ವಿದ್ಯಾಮಾತಾ ಅಕಾಡೆಮಿಯಿಂದ ಭಾರತೀಯ ಸೇನಾ ನೇಮಕಾತಿಗಳ ಪೂರ್ವ ತಯಾರಿ ತರಬೇತಿ ಕಾರ್ಯಾಗಾರ

0

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿ ಮತ್ತು ನಿವೃತ್ತ ಸೈನಿಕರ ಸಂಘ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ತಾಲೂಕು ಘಟಕಗಳ ಸಹಯೋಗದಲ್ಲಿ ನಡೆದ ಭಾರತೀಯ ಸೇನಾ ನೇಮಕಾತಿಗಳ ದೈಹಿಕ ಸದೃಢತೆಯ ಮೈದಾನ ತರಬೇತಿಯ ಕಾರ್ಯಾಗಾರವು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಾಗಾರದಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಡಬ, ಕೊಡಗು ಇತ್ಯಾದಿ ವಿವಿಧ ತಾಲೂಕು ಜಿಲ್ಲೆಗಳಿಂದ ಸುಮಾರು 120ಕ್ಕೂ ಹೆಚ್ಚಿನ ಆಕಾಂಕ್ಷಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್‌ರವರು ವಿದ್ಯಾಮಾತಾ ಅಕಾಡೆಮಿಯ ಪ್ರಯತ್ನವನ್ನು ಶ್ಲಾಘಿಸಿ ಸೇನಾ ನೇಮಕಾತಿಯಲ್ಲಿ ಪಾಲ್ಗೊಳ್ಳುತ್ತಿರುವ ಅಭ್ಯರ್ಥಿಗಳಿಗೆ ಶುಭವನ್ನು ಹಾರೈಸಿದರು.


ಕಳೆದ ಅಗ್ನಿಪಥ್ ಯೋಜನೆಯಲ್ಲಿ ವಿದ್ಯಾಮಾತಾ ಅಕಾಡೆಮಿಯ 8 ಅಭ್ಯರ್ಥಿಗಳು ಹಾಗೂ ಮಿಲಿಟರಿ ಮೆಡಿಕಲ್ ಕೋರ್‌ಗೆ ಒಬ್ಬ ವಿದ್ಯಾರ್ಥಿ ಆಯ್ಕೆಯಾಗಿರುತ್ತಾರೆ. ಈ ನಿಟ್ಟಿನಲ್ಲಿ ಅಗ್ನಿಪಥ್ ಸೇರಿದಂತೆ ಭಾರತೀಯ ಸೇನಾ ನೇಮಕಾತಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ವಿದ್ಯಾಮಾತಾ ಅಕಾಡೆಮಿಯು ಪ್ರಸಕ್ತ ಸಾಲಿನಲ್ಲೂ ಮೈದಾನ ಪೂರ್ವ ತಯಾರಿ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿತು. ವಿದ್ಯಾರ್ಥಿಗಳಿಗೆ ನಿವೃತ್ತ ಸೈನಿಕರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ರಾಮಚಂದ್ರ ಪುಚ್ಚೇರಿ, ಕಾರ್ಯದರ್ಶಿ ನಾಗಪ್ಪ ಗೌಡ, ಬಂಟ್ವಾಳ ತಾಲೂಕು ಅಧ್ಯಕ್ಷ ವೆಂಕಪ್ಪ ಗೌಡ, ಸುಳ್ಯ ತಾಲೂಕು ಅಧ್ಯಕ್ಷ ಜಗದೀಶ್ ಕೆ.ಪಿ, ಸೇನಾ ನೇಮಕಾತಿಯ ವಿವರಗಳನ್ನು ನೀಡಿದರು. ದೈಹಿಕ ಸದೃಢತೆಯ ಬಗ್ಗೆ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ದೈಹಿಕ ಶಿಕ್ಷಕರಾದ ದಯಾನಂದ ರೈ ಕೋರ್ಮಂಡ, ಮೋನಪ್ಪ ಪಟ್ಟೆ, ವಿಜೇಶ್, ಪೂರ್ಣಿಮರವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಯುವಜನ ಸೇನೆ ಮತ್ತು ಕ್ರೀಡಾ ಇಲಾಖೆಯಲ್ಲಿ ಮೇಲ್ವಿಚಾರಕರಾಗಿರುವ ಶ್ರೀಕಾಂತ್ ಬಿರಾವ್ ಉಪಸ್ಥಿತರಿದ್ದರು.


ಸದ್ಯ ಅಗ್ನಿಪಥ್ ಯೋಜನೆಯಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ರಮೇಶ್ ಕಾರ್ಣಿಕ್‌ರವರು ಪದಕ ನೀಡಿ ಗೌರವಿಸಿದರು. ನಿವೃತ್ತ ಸೈನಿಕ “ಜೈ ಜವಾನ್ ಜೈ ಕಿಸಾನ್” ಪ್ರಶಸ್ತಿ ವಿಜೇತರಾದ ಗೋಪಾಲಕೃಷ್ಣ ಕಾಂಚೋಡ್‌ರವರನ್ನು ಹಾಗೂ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ಆಯ್ಕೆಯಾಗಿರುವ ರಂಜಿತ್ ರವರನ್ನು ಸನ್ಮಾನಿಸಲಾಯಿತು.


ಭಾರತೀಯ ಸೇನಾ ನೇಮಕಾತಿಗೆ ಅವಶ್ಯಕತೆ ಇರುವ ಕ್ರೀಡಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಮತ್ತು ವಿದ್ಯಾರ್ಥಿಗಳನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ರವರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ತರಬೇತುದಾರರು, ಸಿಬ್ಬಂದಿ ವರ್ಗದವರು ಸಹಕರಿಸಿದರು.

LEAVE A REPLY

Please enter your comment!
Please enter your name here