ಕೋಡಿಂಬಾಡಿ ಗ್ರಾಮಸ್ಥರು ತಲೆತಗ್ಗಿಸುವ ಕೆಲಸವನ್ನು ಎಂದಿಗೂ ಮಾಡಲಾರೆ; ಅಶೋಕ್ ಕುಮಾರ್ ರೈ
ಪುತ್ತೂರು: “ ನಾನು 20 ವರ್ಷ ಬಿಜೆಪಿಯಲ್ಲಿ ಸಕ್ರೀಯನಾಗಿದ್ದೆ, ಈ ಬಾರಿ ಬಿಜೆಪಿಯಲ್ಲಿ ಟಿಕೆಟ್ ಕೇಳಿದ್ದೆ ಬಿಜೆಪಿಯಲ್ಲಿ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ಸೇರಿದೆ, ಅವಕಾಶ ಸಿಕ್ಕಿತು, ಸ್ಪರ್ಧೆ ಮಾಡಿದೆ, ಗೆದ್ದೆ , ಶಾಸಕನಾದೆ. ನಾನು ಹಣ ಮಾಡಬೇಕೆಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ, ಬಡವರ ಸೇವೆ ಮಾಡಬೇಕು ಎಂಬ ಏಕೈಕ ಉದ್ದೇಶದಿಂದ ರಾಜಕೀಯ ಸೇರಿದೆ. ಹುಟ್ಟೂರಿನ ಗ್ರಾಮಸ್ಥರು ಸಹಕಾರ ನಾನು ನಂಬುವ ತಾಯಿ ಮಹಿಷಮರ್ಧಿನಿಯ ಆಶೀರ್ವಾದದಿಂದ ನಾನು ಇಂದು ಪುತ್ತೂರು ಕ್ಷೇತ್ರದ ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನಿಮ್ಮ ಮೇಲೆ ನನಗೆ ಋಣ ಇದೆ ಅದನ್ನು ತೀರಿಸುವ ಕೆಲಸವನ್ನು ಮಾಡುತ್ತೇನೆ ಮತ್ತು ಕೋಡಿಂಬಾಡಿ ಗ್ರಾಮದ ಜನತೆ ತಲೆತಗ್ಗಿಸುವ ಕೆಲಸವನ್ನು ಎಂದಿಗೂ ಮಾಡಲಾರೆ ಎಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಜೂ. 18 ರಂದು ಕೋಡಿಂಬಾಡಿ ಶ್ರೀ ಮಹಿಷಮರ್ಧಿನಿ ದೆವಸ್ಥಾನದ ಸಭಾಂಗಣದಲ್ಲಿ ಶಾಸಕರಿಗೆ ಗ್ರಾಮಸ್ಥರು ಆಯೋಜಿಸಿದ ಹುಟ್ಟೂರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ನಾನು ಅನೇಕ ಪರ , ವಿರೋಧವನ್ನು ಎದುರಿಸಿ ಚುನಾವಣೆಗೆ ನಿಂತಿದ್ದೇನೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದಾಗ ಹಲವಾರು ಮಂದಿ ನನ್ನನ್ನು ತಮಾಷೆ ಮಾಡಿದ್ದೂ ಉಂಟು ಆಯೆ ಪೋಯೆ ಈ ಸರ್ತಿ ಎಂದು ಹೇಳಿದವರೂ ಇದ್ದಾರೆ. ಎಲ್ಲವನ್ನೂ ಸಹಿಸಿಕೊಂಡು ನಾನು ಜನರ ಬಳಿ ಹೋದೆ ಜನ ಆಶೀರ್ವಾದ ಮಾಡಿದರು. ನನಗೆ ಬಡವರ ಸೇವೆ ಒಂದು ಹವ್ಯಾಸವಾಗಿ ಬಿಟ್ಟಿದೆ. ಅವರಿಗೋಸ್ಕರವೇ ರಾಜಕೀಯಕ್ಕೆ ಬಂದ ನಾನು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ಬಡವರ ಸೇವೆಯನ್ನು ನಿಲ್ಲಿಸುವುದೇ ಇಲ್ಲ ಎಂದು ಹೇಳಿದರು. ನಾನು ಈ ಬಾರಿ ಶಾಸಕನಾಗುತ್ತೇನೋ ಇಲ್ಲವೋ ಎಂಬುದು ನನಗೇ ಗೊತ್ತಿರಲಿಲ್ಲ. ನಾನು ತಾಯಿ ಮಹಿಷಮರ್ದಿನಿಯಲ್ಲಿ ಬೇಡಿಕೊಂಡೆ ನನಗೆ ಶಕ್ತಿ ಕೊಡು ನಿನ್ನ ಸೇವೆಯನ್ನು ಮಾಡುವೆ ಎಂದು ಬೇಡಿದೆ. ದೇವಿ ನನಗೆ ಶಕ್ತಿ ಕೊಟ್ರು ಕೊನೇ ಗಳಿಗೆಯಲ್ಲಿ ಬ್ಯಾಟ್ ಕೊಟ್ರು ಸಿಕ್ಸ್ ಬಾರಿಸು ಎಂದು ದೇವಿಯ ಅಪ್ಪಣೆಯಾಗಿತ್ತು, ಸಿಕ್ಸ್ ಭಾರಿಸಿದೆ ಅದು ಅದರಾಚೆಗೂ ದಾಟಿತು ಗೆದ್ದು ಬಿಟ್ಟೆ ಎಲ್ಲವೂ ದೇವರ ಶಕ್ತಿ ಮತ್ತು ಜನರ ಆಶೀರ್ವಾದ ಎಂದು ಹೇಳಿದರು.
ಕೋಡಿಂಬಾಡಿಯವರು ಶಾಸಕರಾಗುವುದಿಲ್ಲ ಎಂದು ಹೇಳುತ್ತಿದ್ರು
ಕೋಡಿಂಬಾಡಿಯವರು ಶಾಸಕರಾಗುವುದಿಲ್ಲ ಎಂದು ಇಲ್ಲಿ ಒಂದು ಮಾತಿತ್ತು. ಈ ಹಿಂದೆ ಬಿಜೆಪಿಯ ಬಾಲಕೃಷ್ಣ ಬೋರ್ಕರ್ ಶಾಸಕರಾಗುವ ಅವಕಾಶ ಇತ್ತು ಆದರೆ ಕೊನೇ ಗಳಿಗೆಯಲ್ಲಿ ಅದು ತಪ್ಪಿ ಹೋಗಿತ್ತು. ಈ ಮಾತು ಈ ಬಾರಿ ಸುಳ್ಳಾಗಿದೆ. ದೇವಿಯ ಆಶೀರ್ವಾದದಿಂದ ಅದು ಸಾಧ್ಯವಾಗಿದೆ ಎಂದು ಶಾಸಕ ರೈ ಹೇಳಿದರು.
ಸೀಟ್ ಸಿಗುವುದೇ ಡೌಟಿತ್ತು
ಪುತ್ತೂರಿನಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಗುತ್ತದೋ ಇಲ್ಲವೋ ಎಂಬ ಡೌಟಿತ್ತು. ಕೊನೆಗೆ ಸೀಟಾಯ್ತು, ಸ್ಪರ್ದೆ ಮಾಡಿದೆ, ಗೆದ್ದೆ . ಈಗ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕನಾಗಿದ್ದೇನೆ. ಯು ಟಿ ಖಾದರ್ ಸ್ಪೀಕರ್ ಆದ ಕಾರಣ ಅವರಿಗೆ ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಈಗ ಎರಡೂ ಜಿಲ್ಲೆಯ ಕೆಲಸ ಕಾರ್ಯಗಳ ಒತ್ತಡವೂ ಇದೆ. ಪಕ್ಕದ ಸುಳ್ಯ ಕ್ಷೇತ್ರದ ಹೆಚ್ಚುವರಿ ಜವಾಬ್ದಾರಿಯನ್ನೂ ನೀಡಿದ್ದಾರೆ ಎಂದು ಹೇಳಿದರು.ನಾನು ಬೆಂಗಳೂರಿಗೆ ಹೋದಾಗ ಅಲ್ಲಿ ಕೆಲವರು ಎರಡನೇ ನಾಗಾಪುರದ ಶಾಸಕರು ಬಂದ್ರು ಎಂದು ತಮಾಷೆಗೆ ಹೇಳುವುದುಂಟು ಎಂದು ಶಾಸಕರು ಹೇಳಿದರು.
