ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಈ ಬಾರಿ ಕಾಣದ ಕಸರತ್ತು; ಹೊಂದಾಣಿಕೆ ನೀತಿಯಡಿ ಸಾಗಲಿದೆಯೇ ಉಪ್ಪಿನಂಗಡಿ ಪಂಚಾಯತ್? ಅಧ್ಯಕ್ಷರಾಗಿ ರುಕ್ಮಿಣಿ; ಉಪಾಧ್ಯಕ್ಷರಾಗಿ ವಿದ್ಯಾಲಕ್ಷ್ಮೀ ಆಯ್ಕೆ ಸಂಭವ !

0

ಉಪ್ಪಿನಂಗಡಿ: ಕಳೆದ ಅವಧಿಯಲ್ಲಿ ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರ ನಡುವೆ ಸಾಕಷ್ಟು ಕಸರತ್ತುಗಳು ನಡೆದಿದ್ದರೂ, ಕೊನೆಗೆ ಎರಡೂ ಬಣಗಳೂ ಸಹಮತ ಪಡೆದಿದ್ದರಿಂದ ಚೀಟಿ ಎತ್ತುವ ಮೂಲಕ ಅದೃಷ್ಟ ಲಕ್ಷ್ಮೀ ಬಿಜೆಪಿ ಬೆಂಬಲಿತ ಸದಸ್ಯರ ಪಾಲಿಗೆ ಒಲಿದಿದ್ದಳು. ಆದರೆ ಈ ಬಾರಿಯ ಮೀಸಲಾತಿಯಲ್ಲಿ ಉಪ್ಪಿನಂಗಡಿ ಗ್ರಾ.ಪಂ.ಗೆ ಅಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿದ್ದು, ಇಲ್ಲಿ ಯಾವುದೇ ರಾಜಕೀಯ ಕಸರತ್ತುಗಳು ಕಾಣುತ್ತಿಲ್ಲ. ಬದಲಾಗಿ ಹೊಂದಾಣಿಕೆ ನೀತಿ ಅನುಸರಿಸುವ ಲಕ್ಷಣಗಳು ಗೋಚರಿಸುತ್ತಿದ್ದು, ಅಧ್ಯಕ್ಷ ಸ್ಥಾನ ಬಿಜೆಪಿ ಬೆಂಬಲಿತ ಸದಸ್ಯರ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ಸದಸ್ಯರ ಪಾಲಾಗುವ ಸಾಧ್ಯತೆಯ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ಒಟ್ಟು ಸದಸ್ಯರು: ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಒಟ್ಟು ೨೦ ಸದಸ್ಯರಿದ್ದು, ಕಳೆದ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಉಷಾಚಂದ್ರ ಮುಳಿಯ ಅಧ್ಯಕ್ಷರಾಗಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಆಯ್ಕೆಯಾಗಿ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯ ಸಂದರ್ಭ ಬಿಜೆಪಿ ಬೆಂಬಲಿತ ಸದಸ್ಯರ ಕಡೆ ಹೋಗಿದ್ದ ವಿನಾಯಕ ಪೈ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಗ್ರಾ.ಪಂ. ಚುನಾವಣೆಯಲ್ಲಿ ವಿದ್ಯಾಲಕ್ಷ್ಮಿ ಪ್ರಭು, ಲೋಕೇಶ್ ಪೂಜಾರಿ, ಉಷಾ ಮುಳಿಯ, ಉಷಾ ನಾಯಕ್, ಧನಂಜಯ, ರುಕ್ಮಿಣಿ, ಶೋಭಾ, ಸುರೇಶ್ ಅತ್ರೆಮಜಲು, ವನಿತಾ, ಜಯಂತಿ ಹೀಗೆ ೧೦ ಮಂದಿ ಬಿಜೆಪಿ ಬೆಂಬಲಿತ ಸದಸ್ಯರಾಗಿ ಗ್ರಾ.ಪಂ.ಗೆ ಆಯ್ಕೆಯಾಗಿದ್ದರು. ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಮಹಮ್ಮದ್ ತೌಸೀಫ್, ವಿನಾಯಕ ಪೈ, ಲಲಿತ, ಯು.ಕೆ. ಇಬ್ರಾಹಿಂ, ಕೆ. ಅಬ್ದುಲ್ ರಹಿಮಾನ್ ಹೀಗೆ ೫ ಮಂದಿ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಎಸ್‌ಡಿಪಿಐ ಬೆಂಬಲಿತರಾಗಿ ಮೈಸಂ ಇಬ್ರಾಹಿಂ, ಅಬ್ದುಲ್ ರಶೀದ್, ನೆಬಿಸ, ಸೌದ ಹೀಗೆ ೪ ಮಂದಿ ಗ್ರಾ.ಪಂ.ಗೆ ಆಯ್ಕೆಯಾಗಿದ್ದರು. ಸಣ್ಣಣ್ಣ ಯಾನೆ ವೆಂಕಪ್ಪ ಪಕ್ಷೇತರರಾಗಿ ಚುನಾಯಿತರಾಗಿದ್ದರು.


ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಸಂದರ್ಭ ಏನಾಗಿತ್ತು?:
ಕಳೆದ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಎಸ್.ಡಿ.ಪಿ.ಐ. ಬೆಂಬಲಿತರಾಗಿದ್ದ 4 ಮಂದಿ ಮತ್ತು ಬಿಜೆಪಿಯಿಂದ ಬಂಡಾಯವೆದ್ದು ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಸಣ್ಣಣ್ಣ ಸೇರಿದಂತೆ ಒಟ್ಟು ೫ ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಪರ ನಿಂತರು. ಇದರೊಂದಿಗೆ ಬಿಜೆಪಿ ಬೆಂಬಲಿತೆಯಾಗಿದ್ದ ವಿದ್ಯಾಲಕ್ಷ್ಮಿಯವರನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಸೆಳೆದುಕೊಂಡು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಿ ಕಣಕ್ಕೆ ಇಳಿಸಿತ್ತು. ಕಾಂಗ್ರೆಸ್ ಬೆಂಬಲಿತ ಸದಸ್ಯರು ೫ ಮತ್ತು ಕಾಂಗ್ರೆಸ್‌ಗೆ ಮತ್ತೆ ಬೆಂಬಲ ಕೊಟ್ಟ ಆರು ಸದಸ್ಯರು ಹೀಗೆ ಒಟ್ಟು ೧೧ ಸದಸ್ಯರ ಬೆಂಬಲ ಹೊಂದಿದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬಣ ಉಪಾಧ್ಯಕ್ಷ ಸ್ಥಾನಕ್ಕೆ ಮುಹಮ್ಮದ್ ತೌಸೀಫ್ ಯು.ಟಿ. ಅವರನ್ನು ಕಣಕ್ಕಿಳಿಸಿ, ಈ ಬಾರಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ತಮ್ಮದೆಂಬ ರಾಜಕೀಯ ಲೆಕ್ಕಾಚಾರದಲ್ಲಿತ್ತು. ಆದರೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಸಂದರ್ಭ ತಮ್ಮ ರಾಜಕೀಯ ಲೆಕ್ಕಾಚಾರ ಬುಡಮೇಲಾದ ಅರಿವು ಕಾಂಗ್ರೆಸ್ ಬೆಂಬಲಿತರಿಗೆ ಬಂದಿತ್ತು. ಯಾಕೆಂದರೆ ಇತ್ತ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿ ಗ್ರಾ.ಪಂ.ಗೆ ಆಯ್ಕೆಯಾಗಿದ್ದ ವಿನಾಯಕ ಪೈ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡ ಬಿಜೆಪಿ ಬೆಂಬಲಿತ ಸದಸ್ಯರು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಅವರನ್ನು ಕಣಕ್ಕಿಳಿಸಿದ್ದರು. ಆಗ ಎರಡೂ ಬಣಗಳ ಬೆಂಬಲಿತರಲ್ಲಿ ಸಮಬಲ ಬರುವಂತಾಯಿತು. ಮತ್ತೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಬಣಗಳು ತಲಾ ಹತ್ತರಂತೆ ಸಮಮತವನ್ನು ಪಡೆದುಕೊಂಡರು. ಮತ್ತೆ ಚೀಟಿ ಎತ್ತುವಿಕೆಯ ಮೂಲಕ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ನಡೆದಾಗ ಅದೃಷ್ಟ ಲಕ್ಷ್ಮೀ ಬಿಜೆಪಿ ಬೆಂಬಲಿತ ಬಣದ ಪಾಲಾಗಿದ್ದು, ಉಷಾ ಮುಳಿಯ ಅಧ್ಯಕ್ಷರಾಗಿ ಹಾಗೂ ವಿನಾಯಕ ಪೈ ಉಪಾಧ್ಯಕ್ಷರಾಗಿ ಆಯ್ಕೆಯಾದರು.


