ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಅಡಿಕೆ ಮತ್ತು ಕಾಳುಮೆಣಸನ್ನು ಕೈ ಬಿಡಲಾಗಿದ್ದು ಮರು ಟೆಂಡರ್ ಪ್ರಕ್ರಿಯೆಯಲ್ಲಿ ಇವೆರಡನ್ನೂ ವಿಮಾ ಯೋಜನೆಗೆ ಸೇರಿಸುವುದು ನನ್ನ ಜವಾಬ್ದಾರಿ ಈ ವಿಚಾರದಲ್ಲಿ ಕೃಷಿಕರು ಯಾವುದೇ ಆತಂಕ ಪಡಬೇಕಾದ ಅವಶಕತೆಯೇ ಇಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ವಿಮಾ ವಿಚಾರದಲ್ಲಿ ಕೆಲವು ರಾಜಕೀಯ ವ್ಯಕ್ತಿಗಳು ಊಹಾಪೋಹವನ್ನು ಸೃಷ್ಟಿಸಿ ಕೃಷಿಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದ ಕ ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸನ್ನು ಸೇರಿಸಿಯೇ ಇಲ್ಲ, ಜಿಲ್ಲೆಯಲ್ಲಿ ಟೆಂಡರ್ ಪ್ರಕ್ರಿಯೆ ನಡೆದೇ ಇಲ್ಲ ಎಂದು ಕೆಲವರು ಹೇಳಿಕೆ ನೀಡಿ ಕೃಷಿಕರನ್ನು ದಿಕ್ಕುತಪ್ಪಿಸುವ ಕೆಲಸವನ್ನು ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ತೆರೆಮರೆಯಲ್ಲಿ ಹೇಳಿಕೆ ನೀಡುವ ಯರಿಗೂ ವಿಮಾ ಯೋಜನೆಯಲ್ಲಿ ಏನೇನಾಗಿದೆ ಎಂಬ ಮಾಹಿತಿಯ ಕೊರತೆ ಇದೆ. ಬಿಜೆಪಿ ಸರಕಾರ ಅಡಿಕೆ ಮತ್ತು ಕಾಳುಮೆಣಸನ್ನು ಕೈ ಬಿಟ್ಟಾಗ ಅದನ್ನು ತೋಟಗಾರಿಕಾ ಸಚಿವರಲ್ಲಿ ಮಾತನಾಡಿ ಸೇರಿಸುವ ಕೆಲಸವನ್ನು ಮಾಡಿದ್ದೇನೆ. ಇದೀಗ ಟೆಂಡರ್ ಪ್ರಕ್ರಿಯೆಯೂ ನಡೆದಿದ್ದು ಒಂದು ವಾರದೊಳಗೆ ವಿಮಾ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ಪುರ್ಣಗೊಳ್ಳಲಿದೆ. ಕೃಷಿಕರು ಈ ವಿಚಾರದಲ್ಲಿ ಗೊಂದಲಕ್ಕೀಡಾಗುವುದು ಬೇಡ. ಅದನ್ನು ಮಾಡಿಕೊಡುವ ಜವಾಬ್ದಾರಿ ನನ್ನದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.