`ಚಿಕಿತ್ಸೆಯ ನೆರವಿಗೆ 2.5 ಲಕ್ಷ ಸಂಗ್ರಹವಾಗಿದೆ-30 ಸಾವಿರ ರೂ.ಕಳುಹಿಸಿಕೊಟ್ಟಲ್ಲಿ ನೀವಿರುವಲ್ಲಿಗೇ ಬಂದು ನೆರವಿನ ಚೆಕ್ ನೀಡುತ್ತೇವೆ’-ಹೀಗೊಂದು ವಂಚನಾ ಜಾಲ ಕಾರ್ಯಾಚರಣೆ

0

ಆಸ್ಪತ್ರೆಯಲ್ಲಿ ದಾಖಲಾಗಿರುವ ಅಶಕ್ತರೇ ಇವರ ಟಾರ್ಗೆಟ್

ಪುತ್ತೂರು:ದುಬೈ ಸೋಷಿಯಲ್ ಮೀಡಿಯಾ ಮೂಲಕ ನಾವು ನಿಮ್ಮ ಚಿಕಿತ್ಸಾ ವೆಚ್ಚಕ್ಕೆ ರೂ.2.5 ಲಕ್ಷ ಸಂಗ್ರಹಿಸಿದ್ದೇವೆ.ಈ ಮೊತ್ತದ ಚೆಕ್ ತಲುಪಿಸಲು ವಾಹನದ ಬಾಬ್ತು ರೂ.30,000ವನ್ನು ಮೊದಲು ಕಳುಹಿಸಿಕೊಡಬೇಕು.ನಾವು ನೀವಿರುವಲ್ಲಿಗೇ ಬಂದು ಚೆಕ್ ನೀಡುತ್ತೇವೆ’ ಎಂಬ ನಯವಾದ ಮಾತುಗಳಿಂದ ಆರ್ಥಿಕ ಸಂಕಷ್ಟದಲ್ಲಿರುವವರನ್ನು ವಂಚಿಸಲು ಮುಂದಾದ ಘಟನೆಯೊಂದು ವರದಿಯಾಗಿದೆ. ಇರ್ದೆ ಗ್ರಾಮದ ದೂಮಡ್ಕ ನಿವಾಸಿ, ಕೂಲಿ ಕಾರ್ಮಿಕ ಪರಮೇಶ್ವರ ನಾಯ್ಕ ಎಂಬವರಿಗೆ ಈ ರೀತಿಯ ಕರೆ ಬಂದಿದೆ.

ಪರಮೇಶ್ವರ ನಾಯ್ಕರವರು ಕಳೆದ ಕೆಲ ದಿನಗಳ ಹಿಂದೆ ಆರ್ಲಪದವು ಎಂಬಲ್ಲಿ ಕೃಷಿ ಕೆಲಸದಲ್ಲಿರುವ ವೇಳೆ ಮರದ ಗೆಲ್ಲೊಂದು ಅವರ ಕಾಲಿಗೆ ಬಿದ್ದು ಕಾಲು ಮುರಿತಕ್ಕೊಳಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು.ಇವರ ಆರ್ಥಿಕ ಸಂಕಷ್ಟ ಮನಗಂಡ ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ನವೀನ್ ರೈಯವರು ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಪ್ರಚಾರ ಮಾಡಿ,ಪರಮೇಶ್ವರ ನಾಯ್ಕ ಅವರಿಗೆ ನೆರವು ನೀಡುವಂತೆ ಮನವಿ ಮಾಡಿದ್ದರು.ಇದಕ್ಕೆ ಸ್ಪಂದಿಸಿರುವ ಹಲವು ಮಂದಿ ಸಹಾಯಹಸ್ತವನ್ನು ನೀಡಿದ್ದರು.ಆದರೆ ಇದನ್ನೇ ಬಂಡವಾಳವನ್ನಾಗಿಸಿಕೊಂಡ ವ್ಯಕ್ತಿಯೋರ್ವ ಕರೆ ಮಾಡಿ ಪರಮೇಶ್ವರ ನಾಯ್ಕ ಅವರನ್ನು ವಂಚಿಸಲು ಮುಂದಾಗಿರುವುದು ಬೆಳಕಿಗೆ ಬಂದಿದೆ.

