ಕುಲಾಲ ಸಮಾಜಸೇವಾ ಸಂಘದಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ-ಪ್ರಶಸ್ತಿ ಪ್ರದಾನ, ಸನ್ಮಾನ, ವಿದ್ಯಾರ್ಥಿವೇತನ ವಿತರಣೆ, ವಾರ್ಷಿಕ ಮಹಾಸಭೆ

0

ಅಶೋಕ್ ರೈ ನಿಮ್ಮ ಜನ ಆಗಿ ಈ ಸಮಾಜದ ಹಿಂದೆ ಯಾವತ್ತೂ ಇದ್ದೇನೆ – ಶಾಸಕ ಅಶೋಕ್ ರೈ ಭರವಸೆ

ಪುತ್ತೂರು: ಕುಲಾಲ ಸಮಾಜದ ಬಂಧುಗಳು ಉತ್ತಮ ಸಮಾಜಮುಖಿ ಕಾರ್ಯ ಮಾಡುತ್ತಾ ಬಂದವರು. ಅಂತಹ ಸಮಾಜಕ್ಕೆ ನಾನು ಶುಭ ಹಾರೈಸುತ್ತೇನೆ. ಅದೇ ರೀತಿ ಈ ಅಶೋಕ್ ರೈ ನಿಮ್ಮ ಜನ ಆಗಿ ಈ ಸಮಾಜದ ಹಿಂದೆ ಯಾವತ್ತೂ ಇದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಕುಲಾಲ ಸಮಾಜಕ್ಕೆ ಭರವಸೆ ನೀಡಿದ್ದಾರೆ.


ಪುತ್ತೂರು ಪುರಭವನದಲ್ಲಿ ಜು.23ರಂದು ನಡೆದ ಕುಲಾಲ ಸಮಾಜಸೇವಾ ಸಂಘದ ವಾರ್ಷಿಕ ಕಾರ್ಯಕ್ರಮ ಪ್ರಶಸ್ತಿ ಪ್ರಧಾನ, ಸನ್ಮಾನ ಮತ್ತು ವಿದ್ಯಾರ್ಥಿವೇತನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಕುಂಬಾರರ ಗುಡಿಕೈಗಾರಿಕೆಯನ್ನು ಸಣ್ಣ ಕೈಗಾರಿಕೆಯ ಮೂಲಕ ಅದನ್ನು ಮೇಲಕ್ಕೆ ತಂದ ಹಿರಿಯರನ್ನು ನಾನು ನೋಡಿದ್ದೇನೆ. ಅವರ ಸಾಧನೆ, ಪರಿಶ್ರಮ ಇವತ್ತು ಪ್ರತಿಫಲ ಸಿಕ್ಕಿದೆ. ಈ ನಿಟ್ಟಿನಲ್ಲಿ ಸಮಾಜಕ್ಕಾಗಿ ದುಡಿದ ಹಿರಿಯ, ಕಿರಿಯರ ಬಂಧುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.


ಕುಲಾಲ ಸಮಾಜ ಹಿಂದೆ ಉಳಿದಿಲ್ಲ:
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ನಿವೃತ್ತ ಯೋಧರ ರಾಜ್ಯ ಅಧ್ಯಕ್ಷ ಬಿಎಸ್‌ಎಫ್ ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ ಮಾತನಾಡಿ ಕುಲಾಲ ಸಮಾಜ ಹಿಂದಿನಂತೆ ಹಿಂದೆ ಉಳಿದಿಲ್ಲ. ಇವತ್ತು ಕುಲಾಲರು ಎಂದು ಹೇಳಿ ಹೆಮ್ಮೆಯಿಂದ ನಡೆಯಬೇಕು ಎಂದರು.


ವೀರನಾರಾಯಣ ದೇವಳಕ್ಕೆ ಪುತ್ತೂರು ಸಂಘದ ಕೊಡುಗೆ ಅಪಾರ:
ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಬೈಲ್ ಮಾತನಾಡಿ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಪುತ್ತೂರು ಸಂಘ ದೊಡ್ಡ ರೀತಿಯ ಸಹಕಾರ ನೀಡಿದೆ. ಕುಲಾಲ ಸಮಾಜದ ಆರಾಧ್ಯ ದೇವಸ್ಥಾನ ಆದರೂ ಇದು ಸಂಪೂರ್ಣ ಹಿಂದು ಸಮಾಜದ ದೇವಸ್ಥಾನ. ಈ ನಿಟ್ಟಿನಲ್ಲಿ ತಮ್ಮ ಸ್ನೇಹಿತ ಬಳಗದೊಂದಿಗೆ ಕ್ಷೇತ್ರಕ್ಕೆ ಬರಬೇಕೆಂದು ಮನವಿ ಮಾಡಿದರು.


