ಶಿಸ್ತು ಬದ್ಧವಾಗಿ ನಡೆದ ಪಂದ್ಯಾಟ-ಗಣ್ಯರಿಂದ ಮೆಚ್ಚುಗೆ
ಪುತ್ತೂರು:ದರ್ಬೆ ಲಿಟ್ಲ್ ಫ್ಲವರ್ ಶಾಲಾ ಕ್ರೀಡಾಂಗಣದಲ್ಲಿ ಸೆ.16ರಂದು ಅದ್ದೂರಿಯಾಗಿ ನಡೆದ ಪ್ರೋ. ಕಬಡ್ಡಿ ಮಾದರಿಯ ದ.ಕ ಜಿಲ್ಲಾ ಮಟ್ಟದ 14ರ ವಯೋಮಾನದ ಬಾಲಕ-ಬಾಲಕಿಯರ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟವು ಸಂಜೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆಯೊಂದಿಗೆ ಸಂಪನ್ನಗೊಂಡಿತು.
ದ.ಕ.ಜಿ.ಪಂ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಚೇರಿ(ಆಡಳಿತ) ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇದರ ಆಶ್ರಯದಲ್ಲಿ ನಡೆದ ಪಂದ್ಯಾಟದಲ್ಲಿ ದ.ಕ ಜಿಲ್ಲೆಯ ಬಾಲಕರ ಮತ್ತು ಬಾಲಕಿಯರ ತಲಾ ಏಳು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದೆ. ಬಾಲಕರ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಹಿ.ಪ್ರಾ ಶಾಲೆ ವಿನ್ನರ್, ಪುತ್ತೂರಿನ ಕಡಬ ಸೈಂಟ್ ಆನ್ಸ್ ಹಿ.ಪ್ರಾ ಶಾಲೆ ರನ್ನರ್ ಆಗಿದೆ. ಬಾಲಕಿಯರ ವಿಭಾಗದಲ್ಲಿ ಪುತ್ತೂರಿನ ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆ ವಿನ್ನರ್ ಹಾಗೂ ಮಂಗಳೂರು ಉತ್ತರದ ಮುಲ್ಕಿ ವ್ಯಾಸ ಮಹರ್ಷಿ ಹಿ.ಪ್ರಾ ಶಾಲೆ ರನ್ನರ್ ಆಗಿದೆ. ಪ್ರಥಮ ಸ್ಥಾನ ಪಡೆದ ತಂಡದ 7 ಮಂದಿ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡದ 5 ಮಂದಿ ಕ್ರೀಡಾಪಟುಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರು ತೀರ್ಪಗಾರರಾಗಿ ಸಹಕರಿಸಿದ್ದರು.
ಶಿಸ್ತು ಬದ್ದವಾಗಿ ನಡೆದ ಪಂದ್ಯಾಟ:
ಬೃಹತ್ ವೇದಿಕೆ, ಮಳೆಯಿಂದ ರಕ್ಷಣೆಗಾಗಿ ಛಾವಣಿ ಅಳವಡಿಸಿದ ವಿಶಾಲ ಕ್ರೀಡಾಂಗಣ, ಮ್ಯಾಟ್ ಅಂಕಣ, ಸಾರ್ವಜನಿಕರಿಗೆ ಪಂದ್ಯಾಟ ವೀಕ್ಷಣೆ ಗ್ಯಾಲರಿ ಮಾದರಿ ವ್ಯವಸ್ಥೆ, ಪಂದ್ಯಾಟದ ನಿರ್ವಹಣೆ, ಊಟ, ಉಪಾಹಾರ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲಿಯೂ ಅಚ್ಚು ಕಟ್ಟಾಗಿ, ಶಿಸ್ತು ಬದ್ದ ಹಾಗೂ ವ್ಯವಸ್ಥಿತವಾಗಿ ಪಂದ್ಯಾಟವು ಆಯೋಜನೆಗೊಂಡಿದ್ದು ಅತಿಥಿ, ಗಣ್ಯರಿಂದ ಮೆಚ್ಚುಗೆ ಹಾಗೂ ಪ್ರಶಂಸೆಗೆ ಪಾತ್ರವಾಗಿದೆ. ಪಂದ್ಯಾಟವು ರಾಜ್ಯ ಮಟ್ಟದ ಮಾದರಿಯಲ್ಲಿ ಸಂಯೋಜನೆಗೊಂಡಿದೆ ಎಂದು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಥಮಿಕ ಶಾಲಾ ವಿಭಾಗದ ಪಂದ್ಯಾಟದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇಂತಹ ಅದ್ದೂರಿ ಹಾಗೂ ವ್ಯವಸ್ಥಿತ ಪಂದ್ಯಾಟ ಆಯೋಜನಗೊಂಡಿರುವುದಾಗಿ ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಭುವನೇಶ್ ತಿಳಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂಭ್ರಮಿಸಿದ ಶಿಕ್ಷಕರು:
ಫೈನಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಅತಿಥೆಯ ತಂಡವಾಗಿದ್ದ ಲಿಟ್ಲ್ ಫ್ಲವರ್ ಶಾಲಾ ತಂಡವು ಗರೀಷ್ಟ ಅಂಕಗಳ ಅಂತರದಿಂದ ಪ್ರಥಮ ಸ್ಥಾನ ಗಳಿಸಿದ ಸಂಭ್ರಮವನ್ನು ವಿದ್ಯಾರ್ಥಿಗಳ ಜೊತೆಗೆ ಶಾಲಾ ಶಿಕ್ಷಕರು ಕುಣಿದು ಸಂಭ್ರಮಿಸಿದರು.