ಈ ಬಾರಿಯ ಮೀಸಲಾತಿ:
ಈ ಬಾರಿ ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ (ಎಸ್‌ಸಿ) ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿದೆ. ಅನುಸೂಚಿತ ಜಾತಿ ಮೀಸಲಾತಿಯ ಪುರುಷ ಸದಸ್ಯರು ಈ ಗ್ರಾ.ಪಂ.ನಲ್ಲಿಲ್ಲ. ಈ ಮೀಸಲಾತಿಯಡಿಯಲ್ಲಿ ಆಯ್ಕೆಗೊಳ್ಳಲು ಇಬ್ಬರು ಮಹಿಳಾ ಸದಸ್ಯರು ಮಾತ್ರ ಅರ್ಹರಾಗಿದ್ದು, ಅವರಲ್ಲಿ ರುಕ್ಮಿಣಿ ಬಿಜೆಪಿ ಬೆಂಬಲಿತ ಸದಸ್ಯೆಯಾದರೆ, ಲಲಿತಾ ಕಾಂಗ್ರೆಸ್ ಬೆಂಬಲಿತ ಸದಸ್ಯೆ. ಇನ್ನು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಬಂದಿದ್ದು, ಇಲ್ಲಿ ಸದಸ್ಯರಾಗಿರುವ ಎಲ್ಲಾ ಮಹಿಳೆಯರು ಇದಕ್ಕೆ ಅರ್ಹರಾಗಿದ್ದಾರೆ.


ಕಾಣದ ರಾಜಕೀಯ ಕಸರತ್ತು:
ಹಿಂದಿನ ಹಾಗೆ ಈ ಬಾರಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ, ರಾಜಕೀಯ ಕಸರತ್ತುಗಳು ಇಲ್ಲಿ ಕಾಣುತ್ತಿಲ್ಲ. ಅಧ್ಯಕ್ಷ- ಉಪಾಧ್ಯಕ್ಷರಾಗಿ ಇಲ್ಲಿ ಮಹಿಳೆಯರೇ ಆಯ್ಕೆಯಾಗುವುದು ಇದಕ್ಕೊಂದು ಕಾರಣವಿರಲೂಬಹುದು.


