ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈಯವರು ನಡೆಸಿಕೊಂಡು ಬರುತ್ತಿರುವ ರೈ ಚಾರಿಟೇಬಲ್ ಟ್ರಸ್ಟ್ ಗೆ ದೇಣಿಗೆಯಾಗಿ ನೀಡಿದ ಮೊತ್ತವನ್ನು ಸ್ವೀಕರಿಸದೆ ಶಾಸಕರು ಟ್ರಸ್ಟಿಗೆ ಹಣ ಕೊಡುವುದು ಬೇಡ ಆ ಹಣವನ್ನು ಬಡವರಿಗೆ ಕೊಡಿ ಎಂದು ಹೇಳಿ ಹಣವನ್ನು ಸ್ವೀಕರಿಸದೆ ನಯವಾಗಿ ಹಿಂದಿರುಗಿಸಿದ ಘಟನೆ ನಡೆದಿದೆ.
ಬನ್ನೂರು ಸೇವಾ ಸಹಕಾರಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನಿಸಲಾಗಿತ್ತು.ಕಾರ್ಯಕ್ರಮದ ಸಭೆ ಮುಗಿದ ಬಳಿಕ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಶಾಸಕರ ಕೈಗೆ ರೂ ಹಣವನ್ನು ನೀಡಲು ಮುಂದಾಗಿದ್ದಾರೆ. ಇದು ನಮ್ಮ ಸಹಕಾರಿ ಸಂಘದ ವತಿಯಿಂದ ನೀವು ನಡೆಸಿಕೊಂಡು ಬರುತ್ತಿರುವ ರೈ ಚಾರಿಟೇಬಲ್ ಸಂಸ್ಥೆಗೆ ದೇಣಿಗೆ ಎಂದು ಹೇಳಿದ್ದರು. ಆದರೆ ಹಣವನ್ನು ಕಂಡ ಕೂಡಲೇ ಈ ಹಣವನ್ನು ನಾನು ಸ್ವೀಕರಿಸುವುದಿಲ್ಲ , ನನ್ನ ಟ್ರಸ್ಟಿಗೆ ಹಣ ಬೇಡ ಆ ಹಣವನ್ನು ನೀವು ಬಡವರಿಗೆ ನೀಡಿ ಎಂದು ಅಧ್ಯಕ್ಷರಲ್ಲಿ ವಿನಂತಿಸಿದ್ದಾರೆ.
ಬಡವರಿಗಾಗಿಯೇ ಚಾರಿಟೇಬಲ್ ಟ್ರಸ್ಟ್ ಪ್ರಾರಂಭ ಮಾಡುವ ಮೂಲಕ ಪುತ್ತೂರು ತಾಲೂಕಿನ 22,000 ಬಡ ಕುಟುಂಬಗಳಿಗೆ ಶಾಸಕರು ನೆರವಾಗಿದ್ದರು, ಚುನಾವಣೆಯಲ್ಲಿ ಗೆದ್ದು ಶಾಸಕರಾದ ಬಳಿಕವೂ ಟ್ರಸ್ಟ್ನ ಸೇವೆ ಮುಂದುವರೆದಿದ್ದು ತನ್ನ ಸ್ವಂತ ಹಣದಿಂದಲೇ ಈಗಲೂ ಬಡವರಿಗೆ ನೆರವು ನೀಡುತ್ತಿದ್ದಾರೆ. ಟ್ರಸ್ಟಿಗೆ ಯಾರಾದರೂ ದೇಣಿಗೆ ನೀಡಲು ಮುಂದಾದರೆ ಅದನ್ನು ಬಡವರಿಗೆ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.