5 ವರ್ಷದಲ್ಲಿ ಬಲಿಷ್ಠ ಸಮುದಾಯಗಳ ಎತ್ತರಕ್ಕೆ ನಮ್ಮ ಸಮಾಜ ಇರಲಿದೆ:
ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ ಕಳೆದ ಮೂರು ವರ್ಷದ ಇತಿಹಾಸ ನೋಡಿದರೆ ವೀರನಾರಾಯಣ ದೇವಸ್ಥಾನದಲ್ಲಿ ಅಡೆತಡೆ ಬಂದಾಗ ನಮ್ಮ ಸಮಾಜ ಸ್ವಾಭಿಮಾನದಿಂದ ಒಗ್ಗಟಾಯಿತು. ಆಗ ಸಿಕ್ಕಿದ ಅಭೂತಪೂರ್ವ ಬೆಂಬಲ ನಮ್ಮಿಂದ ದೊಡ್ಡ ದೇವಸ್ಥಾನ ನಿಮಾಣ ಮಾಡಲು ಸಾಧ್ಯವಾಯಿತು. ಇವತ್ತು ಸಮಾಜ ಬಾಂದವರ ವಿವಾಹ ವೇದಿಕೆ ಮಾಡುವ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ವರ್ಷಕ್ಕೆ ಒಮ್ಮೆ ಒಕೂಲಿ ವ್ಯವಸ್ಥೆ ಮಾಡಲಾಗಿದೆ. ಮಾತೃ ಸಂಘದ ಮೂಲಕ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಂಗಳೂರಿನಲ್ಲಿ ಸಮಾಜದ ಮಹಿಳಾ ಉದ್ಯೋಗಿಗಳಿಗೆ ವಸತಿ ವ್ಯವಸ್ಥೆ ಲೋಕಾರ್ಪಣೆ ಮಾಡಲಿದ್ದೆವೆ. ಅದೇ ರೀತಿ ನಮ್ಮ ಸಮಾಜದ ಶಕ್ತಿಯನ್ನು ತೋರಿಸಲು ಸಮಾಜದಿಂದಲೇ ಜನಗಣತಿ ಮಾಡಲಿದ್ದೇವೆ. ನಮ್ಮ ಕೆಲಸ ಸಮಾಮುಖಿಯಾಗಿದ್ದರೆ ಸೋಲು ಗೆಲುವಿನ ಪ್ರಶ್ನೆಯೆ ಇಲ್ಲ ಎಂಬಂತೆ ನಮ್ಮ ಸಮುದಾಯದ ಮುಂದಿನ ಭವಿಷ್ಯಕ್ಕಾಗಿ ಮುಂದಿನ 5 ವರ್ಷದಲ್ಲಿ ಮೂರು ಬಲಿಷ್ಠ ಸಮುದಾಯದೊಂದಿಗೆ ನಮ್ಮ ಸಮಾಜವು ಇರಲಿದೆ ಎಂದರು. ಕುಲಾಲ ಸಮಾಜಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರ ನಟ ಮನೋಜ್ ಪುತ್ತೂರು ಶುಭ ಹಾರೈಸಿದರು.


ಪ್ರಶಸ್ತಿ ಪ್ರದಾನ, ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ:
ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಅವರಿಗೆ ‘ಕುಲಾಲ ಕುಲತಿಲಕ’ ಪ್ರಶಸ್ತಿ ಮತ್ತು ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಬೈಲ್ ಅವರಿಗೆ ‘ಕುಲಾಲ ಕುಲಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಳ್ತಂಗಡಿ ಅಗ್ನಿಶಾಮಕ ದಳದ ಠಾಣಾಧಿಕಾರಿಯಾಗಿದ್ದು ಮುಖ್ಯಮಂತ್ರಿ, ರಾಷ್ಟ್ರಪತಿ ಚಿನ್ನದ ಪದಕ ವಿಜೇತ ಎಂ ಗೋಪಾಲ್ ಬಂಗೇರ ದಂಪತಿ ಅವರನ್ನು ಸನ್ಮಾನಿಸಲಾಯಿತು. ಮಹೇಶ್ ಕೆ ಸವಣೂರು ಮತ್ತು ಸಂಘದ ಉಪಾಧ್ಯಕ್ಷ ಸಚ್ಚಿದಾನಂದ ಡಿ, ಹರಿಣಾಕ್ಷಿ ಸೂತ್ರ ಬೆಟ್ಟು ಅವರು ಸನ್ಮಾನ ಪತ್ರ ವಾಚಿಸಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ಸಮಾ ಬಾಂಧವ ವಿದ್ಯಾರ್ಥಿಗಳನ್ನು, ಸಾಧನೆಗೈದ ಪದವಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಸುಜಾತ ಜನಾರ್ದನ ವಿದ್ಯಾರ್ಥಿವೇತನ ಕಾರ್ಯಕ್ರಮ ನಿರ್ವಹಿಸಿದರು.


ಕಿರುಚಿತ್ರದ ಪೋಸ್ಟರ್ ಬಿಡುಗಡೆ:
ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಯತೀಶ್ ಕುಲಾಲ್ ಮುಖ್ಯ ಭೂಮಿಕೆಯಲ್ಲಿರುವ “ಇಲ್ಲದ ಬೊಳ್ಪು ಮಾಜಿನಗ” ಎಂಬ ಕಿರುಚಿತ್ರವನ್ನು ಪಂಚಭಾಷ ನಟ ಮನೋಜ್ ಪುತ್ತೂರು ಅವರು ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಕುಲಾಲ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ್ ಪೆರುವಾಯಿ,ಸಂಘದ ಗೌರವಾಧ್ಯಕ್ಷ ಬಿ ಎಸ್ ಕುಲಾಲ್ , ಕುಲಾಲ ಸಂಘದ ವಿವಿಧ ವಲಯದ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಕುಲಾಲ ಸಂಘದ ಕಾರ್ಯದರ್ಶಿ ಜನಾರ್ದನ ಮೂಲ್ಯ ಸಾರ್ಯ ಸ್ವಾಗತಿಸಿದರು. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಕುಲಾಲ ಸಹಕಾರ ಭವನದಲ್ಲಿರುವ ಸಂಘದ ಕಚೇರಿಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

LEAVE A REPLY

Please enter your comment!
Please enter your name here