ಗ್ರಾಮದವರ ಕಷ್ಟಸುಖಕ್ಕೆ ಸ್ಪಂದಿಸಿದ್ದೇನೆ
ಕೋಡಿಂಬಾಡಿ ಗ್ರಾಮದಲ್ಲಿ ತನ್ನ ತಂದೆಯವರಿಂದ ಅಕ್ಷರ ಕಲಿಯದವರು ಬಹಳ ವಿರಳ. ಇಲ್ಲಿನ ಬಹುತೇಕ ಮಂದಿ ಹಿರಿಯರಿಗೆ ನನ್ನ ತಂದೆ ಒಂದು ದಿನವಾದರೂ ಪಾಠ ಮಾಡಿದ್ದಾರೆ. ನಾನೆಂದೂ ಬೇದ ಬಾವ ಮಾಡುವವನಲ್ಲ. ಕೋಡಿಂಬಾಡಿ ಗ್ರಾಮದವರ ಕಷ್ಟ ಸುಖ ಎರಡರಲ್ಲೂ ಭಾಗಿಯಾಗಿದ್ದೇನೆ. ಚುನಾವಣೆಯಲ್ಲಿ ಕೋಡಿಂಬಾಡಿಯಿಂದ ಮತಗಳಿಕೆ ಕಮ್ಮಿಯಾಗಿದೆ ಎಂದು ನನ್ನ ಬಳಿ ಕೆಲವರು ಕೇಳಿದ್ದಾರೆ. ನಾನು ಕೋಡಿಂಬಾಡಿಯ ಯಾರಿಗೂ ಅನ್ಯಾಯ ಮಾಡಿಲ್ಲ, ಮನಸ್ಸಿಗೂ ನೋವು ಕೆಲಸ ಮಾಡಿಲ್ಲ. ನನ್ನ ಗ್ರಾಮದ ಜನತೆ ನನ್ನನ್ನು ಎಂದೂ ಕೈ ಬಿಡಲಾರರು ಎಂಬ ಬಲವಾದ ನಂಬಿಕೆ ನನ್ನಲ್ಲಿದೆ . ಕೋಡಿಂಬಾಡಿ ಗ್ರಾಮಸ್ಥರ ಆಶೀರ್ವಾದವೇ ನನಗೆ ದೊಡ್ಡ ಉಡುಗೋರೆಯಾಗಿದೆ ಎಂದು ಹೇಳಿದರು. ನಿಮ್ಮೆಲ್ಲರ ಸಹಕಾರದಿಂದ ನಾನು ಶಾಸಕನಾಗಿದ್ದೇನೆ ಮುಂದೆಯೂ ನಿಮ್ಮೆಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.ಗ್ರಾಮ ದೇವಸ್ಥಾನದ ಅಬಿವೃದ್ದಿಗೆ ತನ್ನಿಂದಾದ ಸಹಾಯವನ್ನು ಮುಂದುವರೆಸುವುದಾಗಿ ಭರವಸೆ ನೀಡಿದರು.