ವಿಜಯೋತ್ಸವ:
ಜಿಲ್ಲಾ ಮಟ್ಟದ ಪಂದ್ಯಾಟ ದಲ್ಲಿ ಚಾಂಪಿಯನ್ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾದ ಲಿಟ್ಲ್ ಫ್ಲವರ್ ಶಾಲಾ ವಿದ್ಯಾರ್ಥಿಗಳು ಟ್ರೋಫೀಯೊಂದಿಗೆ ತೆರೆದ ವಾಹನದಲ್ಲಿ ಶಾಲೆಯಿಂದ ದರ್ಬೆ ವೃತ್ತದ ತನಕ ಮೆರವಣಿಗೆ ಸಾಗಿ ವಿಜಯೋತ್ಸವವನ್ನು ನಡೆಸಿದರು.
ಮುಖ್ಯ ಅತಿಥಿಯಾಗಿದ್ದ ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಎಲ್ಲರನ್ನು ಒಗ್ಗೂಡಿಸಿಕೊಂಡು ಪಂದ್ಯಾಟವು ಯಾರೂ ಊಹಿಸದ ರೀತಿಯಲ್ಲಿ ಅದ್ದೂರಿಯಾಗಿ ನಡೆದಿದೆ. ಸೋತವರು ಎದೆ ಗುಂದದೆ ನಿರಂತರ ಪರಿಶ್ರಮದ ಮೂಲಕ ಪ್ರಥಮ ಸ್ಥಾನ ಪಡೆಯಬೇಕು ಎಂದ ಅವರು ನಾನು ಇದೇ ಶಾಲೆಯ ಹಿರಿಯ ವಿದ್ಯಾರ್ಥಿ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಸಾಧಿಸುವ ಚಲವನ್ನು ಮೈಗೂಡಿಸಿಕೊಂಡಿದ್ದು ತಮ್ಮ ಸಾಧನೆಯನ್ನು ಪಂದ್ಯಾಟದಲ್ಲಿ ತೋರಿಸಿಕೊಟ್ಟಿದ್ದಾರೆ. ಅಸಾಧ್ಯವಾದುದನ್ನು ಬಿಟ್ಟು ಸಾಧ್ಯ ಎಂಬ ಚಲದಿಂದ ಮುನ್ನಡೆದಾಗ ಯಶಸ್ಸು ಖಂಡಿತಾ ದೊರೆಯಲಿದೆ ಎಂದರು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ ಮಾತನಾಡಿ, ತನ್ನ ಮೂವರು ಮಕ್ಕಳು ಇದೇ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು ಶಾಲೆಯ ಕಾರ್ಯಕ್ರಮಗಳಲ್ಲಿ ಪ್ರತಿಯಿಂದ ಭಾಗವಹಿಸುತ್ತಾರೆ. ಪಂದ್ಯಾಟವು ಅತ್ಯುತ್ತಮವಾಗಿ ಮೂಡಿ ಬಂದಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಲಿಟ್ಲ್ ಫ್ಲವರ್ ಶಾಲೆಗೆ ಉತ್ತಮ ಹೆಸರಿದೆ. ಕ್ರೀಡೆಯ ಉತ್ಸಾಹ, ಸ್ಪೂರ್ತಿ ಸದಾ ವಿದ್ಯಾರ್ಥಿಗಳಲ್ಲಿರಲಿ. ಸೋತವರು ಮತ್ತೆ ಗೆದ್ದು ಬರಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರ ಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವ ರೀತಿ ಪ್ರೋತ್ಸಾಹ ನೀಡಬೇಕು ಎನ್ನುವುದನ್ನು ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕರಿಂದ ಕಲಿಯಬೇಕಿದೆ. ಇಂತಹ ಪ್ರೋತ್ಸಾಹ ಇದ್ದಾಗ ಮಕ್ಕಳಲ್ಲಿ ಇನ್ನಷ್ಟು ಸ್ಫೂರ್ತಿ ಬರುತ್ತದೆ. ನಮ್ಮ ಊರಿನಲ್ಲಿಯೇ ನಡೆದ ಜಿಲ್ಲಾ ಮಟ್ಟದ ಪಂದ್ಯಾಟವು ಅರ್ಥಪೂರ್ಣವಾಗಿ ಸಂಯೋಜನೆಗೊಂಡಿರುವುದಕ್ಕೆ ಶ್ಲಾಘಿಸಿದರು.
ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಹಿರಿಯ ವಿದ್ಯಾರ್ಥಿ ಪ್ರದೀಪ್ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಸನ್ಮಾನ:
ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಆಯೋಜನೆಗೆ ಸಹಕರಿಸಿದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭವನೇಶ್ ಹಾಗೂ ಪಂದ್ಯಾಟವನ್ನು ಯಶಸ್ವಿಯಾಗಿ ನೆರವೇರುವಲ್ಲಿ ಅತ್ಯುತ್ತಮವಾಗಿ ಸಂಘಟಿಸಿ ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕ ಬಾಲಕೃಷ್ಣ ರೈಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಶಾಲಾ ಸಂಚಾಲಕಿ ಪ್ರಶಾಂತಿ ಬಿ.ಎಸ್., ಮುಖ್ಯಗುರು ವೆನಿಶಾ ಬಿ.ಎಸ್., ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಚಂದ್ರಶೇಖರ್ ರೈ, ಸುರಕ್ಷಾ ಸಮಿತಿ ಅಧ್ಯಕ್ಷ ಸತೀಶ್ ಆರ್, ಪ್ರವೀಣ್ ಮಡ್ಯಂಗಳ, ಮಂಜುನಾಥ ಮಾನಸ ಕ್ರಿಯೇಷನ್ಸ್, ಹಬೀಬ್ ಮಾಣಿ, ನರೇಶ್ ಲೋಬೋ, ಸಂದೇಶ್ ರೈ, ಶಿಲ್ಪಾ ಮರಿಯ ಡಿಸೋಜ ಮತ್ತು ಸುಚೇತ್ ದುರ್ಗಾನಗರ ಸೇರಿದಂತೆ ಹಲವು ಮಂದಿ ಪಂದ್ಯಾಟದ ಯಶಸ್ಸಿನಲ್ಲಿ ಸಹಕರಿಸಿದ್ದು ಅವರುನ್ನು ಸ್ಮರಿಸಿದ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಸಹಕಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ದಂತ ವೈದ್ಯ ಡಾ. ಶ್ರೀಪ್ರಕಾಶ್, ಗುತ್ತಿಗೆದಾರ ವಸಂತ ಪೂಜಾರಿ ಶಾಂತಿಗೋಡು, ನಗರ ಠಾಣಾ ಸ್ಕರಿಯ, ಅಮೆಚೂರು ಕಬಡ್ಡಿ ಎಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಡ, ವಾಲ್‌ಬಾಲ್ ಎಸೋಸಿಯೇಶನ್‌ನ ಪಿ.ವಿ ಕೃಷ್ಣನ್, ಸ್ಫೋರ್ಟ್ಸ್ ವಲ್ಡ್‌ನ ರಝಾಕ್ ಬಪ್ಪಳಿಗೆ, ದರ್ಬೆ ಕೋಸ್ಟಲ್ ಹೋಂನ ಮ್ಹಾಲಕ ಸಂದೇಶ್, ಹಿರಿಯ ವಿದ್ಯಾರ್ಥಿ ಮಿಲನ್ ಗೌಡ, ದೈಹಿಕ ಶಿಕ್ಷಣ ಶಿಕ್ಷಕರಾದ ಸುಧೀರ್ ರೈ, ನರೇಶ್ ಲೋಬೋ, ರಕ್ಷಕ-ಶಿಕ್ಷಕ ಸಂಘದ ನಿಕಟಪೂರ್ವ ಉಪಾಧ್ಯಕ್ಷ ರಘುನಾಥ ರೈ, ನಗರ ಕ್ಲಸ್ಟರ್‌ನ ಸಿಆರ್‌ಪಿ ಶಶಿಕಲಾ, ಗ್ರೇಡ್-೨ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷ ಸುಧಾಕರ ರೈ, ಕರ್ನಾಟಕ ಪ್ರಾಥಮಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯಧ್ಯಕ್ಷ ಮಾಮಚ್ಚನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪುತ್ತೂರು ಇದರ ಅಧ್ಯಕ್ಷ ನವೀನ್ ರೈ, ಕಡಬ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಸವಣೂರು, ಪುತ್ತೂರು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ, ಶಾಲಾ ಸಂಚಾಲಕಿ ಪ್ರಶಾಂತಿ ಬಿ.ಎಸ್., ಮುಖ್ಯಗುರು ವೆನಿಶಾ ಬಿ.ಎಸ್., ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಸುರಕ್ಷಾ ಸಮಿತಿ ಅಧ್ಯಕ್ಷ ಸತೀಶ್ ಆರ್., ಹಾಗೂ ಶಾಲಾ ಶಿಕ್ಷಕ ವೃಂದದವರು ವೇದಿಕೆಯಲ್ಲಿ ಉಪಸ್ಥಿರಿದ್ದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಸ್ವಾಗತಿಸಿ, ವಂದಿಸಿದರು. ಶಿಕ್ಷಕರು, ಸುರಕ್ಷಾ ಸಮಿತಿ ಹಾಗೂ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಸಹಕರಿಸಿದರು.