ಕೊಡಿಪ್ಪಾಡಿ ಹಾ.ಉ. ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ರೂ.23,588.82 ಲಾಭ, ಪ್ರತೀ ಲೀ.ಗೆ 12 ಪೈಸೆ ಬೋನಸ್

ಪುತ್ತೂರು: ಕೊಡಿಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸೆ.೯ರಂದು ಸಂಘದ ಕಚೇರಿ ಪೇರ್ ಕಡಲ್‌ನಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ಭವ್ಯರವರು 2022-23ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪರಿಶೋಧನಾ ವರದಿ, ಲಾಭ ವಿಲೇವಾರಿ, ಅಂದಾಜು ಆಯವ್ಯಯ ಓದಿ ಮಂಜೂರಾತಿ ಪಡೆದುಕೊಂಡರು.


ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ ಹೈನುಗಾರಿಕೆಯನ್ನು ಲಾಭದ ದೃಷ್ಟಿಯಿಂದ ಮುಂದುವರಿಸಬಾರದು. ದನವನ್ನು ಮನೆಯ ಸದಸ್ಯರ ಹಾಗೆ ನೋಡಿಕೊಳ್ಳುವವರು ಇದ್ದಾರೆ. ಸರಕಾರದಿಂದ ಹಾಲಿಗೆ ರೂ.3 ಹೆಚ್ಚುವರಿಯಾಗಿದೆ. ಫ್ಯಾಟ್ ಆಧಾರದಲ್ಲಿ ಪ್ರತೀ ಲೀ.ಗೆ ರೂ.4ರವರೆಗೆ ದರ ಸಿಗುತ್ತದೆ. ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಸಿ. ಹೈನುಗಾರಿಕೆಯನ್ನು ಎಲ್ಲರೂ ಬೆಳೆಸೋಣ ಎಂದರು. ಹಾಲಿನ ದರ, ಪಶು ಆಹಾರ ಮಾರಾಟ, ಲವಣ ಮಿಶ್ರಣ, ಒಕ್ಕೂಟದ ಲಾಭಗಳಿಂದ ಸಂಘಕ್ಕೆ ಲಾಭ ಬರುತ್ತದೆ. ಹುಳದ ಮಾತ್ರೆ, ಲವಣ ಮಿಶ್ರಣವನ್ನು ಕಡ್ಡಾಯವಾಗಿ ದನ ಕರುಗಳಿಗೆ ನೀಡಬೇಕು. ಅಲ್ಲದೆ ಪೂರಕ ಆಹಾರವನ್ನು ನೀಡುವುದರ ಮೂಲಕ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದು. ಹಾಲಿನ ಬಗ್ಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಘದ ಕಾರ್ಯದರ್ಶಿ ಅಥವಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ ಎಂದರು. ಕೊಟ್ಟಿಗೆಯಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು. ಶುದ್ಧಹಾಲಿನ ಪೂರೈಕೆ ಮಾಡಬೇಕು. ಹಾಲಿನ ಪಾತ್ರೆ ಸ್ವಚ್ಚವಾಗಿರಬೇಕು. ದನಗಳಿಗೆ ಕೆಚ್ಚಲು ಬಾವು ಬರದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ರಾಸು ವಿಮೆ ಕಡ್ಡಾಯ ಮಾಡಬೇಕು ಎಂದು ಹೇಳಿ ಒಕ್ಕೂಟದಿಂದ ದೊರೆಯುವ ವಿವಿಧ ಯೋಜನೆಗಳ ಮಾಹಿತಿ ತಿಳಿಸಿ ಸದುಪಯೋಗಪಡೆಯುವಂತೆ ಹೇಳಿದರು. ಪುತ್ತೂರು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಧರ್ಮಪಾಲ್‌ರವರು ಪಶು ಸಂಗೋಪನಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ತಿಳಿಸಿದರು. ಕೊಡಿಪ್ಪಾಡಿ ಚಿಗುರು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶೋಭಾ ಮಯ್ಯ ಮಾಹಿತಿ ತಿಳಿಸಿದರು.