ಕರೆ ಮಾಡಿದ ವ್ಯಕ್ತಿ,ತನ್ನ ಹೆಸರು ಮಹಮ್ಮದ್, ತಾನು ಗುಲ್ಬರ್ಗಾದಿಂದ ಕರೆ ಮಾಡುತ್ತಿರುವುದಾಗಿ’ ಹೇಳಿ ನಯವಾಗಿ ಮಾತು ಮುಂದುವರಿಸಿದ್ದ.ನಿಮ್ಮ ಚಿಕಿತ್ಸಾ ವೆಚ್ಚಕ್ಕೆ ನೆರವು ಕೋರಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಸಂದೇಶಕ್ಕೆ ದುಬೈನಿಂದ 2.5 ಲಕ್ಷ ರೂಪಾಯಿ ಸಂಗ್ರಹವಾಗಿದ್ದು ಅದನ್ನು ನಿಮಗೆ ನೀಡಲಿದ್ದೇವೆ.ನೀವು ಬಂದು ಚೆಕ್ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ’ ಎಂದು ಹೇಳಿದ.ನಾನು ಆಸ್ಪತ್ರೆಗೆ ದಾಖಲಾಗಿರುವುದರಿಂದ ಅಲ್ಲಿಗೆ ಬರಲು ಸಾಧ್ಯವಿಲ್ಲ.ನೀವು ಫೋನ್ ಪೇ ಮೂಲಕ ಕಳುಹಿಸಿ’ ಎಂದು ಪರಮೇಶ್ವರ ನಾಯ್ಕರವರು ಕರೆ ಮಾಡಿದ ಅಪರಿಚಿತನಿಗೆ ತಿಳಿಸಿದರು.ನಮ್ಮಲ್ಲಿ ಚೆಕ್ ಇದ್ದು ಆ ಮೊತ್ತವನ್ನು ಫೋನ್ ಪೇ ಮಾಡಲು ಸಾಧ್ಯವಿಲ್ಲ.ನಿಮಗೆ ಬರಲು ಸಾಧ್ಯವಿಲ್ಲವಾದರೆ ನಾವು ನೀವಿರುವಲ್ಲಿಗೇ ಬಂದು ಕೊಡುವುದಾಗಿ’ ತಿಳಿಸಿದ ಅಪರಿಚಿತ,ನಮಗೆ ಅಲ್ಲಿಗೆ ಬಂದು ಹಿಂತಿರುಗುವ ವಾಹನದ ವೆಚ್ಚವಾಗಿ ರೂ.30 ಸಾವಿರವನ್ನು ಮೊದಲೇ ನೀಡಬೇಕಾಗುತ್ತದೆ’ ಎಂದು ಹೇಳಿದ.ನೀವು ಇಲ್ಲಿಗೆ ಬಂದು ಚೆಕ್ ನೀಡಿದ ಬಳಿಕ 30 ಸಾವಿರ ರೂ.ನೀಡುತ್ತೇವೆ’ ಎಂದು ಪರಮೇಶ್ವರ ಅವರು ಹೇಳಿದಾಗ,ನಿಮಗೆ ನನ್ನ ಮೇಲೆ ವಿಶ್ವಾಸವಿಲ್ಲದಿದ್ದರೆ ನಾನು ವಿಡಿಯೋ ಕಾಲ್ ಮಾಡಿ ಚೆಕ್ ತೋರಿಸುವುದಾಗಿ ತಿಳಿಸುತ್ತಾನೆ.ತನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದು ಪರಮೇಶ್ವರ ಅವರು ತಿಳಿಸಿದಾಗ, 15,000 ಈಗ ಕಳುಹಿಸಿ ಉಳಿದ 15,000ವನ್ನು ಚೆಕ್ ನೀಡಿದ ಬಳಿಕ ನೀಡುವಂತೆ ತಿಳಿಸಿದ.ತನ್ನ ಬಳಿ ಕೇವಲ ರೂ.8000 ಇದೆ ಎಂದಾಗ, ಅದನ್ನು ಕಳುಹಿಸಿಕೊಡಿ ಎಂದು ಆತ ತಿಳಿಸಿದ.ಇದಕ್ಕೆ ಯಾವುದೇ ಉತ್ತರಿಸದ ಪರಮೇಶ್ವರರವರು ನಾಳೆ ಕರೆ ಮಾಡುವುದಾಗಿ ಹೇಳಿ ಕರೆ ಕಡಿತಗೊಳಿಸಿದ್ದರು.