ಲಂಚ ಪಡೆದರೆ ಸುಮ್ಮನಿರಲ್ಲ
ಯಾರೇ ಅಧಿಕಾರಿಯಾಗಲಿ ಯಾರಿದಂಲೂ ಲಂಚ ಕೇಳಬಾರದು. ಲಂಚ ಕೇಳಿದರೆ ಆ ವಿಚಾರವನ್ನು ನಾನು ಗಂಭೀರವಾಗಿ ಪರಿಗಣಿಸುವೆ. ಬಡವರ ಹಣ ನಿಮಗೆ ಯಾಕೆ? ಕೆಲಸ ಮಾಡಿಸಲು ಬಂದರೆ ಅದನ್ನು ಮಾಡಿಕೊಡಿ. ಕೆಲಸಕ್ಕಾಗಿ ಲಂಚ ಕೇಳಿದ ಗ್ರಾಮಕರನಿಕಗೆ ಕರೆ ಮಾಡಿ ಪ್ರಶ್ನಿಸಿದ್ದೇನೆ. 30 ಸಾವಿರ ಲಂಚ ಪಡೆದುಕೊಂಡಿರುವ ಬಗ್ಗೆ ಗಮನಕ್ಕೆ ಬಂದಿತ್ತು. ಕರೆ ಮಾಡಿ 35 ಸಾವಿರ ರೂ ಮರಳಿಸುವಂತೆ ಸೂಚನೆ ನೀಡಿದ್ದೇನೆ. ಸೇಂದಿ ಮಾರಾಟ ಮಾಡುವಾತನಿಂದ ಅಬಕಾರಿಯವರು 50 ಸಾವಿರ ಲಂಚ ಪಡೆದುಕೊಂಡಿದ್ದು ಮಾತ್ರವಲ್ಲದೆ ಸೇಂದಿ ಮಾರುವಾತನ ವಾಹವನ್ನು ಸೀಝ್ ಮಾಡಿದ್ದರೂ ಲಂಚ ಪಡೆದ ಹಣವನ್ನು ಅಬಕಾರಿ ಅಧಿಕಾರಿ ಮೂಲಕವೇ ಮರಳಿಸಿದ್ದೇನೆ. ಭೃಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಫ್ಲಾಟಿಂಗ್, 94 ಸಿ, 94 ಸಿಸಿ, ಕಟ್ ಕನ್ವರ್ಶನ್ ಹೀಗೇ ಕಂದಾಯ ಇಲಾಖೆಗೆ ಸಂಬಂದಿಸಿದ ವಿಚಾರಕ್ಕೆ ಇಲ್ಲಿ ಲಂಚಗಳು ನಡೆಯುತ್ತದೆ ಎಂಬ ವಿಚಾರ ಗಮನಕ್ಕೆ ಬಂದಿದೆ ಎಂದು ಶಾಸಕರು ಹೇಳಿದರು.
ಅಧಿಕಾರಿಗಳ ಬಗ್ಗೆ ಅಪಾರ ಗೌರವ ಇದೆ
ತಾಲೂಕಿನ ಎಲ್ಲಾ ಅಧಿಕಾರಿಗಳ ಬಗ್ಗೆ ನನಗೆ ಅಪಾರ ಗೌರವ ಇದೆ. ಅಧಿಕಾರಿಗಳು ಇಲ್ಲದೇ ಇದ್ದರೆ ಯಾವ ಕೆಲಸವೂ ಆಗುವುದಿಲ್ಲ. ನಿಷ್ಟಾವಂತ ಅಧಿಕಾರಿಗಳಿಂದಾಗಿ ಅನೇಕ ಅಭಿವೃದ್ದಿ ಪರ ಹೊಸ ಹೊಸ ಆಲೋಚನೆಗಳು ಮೂಡಿಬರುತ್ತದೆ. ಜನರ ಕೆಲಸವನ್ನು ಸಕಾಲಕ್ಕೆ ಮಾಡಿಕೊಡುವಲ್ಲಿ ಅದಿಕಾರಿಗಳ ಶ್ರಮ ಶ್ಲಾಘನೀಯವಾಗಿದ್ದು ಅವರನ್ನು ನಾನೆಂದೂ ಅಗೌರವದಿಂದ ಕಾಣುವುದೇ ಇಲ್ಲ. ಸಣ್ಣ ಅಧಿಕಾರಿಯಾಗಲಿ ದೊಡ್ಡ ಅಧಿಕಾರಿಯಾಗಲಿ ಎಲ್ಲರೂ ಜನರ ಸೇವೆ ಮಾಡುವವರೇ ಆಗಿದ್ದಾರೆ ಅವರನ್ನೂ ಎಲ್ಲರೂ ಗೌರವಿಸುವಂತಾಗಬೇಕು ಎಂದು ಶಾಸಕರು ಹೇಳಿದರು.
ತಳಮಟ್ಟದಲ್ಲಿ ಪೀಡಿಸುವವರಿಗೆ ಇಂಜೆಕ್ಷನ್ ಇದೆ
ತಳಮಟ್ಟದ ಕೆಲವು ಇಲಾಖಾ ಅಧಿಕಾರಿಗಳು ಜನರನ್ನು ಪೀಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬ ಮಾಹಿತಿ ಇದ್ದು ಅಂಥವರಿಗೆ ಇಂಜೆಕ್ಷನ್ ಕೊಡಿಸುವ ಕೆಲಸವನ್ನು ಮಾಡಲಿದ್ದೇನೆ ಎಂದು ಹೇಳಿದರು.
