವರನ್ನು ನೋಡಿದಾಗ ಇವರದು ಮುಗ್ಧ ಮನಸ್ಸು ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ. ನನಗೆ ಅವರನ್ನು ನೋಡಿದಾಗೆಲ್ಲ ಅಪ್ಪನ ಸಮಾನ ಎನ್ನುವ ಭಾವನೆ ಮೂಡುತ್ತದೆ. ಆದರೆ ನನಗೆ ಅವರು ಮೊದಲು ಪರಿಚಯವಾಗಿದದ್ದೇ ನನ್ನ ಅಪ್ಪನಿಂದ. ಪ್ರಸ್ತುತ ನಾನು ಬಾಲಕಿಯರ ವಸತಿ ನಿಲಯ ನರಿಮೊಗರಿನಿಂದ ನಮ್ಮ ಕಾಲೇಜಿಗೆ ಹೋಗುತ್ತಿದ್ದೇನೆ. ಹಾಗೆ ಕ್ರಿಸ್ಮಸ್ ರಜೆ ಸಿಕ್ಕಿದಾಗ ಅಪ್ಪ ನನ್ನನ್ನು ಕರೆದುಕೊಂಡು ಹೋಗಲೆಂದು ಬಂದ ಬಸ್ಸಿನಲ್ಲಿ ಇದ್ದ ನಿರ್ವಾಹಕರು ನಾನು ಹೇಳಿದ ಅದೇ ವ್ಯಕ್ತಿ. ಅಪ್ಪನಿಗೆ ನರಿಮೊಗರು ಎಲ್ಲೆಂದು ಸರಿಯಾಗಿ ಅಂದಾಜಿಲ್ಲದ ಕಾರಣ ಅವರಲ್ಲಿ ನರಿಮೊಗರು ಬಂದಾಗ ಹೇಳಿ ಎಂದು ಕೇಳಿದ್ದರಂತೆ. ಮತ್ತೆ ನಾವು ಮನೆಗೆ ಹೋಗಲೆಂದು ನಿಂತಿದ್ದಾಗ ಸಿಕ್ಕಿದ ಬಸ್ಸಿನಲ್ಲಿ ಅವರೇ ಇದ್ದರು. ಆಗ ಅಪ್ಪ ಈ ಸಂಗತಿಯನ್ನು ನನಗೆ ಹೇಳಿದರು. ಅವರು ಕೂಡ ಅಪ್ಪನ ಜೊತೆ ಮಾತನಾಡಿದರು. ನಾನು ಮಗಳೆಂದು ಅವರಿಗೂ ತಿಳಿಯಿತು. ಅಲ್ಲಿ ಪರಿಚಯವಾದ ಮುಖದೊಂದಿಗೆ ಗೊತ್ತಿಲ್ಲದ ನಂಟು ಬೆಳೆಯಿತು. ಅವರು ಮತ್ತೆ ಮತ್ತೆ ಸಿಕ್ಕರೂ ನಮ್ಮ ಮಧ್ಯೆ ಮಾತು ಕಮ್ಮಿಯಾಗಿ ಬಾಂಧವ್ಯದ ಬಂಧ ಜೊತೆಯಾಗಿತ್ತು. ಅಪ್ಪ – ಮಗಳ ಸಂಬಂಧದಂತೆ ನಾವಿಬ್ಬರು ಇದ್ದೇವೆ.ಒಂದು ದಿನ ಅವರು ನನ್ನ ಜೊತೆ ಸ್ವಲ್ಪ ಹೊತ್ತು ಮಾತನಾಡಿದರು. ಅವರು ಎಷ್ಟು ಮುಗ್ಧರು, ಪ್ರಾಮಾಣಿಕರು ಎಂದು ಮತ್ತೆ ಸಾಬೀತಾಯಿತು. ಅವರ ನಡವಳಿಕೆ

