ಈಶ್ವರಮಂಗಲ: ಶ್ರೀ ಗಜಾನನ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕ-ರಕ್ಷಕ ಸಮಾವೇಶ ಜೂನ್ 24 ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ ವಿ ಸೂರ್ಯನಾರಾಯಣ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಂಗ್ಲ ಭಾಷೆಯು ಆಧುನಿಕ ಜಗತ್ತಿನ ಹೆಬ್ಬಾಗಿಲು ಹಾಗೂ ಕಾಲದ ಅವಶ್ಯಕತೆಯಲ್ಲೊಂದು. ಮಕ್ಕಳು ಹಸಿಮಣ್ಣಿನ ಗೋಡೆಯಿದ್ದಂತೆ ಬದಲಾವಣೆ ಜಗದ ನಿಯಮ. ಮಕ್ಕಳಿಗೆ ಹೊರ ಜಗತ್ತಿನ ಅರಿವು ಮೂಡಿಸುವುದರಲ್ಲಿ ಪೋಷಕರ ಪಾತ್ರ ಮಹತ್ತರವಾದುದು. ಗಜಾನನ ವಿದ್ಯಾಸಂಸ್ಥೆಯ ಕೀರ್ತಿಪತಾಕೆ ಬಾನೆತ್ತರಕ್ಕೆ ಹಾರಲಿ ಎಂದರು.
ಪ್ರಾಂಶುಪಾಲ ಕೆ ಶಾಮಣ್ಣ ವೇದಿಕೆಯನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಮುಖ್ಯಗುರು ಅಮರನಾಥ ಬಿ ಪಿ ಶಾಲಾ ಶ್ರೇಯೋಭಿವೃದ್ಧಿ ಕುರಿತು ತಿಳಿಸಿದರು. ಸಂಚಾಲಕ ಶಿವರಾಮ ಪಿ ಮಾತನಾಡಿ ನಮ್ಮ ಸಂಸ್ಥೆಯು ಅಭಿವೃದ್ಧಿ ಹೊಂದುತ್ತಿರುವುದಕ್ಕೆ ಪೋಷಕರೇ ಮುಖ್ಯ ಕಾರಣ ಎಂದರು. ಸಂಸ್ಥೆಯ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಮಾತನಾಡಿ ಶಾಲೆಯ ಅಭಿವೃದ್ಧಿಗೆ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರವಿದೆ ಎಂದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ನಾಗಪ್ಪಗೌಡ ಬೊಮ್ಮೆಟ್ಟಿ, ರವಿಕುಮಾರ್ ಡಿ ಮತ್ತು ಕನ್ನಡ ಮಾಧ್ಯಮದ ಮುಖ್ಯಗುರು ನರೇಂದ್ರ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರೀತಿಕ ಮತ್ತು ಭಾಗ್ಯಲಕ್ಷ್ಮಿ ಪ್ರಾರ್ಥಿಸಿ, ಶಿಕ್ಷಕಿ ವಿನುತ ಸ್ವಾಗತಿಸಿ, ಸೌಮ್ಯ ಯಂ ವಂದಿಸಿದರು, ಶಿಕ್ಷಕಿಯರಾದಚೈತ್ರಲಕ್ಷ್ಮಿ ಮತ್ತು ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.