ಕುಂಬ್ರ: ಬಾವಿ ಕುಸಿತ, ಗ್ರಾಪಂ ತುರ್ತು ಸಭೆ-ಬಾವಿ ಮುಚ್ಚಿಸಿ ಅಪಾಯ ತಪ್ಪಿಸಿದ ಗ್ರಾ.ಪಂ

0

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನ ನೂತನ ಕಟ್ಟಡದ ಬಳಿ ಇದ್ದ ಸುಮಾರು 53 ವರ್ಷ ಹಳೆಯ ಬಾವಿಯು ಜು.6 ರಂದು ದಿಢೀರನೇ ಕುಸಿತಗೊಂಡಿತ್ತು. ಪಂಚಾಯತ್ ಕಟ್ಟಡದ ಅಂಗಳದ ಬಳಿಯೇ ಇದ್ದ ಈ ಬಾವಿಯನ್ನು ಪಂಚಾಯತ್ ಕಟ್ಟಡ ನಿರ್ಮಾಣದ ವೇಳೆ ನವೀಕರಣಗೊಳಿಸಲಾಗಿತ್ತು. ಬಾವಿ ಕುಸಿತಗೊಂಡ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ತುರ್ತು ಸಭೆ ನಡೆಸಿ, ಬಾವಿಯನ್ನು ಮುಚ್ಚದೇ ಇದ್ದರೆ ಬಹಳಷ್ಟು ಅಪಾಯ ಇದೆ. ಬಾವಿ ಸಂಪೂರ್ಣ ಕುಸಿತಗೊಂಡಿರುವುದರಿಂದ ಪುನಃ ಬಾವಿಯನ್ನು ಕೂಡಲೇ ನವೀಕರಣಗೊಳಿಸುವುದು ಬಹಳಷ್ಟು ಕಷ್ಟ ಇದೆ ಇದಲ್ಲದೆ ಇದೇ ರಸ್ತೆಯಲ್ಲಿ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಓಡಾಡುತ್ತಿರುವುದರಿಂದ ಮುಂದಕ್ಕೆ ಏನಾದರೂ ಅಪಾಯ ಸಂಭವಿಸುವ ಸಾಧ್ಯತೆಯೂ ಇರುವುದರಿಂದ ಬಾವಿಯನ್ನು ತಾತ್ಕಾಲಿಕವಾಗಿ ಮುಚ್ಚುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.


ಬಾವಿಯನ್ನು ಮುಚ್ಚಿಸಿದ ಗ್ರಾಪಂ
ಸಂಪೂರ್ಣ ಕುಸಿತಗೊಂಡಿದ್ದ ಬಾವಿಯು ಅಪಾಯಕಾರಿ ಸ್ಥಿತಿಯಲ್ಲಿತ್ತು. ಗ್ರಾಪಂ ಅಂಗಳದ ಬದಿಯಲ್ಲೇ ಇರುವುದು ಮತ್ತು ಅಂಗಳದ ಅರ್ಧ ಭಾಗ ಕೂಡ ಕುಸಿತಗೊಂಡಿರುವುದು ಅಲ್ಲದೆ ಪಕ್ಕದಲ್ಲಿದ್ದ ವಿದ್ಯುತ್ ಕಂಬ ಕೂಡ ಅಪಾಯದಲ್ಲಿರುವುದರಿಂದ ತಾತ್ಕಾಲಿಕವಾಗಿ ಬಾವಿಯನ್ನು ಮುಚ್ಚದೇ ಬೇರೆ ಯಾವುದೇ ದಾರಿ ಇಲ್ಲದೇ ಇರುವುದರಿಂದ ಗ್ರಾಪಂ ಬಾವಿಯನ್ನು ಮುಚ್ಚಿಸಿದೆ.


ಅಪಾಯ ತಪ್ಪಿಸಿದ ಗ್ರಾಪಂ
ಸುಮಾರು 53 ವರ್ಷ ಹಳೆಯದಾದ ಬಾವಿಯು ಸಂಪೂರ್ಣ ಕುಸಿತಗೊಂಡಿರುವುದರಿಂದ ಅದನ್ನು ದುರಸ್ತಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಅಲ್ಲದೆ ಇದೇ ರಸ್ತೆಯಲ್ಲಿ ಪ್ರತಿನಿತ್ಯ ಎಲ್‌ಕೆಜಿಯಿಂದ ಹಿಡಿದು ಕಾಲೇಜು ತನಕದ ವಿದ್ಯಾರ್ಥಿಗಳು ಓಡಾಟ ಮಾಡುತ್ತಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ಇದನ್ನು ಮನಗಂಡ ಗ್ರಾಪಂ ತಾತ್ಕಾಲಿಕವಾಗಿ ಬಾವಿಯನ್ನು ಮಣ್ಣು ಹಾಕಿ ಮುಚ್ಚಿಸಿದೆ. ಗ್ರಾಪಂ ಕೈಗೊಂಡ ಕೆಲಸಕ್ಕೆ ಸಾರ್ವಜನಿಕ ವಲಯದಿಂದಲೂ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.

ಬಾವಿ ಸಂಪೂರ್ಣ ಕುಸಿತಗೊಂಡಿರುವುದರಿಂದ ಮುಂದೆ ಆಗುವ ಅಪಾಯವನ್ನು ತಪ್ಪಿಸುವ ಸಲುವಾಗಿ ಪಂಚಾಯತ್ ತುರ್ತು ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ತಾತ್ಕಾಲಿಕವಾಗಿ ಬಾವಿಯನ್ನು ಮುಚ್ಚಿಸಿದ್ದೇವೆ.
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ

LEAVE A REPLY

Please enter your comment!
Please enter your name here