ಅಶೋಕ್ ರೈ ಪುತ್ತೂರಿನ ದ್ರುವತಾರೆಯಾಗಿದ್ದಾರೆ: ನಿರಂಜನ್ ರೈ
ಶಾಸಕರಾದ ಅಶೋಕ್ ರೈ ಪುತ್ತೂರಿನ ದ್ರುವತಾರೆಯಾಗಿದ್ದಾರೆ ಎಂದು ಕೋಡಿಂಬಾಡಿ ಮಹಿಷ ಮರ್ಧಿನಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ನಿರಂಜನ್ ರೈ ಮಠಂತಬೆಟ್ಟು ಹೇಳಿದರು.
ಇಡೀ ಆಯುಷ್ಯವನ್ನೇ ಬಡವರಿಗಾಗಿ ಮುಡಿಪಾಗಿಟ್ಟ ಅಶೋಕ್ ರೈ ಕ್ಷೇತ್ರದ ಶಾಸಕರಾಗಿರುವುದು ನಮ್ಮೆಲ್ಲರ ಭಾಗ್ಯ ಎಂದೇ ಹೇಳಬೇಕಾಗುತ್ತದೆ. ಹಸಿದವನಿಗೆ ಅನ್ನ ನೀಡುತ್ತಿದ್ದ ಕುಟುಂಬದಲ್ಲಿ ಜನ್ಮ ತಳೆದ ಅಶೋಕ್ ರೈ ಮನೆ ಅಂದು ಇಂದು ಎಂದೆಂದೂ ಬಡವರಿಗಾಗಿ ತೆರೆದಿರುತ್ತದೆ, ಹಸಿದವನಿಗೆ ಅನ್ನ ನೀಡುವ ಆಲಯವಾಗಿದೆ ಎಂದು ಹೇಳಿದರು. ಪತಿಗೆ ಬೆನ್ನುತಟ್ಟಿ ಸಹಕಾರ ನೀಡುತ್ತಿರುವ ಪತ್ನಿ ಸುಮಾ ಅಶೋಕ್ ರೈಯವರು ಶಾಸಕರ ಯಶಸ್ಸಿನ ರುವಾರಿಯಾಗಿದ್ದಾರೆ. ಕೋಡಿಂಬಾಡಿ ಗ್ರಾಮದ ಮಹಿಷಮರ್ಧಿನಿ ದೇವಸ್ಥಾನವನ್ನು ಅಭಿವೃದ್ದಿ ಮಾಡುವಲ್ಲಿ ಇವರ ಕಾರ್ಯ ಮಹತ್ತರವಾಗಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು , ಯಾವುದೇ ಬೇದಬಾವವಿಲ್ಲದೆ ಕೋಡಿಂಬಾಡಿ ಗ್ರಾಮದ ಭಕ್ತರನ್ನು ಒಂದೇ ತಾಯಿ ಮಕ್ಕಳಂತೆ ಕಂಡು ಎಲ್ಲರನ್ನೂ ಒಗ್ಗೂಡಿಸಿ ದೇವಸ್ಥಾನವನ್ನು ಅಭಿವೃದ್ದಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಹೇಳಿದರು. ಕಂಬಳಕ್ಕೆ ಗೌರವವನ್ನು ತಂದು ಕೊಟ್ಟಿದ್ದೂ ಮಾತ್ರವಲ್ಲದೆ ನಿಷೇದದ ಮೆಟ್ಟಿಲಲ್ಲಿದ್ದ ಕಂಬಳವನ್ನು ಸುಪ್ರಿಂಕೋರ್ಟು ತನಕ ಹೋರಾಟ ಮಾಡಿ ಕಂಬಳ ಈ ನಾಡಿನ ಜನಪದ ಕ್ರೀಡೆ ಎಂಬುದನ್ನು ಜಗತ್ತಿಗೆ ತಿಳಿಯುವಂತೆ ಮಾಡಿದ ಕೀರ್ತಿ ಅಶೋಕ್‌ರೈಗೆ ಸಲ್ಲುತ್ತದೆ ಎಂದು ಹೇಳಿದ ಅವರು ಶಾಸಕರಾಗಿ ಪುತ್ತೂರು ಕ್ಷೇತ್ರದ ಜನರ ನೋವು, ನಲಿವುಗಳಿಗೆ ಕಿವಿಯಾಗುತ್ತಾರೆ ಎಂಬ ಸಂಪೂರ್ಣ ನಂಬಿಕೆ ನಮಗೆ ಇದೆ ಎಂದು ಹೇಳಿದರು.
