ಪುತ್ತೂರು: ಜಲಸಿರಿ ಯೋಜನೆಯ ಪೈಪ್ಲೈನ್ ಕಾಮಗಾರಿಗೆ ಕಂಪ್ರೆಷರ್ ಮೂಲಕ ಅಲ್ಲಲ್ಲಿ ಕಾಂಕ್ರೀಟ್ ರಸ್ತೆ ಅಗೆಯುವುದರಿಂದ ರಸ್ತೆಗೆ ಹಾನಿಯಾಗುತ್ತದೆ ಎಂದು ಕಾಂಕ್ರಿಟ್ ರಸ್ತೆ ಅಗೆಯುವುದಕ್ಕೆ ಪಂಜಳ ಕುಕ್ಕಾಡಿಯಲ್ಲಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.
ನಗರ ಸಭಾ ವ್ಯಾಪ್ತಿಯ ಆನಂದಾಶ್ರಮ ಬಳಿಯ ಪಂಜಳ ಕುಕ್ಕಾಡಿ ಸಮೀಪ ಅಲ್ಲಲ್ಲಿ ಕಂಪ್ರೆಷರ್ ಮೂಲಕ ರಸ್ತೆಯನ್ನು ಅಗೆದು ಹೊಂಡ ಮಾಡಲಾಗುತ್ತಿತ್ತು. ಕಂಪ್ರೆಷರ್ ಮೂಲಕ ಕಾಂಕ್ರಿಟ್ ರಸ್ತೆ ಅಗೆಯುವುದರಿಂದ ಸುಸಜ್ಜಿತವಾಗಿರುವ ರಸ್ತೆಗೆ ಹಾನಿಯಾಗುತ್ತದೆ. ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತದೆ ಎಂದು ಕಾಂಕ್ರೀಟ್ ರಸ್ತೆಯನ್ನು ಅಗೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪೈಪ್ಲೈನ್ ಮಾಡುವಾಗ ಕಾಂಕ್ರೀಟ್ ರಸ್ತೆ ಅಗೆಯದೆ, ರಸ್ತೆಯ ಬದಿಯಲ್ಲಿ ಕಾಮಗಾರಿ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಯುಐಡಿಎಫ್ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಾದೇಶ್, ಹೊಸ ಪೈಪ್ಲೈನ್ ಮಾಡುವಾಗ ಹಳೆಯ ಪೈಪ್ಲೈನ್ಗೆ ಲಿಂಕ್ ಮಾಡಲಾಗುತ್ತಿದೆ. ಹೀಗಾಗಿ ರಸ್ತೆಯನ್ನು ಅಗೆಯಬೇಕಾಗುತ್ತದೆ. ಅಗೆದ ರಸ್ತೆಯನ್ನು ಮತ್ತೆ ಕಾಂಕ್ರಿಟ್ ಹಾಕಿ ದುರಸ್ತಿಪಡಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.