ಹಾವ – ಭಾವ ಎಲ್ಲರೂ ಮೆಚ್ಚುವಂತದ್ದೆ. ಸಾರ್ವಜನಿಕರು ಕೆಲವು ನಿರ್ವಾಹಕ, ಚಾಲಕರ ನಡವಳಿಕೆ ನೋಡಿ ಎಲ್ಲರಿಗೂ ಬೈದುಕೊಳ್ಳುತ್ತಾರೆ. ಆದರೆ ಎಲ್ಲಾ ಮನುಷ್ಯರು ಒಂದೇ ರೀತಿ ಇರುವುದಿಲ್ಲ ಎನ್ನುವುದನ್ನು ಮರೆಯುತ್ತಾರೆ. ಕೆಲವರಂತೂ ಹುಡುಗಿಯರ ಮೈಮುಟ್ಟುವುದಕ್ಕೆ ಬಕಪಕ್ಷಿಯಂತೆ ಕಾಯುತ್ತಿರುತ್ತಾರೆ. ಹುಡುಗಿ/ಮಹಿಳೆಯರು ಬಸ್ಸಿನಲ್ಲಿ ನಿಂತುಕೊಂಡಿದ್ದಾಗ ಟಿಕೆಟ್ ಮಾಡಿ ಆಗಿದ್ದರೂ ಸುಮ್ಮನೆ ಆಚಿಂದಿಚಿಗೆ ಅಳೆದಾಡುತ್ತಾರೆ. ಇಂತಹ ರಾಕ್ಷಸರನ್ನು ನಾನು ಹೆಚ್ಚಾಗಿ ನೋಡಿದ್ದೇನೆ. ಹಾಗೆಯೇ ಅಂತಹವರ ಕಾಲಿಗೆ ತುಳಿದಿದ್ದೇನೆ ಸಹ. ಅವರು ನಿಷ್ಠಾವಂತರಾಗಿದ್ದರೆ ತಿರುಗಿ ಮಾತನಾಡುತ್ತಾರೆ ಇಲ್ಲದಿದ್ದರೆ ಬಾಯ್ ಮುಚ್ಚಿಕೊಂಡು ಹೋಗುತ್ತಾರೆ. ಇಂತಹ ಕೆಲವು ನಿರ್ವಾಹಕರನ್ನು ನೋಡಿ ಎಲ್ಲರೂ ಅದೇ ರೀತಿ ಎಂದು ಲೆಕ್ಕ ಹಾಕುವುದು ತಪ್ಪು. ನಿರ್ವಾಹಕರು ಮಾಡಿದ ತಪ್ಪಿಗೆ ಅವರು ಶಿಕ್ಷೆ ಅನುಭವಿಸುವುದು ಸರಿ. ಆದರೆ ಸಾರ್ವಜನಿಕರು ಮಾಡಿದ ತಪ್ಪಿಗೂ ಅವರೇ ಶಿಕ್ಷೆ ಅನುಭವಿಸುವುದು ಸಮಂಜಸವಲ್ಲ. ನಾವು ಹತ್ತುವ ಮೊದಲು ಮತ್ತು ನಂತರವೂ ನಿರ್ವಾಹಕರು ಎಚ್ಚರಿಕೆಯ ನುಡಿಗಳನ್ನು ಆಡುತ್ತಾರೆ. ಅವರ ಮಾತನ್ನು ನಿರ್ಲಕ್ಷಿಸಿದಾಗ ಅವಘಡಗಳು ಸಂಭವಿಸುತ್ತವೆ. ಅದರಲ್ಲಿ ತಪ್ಪು ಸಾರ್ವಜನಿಕರದ್ದೇ ಆದರೂ ವಂತಿಗೆ ಕಟ್ಟಿ ಕೆಲಸ ಕಳೆದುಕೊಳ್ಳುವುದು ನಿರ್ವಾಹಕ ಚಾಲಕರಾಗಿರುತ್ತಾರೆ.

ಹೀಗೆ ಎಚ್ಚರಿಕೆಯ ಮಾತುಗಳನ್ನು ಆಡುವವರಲ್ಲಿ ನಾ ಕಂಡ ನಿರ್ವಾಹಕ ಕುಮಾರಪ್ಪ ಕೂಡ ಒಬ್ಬರು. ಇವರು ಮೂಲತಃ ಸಕಲೇಶಪುರದವರು. ಇವರ ಕೆಲಸ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಅದೂ ನಮ್ಮದೇ ಶಾಂತಿಮೊಗರು ಬಸ್ಸಿನ ನಿರ್ವಾಹಕರಾಗಿ. ಇವರನ್ನು ಕಂಡಾಗ ನನ್ನಲ್ಲಿ ಗೌರವದ ಭಾವನೆ ಮೂಡುತ್ತದೆ. ಇವರು ಎಲ್ಲಾ ನಿರ್ವಾಹಕರಿಗೂ ಒಂದು ಸ್ಪೂರ್ತಿ. ಎಷ್ಟೋ ಕೆಟ್ಟ ಮನಸ್ಸುಗಳ ಮಧ್ಯೆ ಇಂತಹ ನಿಷ್ಕಲ್ಮಶ ಮನಸ್ಸಿನ ನಿರ್ವಾಹಕರು ಇರುತ್ತಾರೆ. ನಮ್ಮ ಬದುಕಿನಲ್ಲಿ ಇಂತಹ ಒಳ್ಳೆಯವರು ಆಗಾಗ ಬಂದು ಹೋಗುತ್ತಿರುತ್ತಾರೆ. ಈ ಸ್ವಭಾವದವರು ಎಲ್ಲಾ ಬಸ್ಸುಗಳಲ್ಲಿಯೂ ಸಿಗಲಿ. ಈಗ ನಿರ್ವಾಹಕರ ಬಗ್ಗೆ ಕೆಟ್ಟದಾಗಿ ಮಾತನಾಡುವ ಜನರು ಮುಂದೆ ಒಳ್ಳೆಯದನ್ನೇ ಹೇಳುವಂತಾಗಲಿ. ಕುಮಾರಪ್ಪ ಎಂದಿಗೂ ಹೀಗೆ ಇರಲಿ. ನಮ್ಮಿಬ್ಬರ ಬಾಂಧವ್ಯದ ಬೆಸುಗೆ ಎಂದೆಂದಿಗೂ ಮಾಸದಿರಲಿ…

ಪ್ರಮೀಳಾ ವಾಟೆಕಜೆ
ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು, ಪುತ್ತೂರು

LEAVE A REPLY

Please enter your comment!
Please enter your name here