ಯಾರಾಗಬಹುದು ಅಧ್ಯಕ್ಷ- ಉಪಾಧ್ಯಕ್ಷರು?:
ಮೂಲಗಳ ಪ್ರಕಾರ ಈ ಬಾರಿ ಯಾವುದೇ ರಾಜಕೀಯ ಕಸರತ್ತುಗಳಿಗೆ ಅವಕಾಶ ನೀಡದೇ ಹೊಂದಾಣಿಕೆ ನೀತಿಯತ್ತ ಹೋಗಲು ಕಾಂಗ್ರೆಸ್ ಮನಸ್ಸು ಮಾಡಿದ್ದು, ಬಿಜೆಪಿ ಬೆಂಬಲಿತರಲ್ಲಿ ತನ್ನ ನಿಲುವನ್ನು ಮುಂದಿಟ್ಟಿದೆ ಎಂಬ ಮಾಹಿತಿಯಿದೆ. ಅದರಂತೆ ಅಧ್ಯಕ್ಷ ಸ್ಥಾನ ಬಿಜೆಪಿಗೆ ಕೊಟ್ಟರೆ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಡೆಯಲಿದೆ. ಹೀಗೆ ಆದಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ರುಕ್ಮಿಣಿ ಅವರು ಅಧ್ಯಕ್ಷರಾಗಿ ಆಯ್ಕೆಗೊಳ್ಳಲಿದ್ದು, ಕಾಂಗ್ರೆಸ್ ಬೆಂಬಲಿತ ಸದಸ್ಯೆ ವಿದ್ಯಾಲಕ್ಷ್ಮೀ ಪ್ರಭು ಉಪಾಧ್ಯಕ್ಷರಾಗಿ ಆಯ್ಕೆಗೊಳ್ಳಲಿದ್ದಾರೆ. ಆದರೆ ಬಿಜೆಪಿ ಬೆಂಬಲಿತ ಕೆಲ ಸದಸ್ಯರಿಗೆ ಕಾಂಗ್ರೆಸ್ ಈಗ ಸೂಚಿಸಿರುವ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯ ಬಗ್ಗೆ ಅಷ್ಟೊಂದು ಸಹಮತವಿಲ್ಲ. ಅವರು ಅಂದು ಬಿಜೆಪಿ ಬಿಟ್ಟು ಕಾಂಗ್ರೆಸ್ ಬಣದೊಟ್ಟಿಗೆ ಸೇರಿದ್ದಾರೆಂಬ ಅಸಮಾಧಾನ ಈಗಲೂ ಒಳಗಿಂದೊಳಗೆ ಇದ್ದಂತಿದೆ. ಆದರೆ ವಿದ್ಯಾಲಕ್ಷ್ಮೀ ಅವರನ್ನೇ ಈ ಬಾರಿ ಉಪಾಧ್ಯಕ್ಷರನ್ನಾಗಿ ಮಾಡಬೇಕೆಂಬ ಕನಸು ಕಾಂಗ್ರೆಸ್‌ನದ್ದಾಗಿದೆ. ಆದ್ದರಿಂದ ಈ ನಿಲುವಿಗೆ ಅಂತಿಮ ಮಾನ್ಯತೆ ದೊರೆತ್ತಿಲ್ಲ. ಕೆಲವು ಬಿಜೆಪಿ ಬೆಂಬಲಿತ ಸದಸ್ಯರು ಅಂತಿಮವಾಗಿ ಪಕ್ಷದ ತೀರ್ಮಾನ ಎಂದು ಹೇಳುತ್ತಿದ್ದಾರೆ. ಇಲ್ಲಿ ಕಳೆದ ಬಾರಿಯಂತೆ ಆ ಕಡೆಯಿಂದ ಈ ಕಡೆಗೆ ಸೆಳೆಯೋದು, ಈ ಕಡೆಯಿಂದ ಆ ಕಡೆಗೆ ಸೆಳೆಯುವಂತಹ ರಾಜಕೀಯ ಕಸರತ್ತುಗಳೇನಾದರೂ ನಡೆದರೆ, ಬಿಜೆಪಿ ಬೆಂಬಲಿತರು ಓರ್ವ ಸದಸ್ಯರ ಮೇಲೆ, ಕಾಂಗ್ರೆಸ್ ಬೆಂಬಲಿತರು ಓರ್ವ ಸದಸ್ಯರ ಮೇಲೆ ಈಗಾಗಲೇ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಬಲ್ಲಮೂಲಗಳಿಂದ ಕೇಳಿ ಬರುತ್ತಿವೆ. ಹಾಗಾದಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಮತ್ತೆ ಚೀಟಿ ಎತ್ತುವಿಕೆ ಮೂಲಕ ಅದೃಷ್ಟ ಲಕ್ಷ್ಮೀಯತ್ತ ಮೊರೆಹೋಗುವಂತಹ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ಕಂಟ್ರೋಲರ್ ಟೀಂ:
ಹೊಂದಾಣಿಕೆ ನೀತಿಯಡಿ ಬಿಜೆಪಿ ಬೆಂಬಲಿತರಿಗೆ ಅಧ್ಯಕ್ಷ ಸ್ಥಾನ, ಕಾಂಗ್ರೆಸ್ ಬೆಂಬಲಿತರಿಗೆ ಉಪಾಧ್ಯಕ್ಷ ಸ್ಥಾನ ದೊರೆತಲ್ಲಿ ಬಿಜೆಪಿ ಬೆಂಬಲಿತ ಇಬ್ಬರು ಸದಸ್ಯರು, ಕಾಂಗ್ರೆಸ್ ಬೆಂಬಲಿತ ಇಬ್ಬರು ಸದಸ್ಯರು ಹಾಗೂ ಎಸ್‌ಡಿಪಿಐ ಬೆಂಬಲಿತ ಓರ್ವ ಸದಸ್ಯರನ್ನು ಸೇರಿಸಿಕೊಂಡು ಐದು ಮಂದಿಯನ್ನೊಳಗೊಂಡ ಕಂಟ್ರೋಲರ್ ಟೀಂ ಒಂದನ್ನು ರಚಿಸುವ ಸಾಧ್ಯತೆಯ ಬಗ್ಗೆಯೂ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಈ ಎಲ್ಲಾ ಸಾಧ್ಯತೆ- ಬಾಧತೆ, ಅಂತೆ-ಕಂತೆಗಳಿಗೆ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಯಂದು ಸಿಗುವ ಚಿತ್ರಣದ ಬಳಿಕವೇ ಸ್ಪಷ್ಟ ಉತ್ತರ ದೊರೆಯಲಿದೆ.

LEAVE A REPLY

Please enter your comment!
Please enter your name here