ಪುತ್ತೂರು: ರಾಜಕೀಯ ರಹಿತವಾಗಿ 50 ವರ್ಷ ಮೆಲ್ಪಟ್ಟ ಹಿರಿಯರನ್ನು ಸೇರಿಸಿಕೊಂಡು ಸಮಾಜಮುಖಿ ಕಾರ್ಯ ನಡೆಸುತ್ತಿರುವ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದಿಂದ ಕಾಸರಗೋಡು ಶ್ರೀ ಎಡನೀರು ಮಠದ ಚಾತುರ್ಮಾಸ್ಯ ಸಭಾಂಗಣದಲ್ಲಿ ಹಿರಿಯರ ಸಮಾವೇಶ ಮತ್ತು ಸನ್ಮಾನ ಕಾರ್ಯಕ್ರಮ ಆ.13 ರಂದು ಜರುಗಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾವೇಶದ ಆಮಂತ್ರಣ ಪತ್ರವನ್ನು ಪ್ರೊ.ವೇದವ್ಯಾಸ ಅವರು ಬಿಡುಗಡೆ ಮಾಡಿದರು. ಬಳಿಕ ಕೈಯೂರು ನಾರಾಯಣ ಭಟ್ ಅವರು ಮಾತನಾಡಿ ನಿವೃತ್ತಿ ಅನ್ನುವುದು ಸರಕಾರದ ನಿಯಮವಷ್ಟೆ. ಮನಸ್ಸು ಎಲ್ಲಿಯ ತನಕ ಸ್ಪಂಧಿಸುತ್ತಿರುತ್ತದೆ ಅಲ್ಲಿನ ತನಕ ದೇಹಕ್ಕೆ ಹೊಡೆತ ಬರುವುದಿಲ್ಲ. ನಾವು ಗುಣಾತ್ಮಕ ಚಿಂತನೆಯನ್ನು ಮಾಡುತ್ತಾ ಸಮಾಜಕ್ಕೆ ಸೇವೆ ಮಾಡುವ ಉದ್ದೇಶದಿಂದ ಸಂಘಟನೆ ಮಾಡುತ್ತಿದ್ದೇವೆ ಎಂದ ಅವರು ಆ.13 ರಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಚಾತುರ್ಮಾಸ್ಯದ ಸಂದರ್ಭ ಚಾತುರ್ಮಾಸ್ಯದ ಸಭಾಂಗಣದಲ್ಲಿ ಈ ಸಮಾವೇಶ ನಡೆಯಲಿದೆ. ಅಂದು ಬೆಳಿಗ್ಗೆ ಬೊಳುವಾರು ವೈದೇಹಿ ವೈಷ್ಣವಿ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿಯವರು ಸಮಾವೇಶ ಉದ್ಘಾಟಿಸಲಿದ್ದಾರೆ. ಹಾವೇರಿ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ. ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕೃರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ.ಶ್ಯಾಮ್ ಭಟ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ವೈದಿಕ ವಿದ್ವಾಂಸ ವಿದ್ವಾನ್ ಪಂಜ ಭಾಸ್ಕರ ಭಟ್ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ಹೇಳಿದರು.
ಸನ್ಮಾನ:
ಸಮಾವೇಶದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಪೆರುವೋಡಿ ನಾರಾಯಣ ಭಟ್, ಪಾತಾಳ ವೆಂಕಟ್ರಮಣ ಭಟ್, ಅರುವ ಕೊರಗಪ್ಪ ಶೆಟ್ಟಿ ಅವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನ ಮಾಡಲಾಗುವುದು ಎಂದು ಕೈಯೂರು ನಾರಾಯಣ ಭಟ್ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಸಹ ಸಂಚಾಲಕ ಭಾಸ್ಕರ ಆಳ್ವ, ಉಪಾಧ್ಯಕ್ಷ ಲೋಕೇಶ್ ಹೆಗ್ಡೆ, ಪುತ್ತೂರು ಘಟಕದ ಉಪಾಧ್ಯಕ್ಷ ಚಂದ್ರಶೇಖರ್ ಆಳ್ವ ಉಪಸ್ಥಿತರಿದ್ದರು.