ಪುತ್ತೂರು: ದರ್ಬೆಯ ಲಿಟ್ಲ್ ಫ್ಲವರ್ ಶಾಲೆಯ ಮಾತೃಸಂಸ್ಥೆ ಬೆಥನಿ ಸಂಸ್ಥೆಯ 102ನೇ ಸಂಸ್ಥಾಪನಾ ದಿನಾಚಣೆ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಗಿನಿ ವೆನಿಶಾ ಬಿ ಎಸ್ ಮಾತನಾಡಿ, ಮಹಿಳೆಯರ ಶಿಕ್ಷಣ, ಹಿಂದುಳಿದವರ ಶಿಕ್ಷಣಕ್ಕಾಗಿ, ಶಿಕ್ಷಣ ಕ್ರಾಂತಿಯನ್ನೇ ಮಾಡಿ ಲಕ್ಷಾಂತರ ಜನರ ಬದುಕನ್ನು ಬೆಳಗಿದವರು. ಇಂದು ಅವರು ನೆಟ್ಟಗಿಡ ನಾಲ್ಕು ರಾಷ್ಟ್ರಗಳನ್ನು ಮೀರಿ 216 ಸಂಸ್ಥೆಗಳಾಗಿ ಸಮಾಜಕ್ಕೆ ಬೆಳಕಾಗಿದೆ. ಸಂಸ್ಥಾಪಕರಾದ ದೇವರ ಸೇವಕ ಫಾದರ್ ರೇಮಂಡ್ ಫ್ರಾನ್ಸಿಸ್ ಕಮ್ಮಿಲ್ಲಸ್ ಮಸ್ಕರೇನ್ಹಸ್ ರವರ ಇಡಿ ಬದುಕು ನಮಗೆ ಪ್ರೇರಣೆ ಎಂದರು.
ಮುಖ್ಯ ಅತಿಥಿ ಲಿಟ್ಲ್ ಫ್ಲವರ್ ಶಾಲೆಯ ನಿವೃತ್ತ ಶಿಕ್ಷಕ ಕೆ ಪಿ ಜೋಸೆಫ್ ಮಾತನಾಡಿ, ಸಂಸ್ಥೆಯ ಸಂಸ್ಥಾಪಕರು ಸಾಮಾನ್ಯ ಬಾಲಕರಾದ ರೇಮಂಡ್, ಅಸಾಮಾನ್ಯ ವ್ಯಕ್ತಿಯಾದ ಫಾದರ್ ರೇಮಂಡ್ ಫ್ರಾನ್ಸಿಸ್ ಕಮ್ಮಿಲ್ಲಸ್ ಮಸ್ಕರೇನ್ಹಸ್ ರವರ ಬದುಕು ನಮಗೆಲ್ಲಾ ಆದರ್ಶ ಎಂದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ, ನಿಕಟಪೂರ್ವ ಉಪಾಧ್ಯಕ್ಷ ರಘುನಾಥ ರೈ ಸಂದರ್ಭೋಚಿತವಾಗಿ ಮಾತನಾಡಿದರು. ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ಸತೀಶ್ ಆರ್, ದರ್ಬೆ ಕೋಸ್ಟಲ್ ಹೋಮ್ ನ ಮಾಲಕ ಸಂದೇಶ್ ರೈ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ 5ನೇ, 6ನೇ ಹಾಗೂ 4ನೇ ತರಗತಿ ವಿದ್ಯಾರ್ಥಿಗಳಿಂದ ಭಗಿನಿ ಡೈನಾ ಮೇರಿ ಸಿಕ್ವೇರಾ ಮಾರ್ಗದರ್ಶನದಲ್ಲಿ ಪ್ರಾರ್ಥನಾ ವಿಧಿ, ಸ್ವಾಗತ ನೃತ್ಯ, ರೂಪಕ, ಕಿರು ನಾಟಕ ಪ್ರದರ್ಶನಗೊಂಡಿತು. ಶಿಕ್ಷಕಿ ಜೋಸ್ಲಿನ್ ಪಾಯಸ್ ಸ್ವಾಗತಿಸಿ, ಶಿಕ್ಷಕಿ ಭವ್ಯ ಯೋಗೀಶ್ ವಂದಿಸಿದರು. ಶಿಕ್ಷಕಿ ರಿಶ್ವಿತಾ ಕಾರ್ಯಕ್ರಮ ನಿರೂಪಿಸಿದರು.