ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಕೇರಳ ಗಡಿಪ್ರದೇಶವಾದ ಗಾಳಿಮುಖದಲ್ಲಿ ಜೂ. 21 ರಂದು ಆರಂಭಗೊಂಡ ವೈನ್ ಶಾಪ್ ಮಾರನೇ ದಿನವೇ ಬಂದ್ ಮಾಡಲಾಗಿದೆ. ಸಾರ್ವಜನಿಕರ ತೀವ್ರ ವಿರೋಧದ ನಡುವೆ ಆರಂಭಗೊಂಡಿದ್ದ ವೈನ್ ಶಾಪ್ ಬಂದ್ ಮಾಡಿಸುವಂತೆ ಅಬಕಾರಿ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ನೂತನ ವೈನ್ ಶಾಪ್ ಬಳಿ ಅಂಗನವಾಡಿ ಮತ್ತು ಸುತ್ತಮುತ್ತಲಲ್ಲಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮನೆಗಳಿದ್ದು ಸಮೀಪದಲ್ಲೇ ಮಸೀದಿಯೂ ಇದ್ದು ಅಲ್ಲಿ ಯಾವುದೇ ಕಾರಣಕ್ಕೂ ವೈನ್ ಶಾಪ್ಗೆ ಪರವಾನಿಗೆ ನೀಡದಂತೆ ಗಾಳಿಮುಖ ನಿವಾಸಿ ಸುಹೈಬ್ ಎಂಬವರು ಜಿಲ್ಲಾಧಿಕಾರಿಗಳಿಗೆ, ಪುತ್ತೂರು ಶಾಸಕರಿಗೆ, ಅಬಕಾರಿ ಡಿ ಸಿಗೆ ಮತ್ತು ಅಬಕಾರಿ ಸಚಿವರಿಗೆ ದೂರು ನೀಡಿದ್ದರು. ನೆಟ್ಟಣಿಗೆ ಮುಡ್ನೂರು ಗ್ರಾಪಂನಿಂದ ಯಾವುದೇ ಪರವಾನಿಗೆಯನ್ನೂ ಪಡೆದಿಲ್ಲ ಎಂದು ಗ್ರಾಪಂ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ದೂರನ್ನು ಸಲ್ಲಿಸಲಾಗಿತ್ತು ಎನ್ನಲಾಗಿದೆ. ಆದರೂ ಜೂ.21 ರಂದು ವೈನ್ ಶಾಪ್ ಕಾರ್ಯಾರಂಭಿಸಿತ್ತು. ಸುದ್ದಿ ತಿಳಿದು ಜನರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿಯವರು ವೈನ್ಶಾಪ್ ಮುಚ್ಚುವಂತೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಯವರ ಸೂಚನೆಯಂತೆ ವೈನ್ ಶಾಪ್ ಬಂದ್ ಮಾಡಲಾಗಿದೆ. ಪುನರಾರಂಭ ಮಾಡಿದಲ್ಲಿ ಪ್ರತಿಭಟನೆ ನಡೆಸುವುದಾಗಿ ದೂರುದಾರ ಸುಹೈಬ್ ತಿಳಿಸಿದ್ದಾರೆ.