ಬಡವರ ಸೇವೆಯಿಂದ ಉನ್ನತ ಗೌರವ
ಅಶೋಕ್ ರೈ ಯವರು ದೈವ ಭಕ್ತರಾಗಿದ್ದು ಅವರಿಗೆ ದೇವರ ಆಶೀರ್ವಾದ ಸದಾ ಇರುತ್ತದೆ. ಬಡವರ ಸೇವೆ ಮಾಡಿರುವ ಕಾರಣಕ್ಕೆ ಅವರಿಂದು ಉನ್ನತ ಸ್ಥಾನದಲ್ಲಿ ಏರಲು ಸಾಧ್ಯವಾಗುತ್ತದೆ. ನಾವು ಒಳಿತನ್ನೇ ಅಥವಾ ಇನ್ನೊಬ್ಬರಿಗೆ ಕಷ್ಟಗಳಿಗೆ ಸ್ಪಂದಿಸಿದರೆ ದೇವರು ನಮ್ಮನ್ನು ಕೈ ಬಿಡುವುದಿಲ್ಲ ಎಂಬುದಕ್ಕೆ ಅಶೋಕ್ ರೈಯವರೇ ಉದಾಹರಣೆಯಾಗಿದ್ದಾರೆ. ಶಾಸಕರಾಗಿ ಆಯ್ಕೆಯಾಗುವ ಮೂಲಕ ಅವರಿಗೆ ಇನ್ನಷ್ಟು ಜನರ ಸೇವೆಯನ್ನು ಮಾಡಲು ದೇವರು ಅವಕಾಶ ಕಲ್ಪಿಸಿದ್ದು ಅವರು ಯಸಸ್ಸು ಕಾಣಲಿ ಎಂದು ಕೋಡಿಂಬಾಡಿ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಕೃಷ್ಣ ಭಟ್ ಆಶೀರ್ವಾದ ಮಾಡಿದರು.
ಸೀಟು ಕೊಟ್ರೆ ಗೆಲ್ತಾರೆಂದು ನಾನೇ ಹೇಳಿದ್ದೆ
ಅಶೋಕ್ ರೈಯವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದಾಗ ನಾನು ವೇದಿಕೆಯಲ್ಲಿದ್ದೆ. ಸಿದ್ದರಾಮಯ್ಯವರಲ್ಲಿ ನಾನು ಅಶೋಕ್ ರೈಗೆ ಸೀಟು ಕೊಡಿ ಅವರು ಗೆಲ್ತಾರೆ ಎಂದು ಹೇಳಿದ್ದೆ. ಬಡವರ ಮೇಲೆ ಅವರಿಗೆ ಇರುವ ಅಪಾರ ಕಾಳಜಿಯೇ ಅವರನ್ನು ಇಂದು ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಮುಂದೆ ಕ್ಷೇತ್ರದಲ್ಲಿ ನೆಮ್ಮದಿಯ ದಿನಗಳು ಬರಲಿದೆ. ನೊಂದವರು ಸಂತೋಷದಿಂದ ಆನಂದ ಭಾಷ್ಪ ಸುರಿಸುವ ಕಾಲ ಬರುತ್ತದೆ. ಈಗಾಗಲೇ ಪುತ್ತೂರು ಕ್ಷೇತ್ರದಾದ್ಯಂತ ಅಶೋಕ ಪರ್ವ ಆರಂಭವಾಗಿದೆ. ಸರಕಾರಿ ಕಚೇರಿಗಳಲ್ಲಿ ಜನ ಸಾಮಾನ್ಯರನ್ನು ಕೆಳುವವರೇ ಇರಲಿಲ್ಲ ಈಗ ಕರೆದು ಮಾತನಾಡಿಸುವ ಸ್ಥಿತಿಗೆ ಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ. ಒಂದಷ್ಟು ವರ್ಷಗಳ ಕಾಲ ಅವರು ಪುತ್ತೂರಿನಲ್ಲಿ ಶಾಸಕರಾಗಿ ಇರಬೇಕು ಇದಕ್ಕೆ ನೆಮ್ಮ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಾ. ರಘು ಹೇಳಿದರು.