ಸಂಘದ ಅಧ್ಯಕ್ಷ ಕೆ. ವಾಸುದೇವ ಮಯ್ಯ ಮಾತನಾಡಿ ಕೊಡಿಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘ ಹಿಂದಿನ ಸಾಲಿನಲ್ಲಿ ತಾಲೂಕು ಮಟ್ಟದಲ್ಲಿ ಪ್ರಶಸ್ತಿ ಪಡೆದಿದೆ. ನಮ್ಮ ಸಂಘವು 2022-23ನೇ ಸಾಲಿನಲ್ಲಿ ರೂ.23,588.82 ಲಾಭ ಗಳಿಸಿದೆ. ಸದಸ್ಯರಿಗೆ ಪ್ರತೀ ಲೀ.ಗೆ 12 ಪೈಸೆ ಬೋನಸ್ ನೀಡಲಾಗುವುದು ಎಂದರು. ಹೈನುಗಾರಿಕೆಯಿಂದ ಯಾವುದೇ ಲಾಭ ಇಲ್ಲ. ಹೈನುಗಾರಿಕೆಯಿಂದ ಆರೋಗ್ಯ ಸುಧಾರಿಸುತ್ತದೆ. ದನದ ಸಾಮೀಪ್ಯ ಸಿಕ್ಕರೆ ಹೈನುಗಾರಿಕೆಯಿಂದ ಮಧುಮೇಹ, ರಕ್ತದೊತ್ತಡದಿಂದ ದೂರವಿರಬಹುದು. ಎಂದರು. ಹಾಲಿಗೆ ರೂ.೬೦ ದರ ದೊರೆಯಬೇಕು. ಈ ಬಗ್ಗೆ ಸರಕಾರಕ್ಕೆ ಬರೆಯಬೇಕು ಎಂದು ತಿಳಿಸಿದರು. ಉಪಾಧ್ಯಕ್ಷ ಎಂ.ರಾಮ ಜೋಯಿಸ ಶಾಸ್ತಾವನ, ನವೀನ ಎ. ಅಂಜಳ, ಗಂಗಾಧರ ಗೌಡ ಅಶ್ವತ್ಥಡಿ, ಸುಬ್ರಹ್ಮಣ್ಯ ಗೌಡ ಎಚ್. ಹನಿಯೂರು, ಪುತ್ತು ಬ್ಯಾರಿ ಕೆ. ಮುರ, ಲೀಲಾ ಬಟ್ರುಪಾಡಿ, ಲೀಲಾವತಿ ಕೋಂಟ್ರುಪಾಡಿ, ಪದ್ಮಾವತಿ ಕೋಡಿಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕ ದಿನೇಶ್ ಜಿ. ಸ್ವಾಗತಿಸಿದರು. ನಿರ್ದೇಶಕ ಎಸ್.ಎನ್.ಸುಕುಮಾರ ರಾವ್ ವಂದಿಸಿದರು.

ಅತೀ ಹೆಚ್ಚು ಹಾಲು ಪೂರೈಕೆದಾರರಿಗೆ ಬಹುಮಾನ
2022-23ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದವರಿಗೆ ವಿಶೇಷ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಸದಸ್ಯರಾದ ಶಾಂತರಾಮ ರಾವ್ ಎಚ್.ವಿ. 6574ಲೀ. ಹಾಲು ಪೂರೈಕೆ ಮಾಡಿ ಪ್ರಥಮ ಸ್ಥಾನ, ಜಯಂತಿ ಕೆ. 4974 ಲೀ. ಹಾಲು ಪೂರೈಕೆ ಮಾಡಿ ದ್ವಿತೀಯ ಸ್ಥಾನ ಪಡೆದುಕೊಂಡರು. ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಪ್ರತೀ ಲೀ. ಹಾಲಿಗೆ ರೂ.60 ನೀಡಲು ಸರಕಾರಕ್ಕೆ ಆಗ್ರಹ
ಸಂಘದ ಅಧ್ಯಕ್ಷ ಕೆ. ವಾಸುದೇವ ಮಯ್ಯ ಮಾತನಾಡಿ ಹೈನುಗಾರರಿಗೆ ಈಗ ದೊರೆಯುವ ದರ ಸಾಕಾಗುವುದಿಲ್ಲ. ಪ್ರತೀ ಲೀ. ಹಾಲಿಗೆ ರೂ.೬೦ ದೊರೆಯಬೇಕು ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸೋಣ. ಕೇರಳ ತಮಿಳುನಾಡಿನಲ್ಲಿ ಹಾಲಿಗೆ ಹೆಚ್ಚಿನ ದರ ಇದೆ ಎಂದು ತಿಳಿಸಿದರು. ಸದಸ್ಯರು ಈ ಬಗ್ಗೆ ಸಮ್ಮತಿ ಸೂಚಿಸಿದರು. ಅದರಂತೆ ಸರಕಾರಕ್ಕೆ ಬರೆಯಲು ತೀರ್ಮಾನಿಸಲಾಯಿತು.

LEAVE A REPLY

Please enter your comment!
Please enter your name here