ಪಕ್ಕದ ಬೆಡ್‌ನವರಿಗೂ ಕರೆ:
ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಪರಮೇಶ್ವರರವರು, ತನಗೆ ಕರೆ ಬಂದಿರುವ ಬಗ್ಗೆ ಪಕ್ಕದ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ರಹ್ಮಾವರದ ನಿವಾಸಿಯಲ್ಲಿ ತಿಳಿಸಿದಾಗ, ಕೆಲ ದಿನಗಳ ಹಿಂದೆ ನನಗೂ ಇದೇ ರೀತಿ ಕರೆ ಬಂದಿತ್ತು.ಗುಲ್ಬರ್ಗಾ ದರ್ಗಾದಿಂದ ಕರೆ ಮಾಡುತ್ತಿದ್ದು ದುಬಾ ಹೆಲ್ಪ್ಲೈನ್ ಗ್ರೂಪ್‌ನಿಂದ ಚಿಕಿತ್ಸೆ ವೆಚ್ಚಕ್ಕಾಗಿ ರೂ.2.38 ಲಕ್ಷದ ಚೆಕ್ ಇದ್ದು ಅದನ್ನು ತಲುಪಿಸಲು ನಮ್ಮಲ್ಲೂ ಅವರು 30,000 ರೂಪಾಯಿ ಕಳುಹಿಸಿಕೊಡುವಂತೆ ಬೇಡಿಕೆಯಿಟ್ಟಿದ್ದರು.ಮೊದಲು ನಮ್ಮ ಖಾತೆಗೆ ಜಮೆ ಮಾಡುವಂತೆ ನಾವು ತಿಳಿಸಿದಾಗ ಹಾಗೆ ಮಾಡಲು ಸಾಧ್ಯವಿಲ್ಲ. ಚೆಕ್ ನೀಡಿ ಫೊಟೋ ತೆಗೆಯಬೇಕು ಎಂದು ತಿಳಿಸಿದ್ದರು.ಆದರೆ ನಾವು ಹಣ ಕಳುಹಿಸಿಕೊಟ್ಟಿಲ್ಲ ಎಂದು ಹೇಳಿದರು.ಅವರಿಗೆ ಬಂದಿರುವ ಕರೆಯ ಸಂಭಾಷಣೆಯನ್ನು ಅವರು ರೆಕಾರ್ಡ್ ಮಾಡಿಕೊಂಡಿದ್ದು ಅದರಲ್ಲಿ ಮಾತನಾಡಿರುವ ವ್ಯಕ್ತಿಯ ಸ್ವರಕ್ಕೂ, ನನಗೆ ಕರೆ ಮಾಡಿದಾತನ ಸ್ವರಕ್ಕೂ ಸಾಮ್ಯತೆ ಇದ್ದು ಒಂದೇ ವ್ಯಕ್ತಿ ಬೇರೆ ಬೇರೆ ನಂಬರ್‌ನಿAದ ಕರೆ ಮಾಡಿ ಈ ರೀತಿ ವಂಚಿಸಲು ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ ಎಂದು ಪರಮೇಶ್ವರ ಅವರು ತಿಳಿಸಿದ್ದಾರೆ.2.5 ಲಕ್ಷ ರೂ.ನೆರವಿನ ಆಮಿಷವೊಡ್ಡಿದ್ದರೂ ಪರಮೇಶ್ವರ ನಾಯ್ಕ ಅವರು ಅಪರಿಚಿತನ ಮಾತಿಗೆ ಮರುಳಾಗದೇ ವಂಚನೆಯಿಂದ ಪಾರಾಗಿದ್ದಾರೆ.

ತಾನು ಕಲ್ಲುರ್ಟಿ, ಪಂಜುರ್ಲಿ ದೈವದ ಭಕ್ತ ಎಂದಿದ್ದ
30 ಸಾವಿರ ರೂ.ಕಳುಹಿಸಿಕೊಡುವಂತೆ ಹೇಳಿ ತನಗೆ ಕರೆ ಬಂದಿರುವ ವಿಚಾರದ ಕುರಿತು ಪರಮೇಶ್ವರರವರು ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ನವೀನ್ ರೈ ಹಾಗೂ ಇತರರ ಗಮನಕ್ಕೆ ತಂದಿದ್ದರು.ಅವರೂ ಕರೆ ಮಾಡಿದ್ದ ಅಪರಿಚಿತನಿಗೆ ಕರೆ ಮಾಡಿ ಮಾತನಾಡಿದ್ದು ಈ ವೇಳೆ ಆತ ಸಮರ್ಪಕವಾಗಿ ಉತ್ತರ ನೀಡಲಿಲ್ಲ.ಇದೊಂದು ವಂಚನೆಯ ಜಾಲವಾಗಿದ್ದು ಯಾವುದೇ ಕಾರಣಕ್ಕೂ ಹಣ ಕಳುಹಿಸಬೇಡಿ ಎಂದು ಅವರು ಪರಮೇಶ್ವರರಿಗೆ ಸಲಹೆ ನೀಡಿದ್ದರು.ಜು.13ರಂದು ಸಂಜೆ 6 ಗಂಟೆಗೆ ಅದೇ ಅಪರಿಚಿತ ವ್ಯಕ್ತಿ ಪರಮೇಶ್ವರ ನಾಯ್ಕ ಅವರಿಗೆ ಮತ್ತೆ ಕರೆ ಮಾಡಿ,ತಾನು ಕರೆ ಮಾಡಿರುವುದನ್ನು ಇತರರಿಗೆ ಯಾಕೆ ತಿಳಿಸಿದ್ದು ಎಂದು ಪ್ರಶ್ನಿಸಿ, ಗದರಿಸಿದ್ದಲ್ಲದೆ, ಹಣ ಕಳುಹಿಸಿಕೊಡುವಂತೆ ತಿಳಿಸಿದ್ದ.ನನ್ನ ಮೇಲೆ ವಿಶ್ವಾಸವಿರಲಿ.ನಾನು ಹಾಸನದವನು.ನಾನು ಕಲ್ಲುರ್ಟಿ ಹಾಗೂ ಪಂಜುರ್ಲಿ ದೈವದ ಭಕ್ತ ಎಂದೆಲ್ಲಾ ಹೇಳಿದ್ದಲ್ಲದೆ,ನನಗೆ ಈಗ ನಮಾಜು ಮಾಡುವ ಸಮಯವಾಯಿತು.ಮತ್ತೆ ಕರೆ ಮಾಡುವುದಾಗಿ ಹೇಳಿ ಕರೆ ಕಡಿತ ಮಾಡಿದ್ದ.ಆ ಬಳಿಕ ಕರೆ ಮಾಡಿಲ್ಲ ಎಂದು ಪರಮೇಶ್ವರ ನಾಯ್ಕ ಅವರುಸುದ್ದಿ’ಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here