ಅಶೋಕ್ ರೈ ಶಾಸಕರಾಗಿರುವುದು ನಮಗೆಲ್ಲರಿಗೂ ಗೌರವ ಹೆಚ್ಚಿಸಿದೆ
ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಸೋತ್ಸವ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಮಾತನಾಡಿ ನಮ್ಮೂರಿನ ಯುವಕ ಅಶೋಕ್ ರೈ ಶಾಸಕರಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ ಇದರಿಂದ ನಮಗೆ, ನಮ್ಮೂರಿಗೆ ಗೌರವ ಹೆಚ್ಚಿಸಿದೆ. ಬಡವರ ಪರ ಅಪಾರ ಕಾಳಜಿ ಇರುವ ಇವರು ಜನರ ಆಶೋತ್ತರಗಳನ್ನು ಖಂಡಿತವಾಗಿಯೂ ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ. ಕೋಡಿಂಬಾಡಿ ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ದಿ ಮಾಡುವುದರ ಜೊತೆಗೆ ಗ್ರಾಮದ ಪ್ರತೀಯೊಬ್ಬ ವ್ಯಕ್ತಿಗೂ ಅವರ ಸಹಾಯ ಸಹಕಾರ ದೊರಕುವ ಮೂಲಕ ನಾವೆಲ್ಲರೂ ಅವರ ಅಭಿವೃದ್ದಿ ಕಾರ್ಯಕ್ಕೆ ಸಹಕಾರ ನೀಡುವ ಮೂಲಕ ಅವರನ್ನು ಇನ್ನಷ್ಟು ಎತ್ತರಕ್ಕೆ ಬೆಳಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಕೋಡಿಂಬಾಡಿ ಗ್ರಾಮಪಂಚಾಯತ್ ಸದಸ್ಯರುಗಳಾದ ಜಯಪ್ರಕಾಶ್‌ಬದಿನಾರ್, ಮಲ್ಲಿಕಾ ಅಶೋಕ್ ಪೂಜಾರಿ, ಪೂರ್ಣಿಮಾ ಯತೀಶ್ ಶೆಟ್ಟಿ, ಗೀತಾ ಬಾಬು ಮೊಗೇರ, ವಿಶ್ವನಾಥ ಕೃಷ್ಣಗಿರಿ, ಕೋಡಿಂಬಾಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಶೇಖರ ಪೂಜಾರಿ ಜೇಡರ ಪಾಲು ಉಪಸ್ಥಿತರಿದ್ದರು.
ಸಂತೋಷ್ ರೈ ಕೆದಿಕಂಡೆಗುತ್ತು ಸ್ವಾಗತಿಸಿದರು. ಜಯಪ್ರಕಾಶ್ ಬದಿನಾರ್ ವಂದಿಸಿದರು.ಜಗನ್ನಾಥ ಶೆಟ್ಟಿ ನಡುಮನೆ ಕಾರ್ಯಕ್ರಮ ನಿರ್ವಹಿಸಿದರು.
ಚೆಂಡೆ ,ವಾದ್ಯದೊಂದಿಗೆ ಸ್ವಾಗತ
ಶಾಸಕರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆಯೇ ಚೆಂಡೆ ವಾದ್ಯದೊಂದಿಗೆ ಅವರನ್ನು ದೇವಳದ ಆವರಣದೊಳಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಪಟಾಕಿ ಸಿಡಿಸಿ ಗ್ರಾಮಸ್ಥರು ಜೈಕಾರ ಘೋಷಣೆ ಕೂಗಿದರು.