ಪುತ್ತೂರು: 3 ವರ್ಷದ ಹಿಂದೆ ದರ್ಬೆ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ ಪಾದಚಾರಿ ಬಾಲಕಿ ಮತ್ತು ಮಹಿಳೆಯೊಬ್ಬರು ಸಾವಿಗೀಡಾಗಿ ಇನ್ನೋರ್ವ ಬಾಲಕಿ ತೀವ್ರ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕಾರು ಚಾಲಕ, ಮಂಗಳೂರು ಉಳ್ಳಾಲದ ತೋಮಸ್ ಪಿ.ಆರ್.ಎಂಬವರಿಗೆ ಪುತ್ತೂರು ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2020ನೇ ನ.2ರಂದು ಮಧ್ಯಾಹ್ನ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ದರ್ಬೆ ಬೈಪಾಸ್ ರಸ್ತೆಯಲ್ಲಿ ಮಂಗಳೂರಿನಿಂದ ಚಾಲ್ಸೂರು ಕಡೆ ತೋಮಸ್ ಪಿ.ಆರ್ ಎಂಬವರು ಚಲಾಯಿಸುತ್ತಿದ್ದ ಮಾರುತಿ ಸ್ವಿಪ್ಟ್ ಕಾರು (ಕೆ.ಎಲ್.14-ಆರ್.5717)ಚಾಲಕನ ಹತೋಟಿ ತಪ್ಪಿ ದರ್ಬೆ ಬೈಪಾಸ್ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗೀತಾ ಮತ್ತು ಅವರ ಜೊತೆಗಿದ್ದ ನೆರೆ ಮನೆ ನಿವಾಸಿಗಳಾದ ಅನನ್ಯ, ಸ್ವಾತಿ ಎಂಬವರಿಗೆ ಡಿಕ್ಕಿಯಾಗಿತ್ತು.ಡಿಕ್ಕಿಯ ರಭಸಕ್ಕೆ ಅದೇ ಕಾರು ಮುಂಭಾಗದಲ್ಲಿ ನಿಂತಿದ್ದ ಸವಣೂರಿನ ಅಲೆಕ್ಕಾಡಿ ನಿವಾಸಿ ಉಬೈದ್ ಅವರ ಎಕ್ಸ್ ಕ್ರಾಸ್(ಕೆ.ಎ.3 ಎನ್‌ಎಕ್ಸ್ 5100)ನ ಹಿಂಬದಿಗೆ ಡಿಕ್ಕಿಯಾಗಿತ್ತು.ಘಟನೆಯಲ್ಲಿ ತೀವ್ರ ಗಾಯಗೊಂಡ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ತಕ್ಷಣ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು .ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕಿ ಸ್ವಾತಿ ಮೃತಪಟ್ಟಿದ್ದರು.ಗಂಭೀರ ಗಾಯಗೊಂಡಿದ್ದ ಗೀತಾ ಮತ್ತು ಇನ್ನೋರ್ವ ಬಾಲಕಿ ಅನನ್ಯ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಅಲ್ಲಿ ಗೀತಾ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.ಬಾಲಕಿ ಅನನ್ಯ ಅವರು ಚೇತರಿಸಿಕೊಂಡಿದ್ದರು. ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರ ಪೊಲೀಸರು ಆರೋಪಿ ಕಾರು ಚಾಲಕನ ವಿರುದ್ಧ ಸೆಕ್ಷನ್ 279,338,304(ಎ), ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯ ಆರೋಪಿ ತೋಮಸ್ ಪಿ.ಆರ್ ಅವರನ್ನು ದೋಷಿ ಎಂದು ಪರಿಗಣಿಸಿ, 1 ವರ್ಷ ಜೈಲು ಶಿಕ್ಷೆ ಮತ್ತು 3 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕಿ ಕವಿತಾ ವಾದಿಸಿದ್ದರು.