- ಉಮಾಪ್ರಸಾದ್ ರೈ ನಡುಬೈಲು
- ಪುತ್ತೂರು: ಕಡಬ ಮತ್ತು ಪುತ್ತೂರು ತಾಲೂಕನ್ನು ಅತೀ ಹತ್ತಿರದಿಂದ ಸಂಪರ್ಕಿಸುವ ಏಕೈಕ ಮಾರ್ಗ ಅಲಂಕಾರು- ಶಾಂತಿಮೊಗರು-ಸವಣೂರು ಆಗಿದ್ದು, ಶಾಂತಿಮೊಗರು ಸೇತುವೆ ನಿರ್ಮಾಣಗೊಂಡ ಬಳಿಕ ಕಡಬ ಭಾಗದವರಿಗೆ ಪುತ್ತೂರನ್ನು ತಲುಪಲು ಅತೀ ಹತ್ತಿರದ ದಾರಿಯಾಗಿದೆ, ಈ ದಾರಿಯಲ್ಲಿ ಸಾವಿರಾರು ಖಾಸಗಿ ವಾಹನಗಳು ಸಂಚರಿಸುತ್ತವೆ. ಕೆಎಸ್‌ಆರ್‌ಟಿಸಿ ಬಸ್ ಸಂಚಾರದಿಂದ ಪ್ರಯಾಣಿಕರಿಗೆ ಕಡಬದಿಂದ ಪುತ್ತೂರಿಗೆ ತಲುಪಲು, ಕಡಿಮೆ ಸಮಯ ಮತ್ತು ಟಿಕೆಟ್ ದರವೂ ಕಡಿಮೆ ಆಗುವುದರಿಂದ, ಬಹಳಷ್ಟು ಅನುಕೂಲವಾಗಿದೆ. ಈ ಹಿಂದೆ ಕಡಬದವರು ಅಲಂಕಾರು, ಉಪ್ಪಿನಂಗಡಿ ಮಾರ್ಗವಾಗಿ ಪುತ್ತೂರಿಗೆ ತಲುಪಲು ನೇರ ಬಸ್ ಸಂಪರ್ಕ ಹೆಚ್ಚು ಇರಲಿಲ್ಲ, ಜೊತೆಗೆ ಪ್ರಯಾಣ ದರ ಜಾಸ್ತಿ, ಸಮಯ ಜಾಸ್ತಿ ಬೇಕಾಗುತ್ತಿತ್ತು. ಕಡಬದವರು ಶಾಂತಿಮೊಗರು ಮಾರ್ಗವಾಗಿ ಪುತ್ತೂರು ತಲುಪಲು ಅತ್ಯಂತ ಯೋಗ್ಯವಾದ ರಸ್ತೆಯನ್ನು ಹೊಂದಿರುವ ಕಾರಣ, ಪ್ರಯಾಣಕರಿಗೆ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ಆರಾಮದಾಯಕವಾಗಿದೆ, ಜೊತೆಗೆ ಸಾರಿಗೆ ಸಂಸ್ಥೆಯ ಬಸ್‌ಗೆ ಹೆಚ್ಚು ಪ್ರಯಾಣಿಕರು ಬರುವುದರಿಂದ ಸಂಸ್ಥೆಗೂ ಲಾಭವಾಗಿದೆ. ಕಡಬದಿಂದ 10 ಮತ್ತು ಪುತ್ತೂರಿನಿಂದ 9 ಟ್ರಿಪ್‌ಗಳ ಬಸ್ ಸಂಚಾರ ಶಾಂತಿಮೊಗರು ಮಾರ್ಗವಾಗಿ ಪ್ರತಿನಿತ್ಯ ಇದೆ, ಈ ರಸ್ತೆಯಲ್ಲಿ ಇನ್ನೂ ಹೆಚ್ಚು ಬಸ್ ಸಂಚಾರವನ್ನು ಒದಗಿಸಿಕೊಡಬೇಕೆನ್ನುವುದು ಪ್ರಯಾಣಿಕರ ಒತ್ತಾಯವಾಗಿದೆ. ಕಡಬದಿಂದ ಪುತ್ತೂರಿಗೆ ಶಿಕ್ಷಣ ಕಲಿಕೆಗೆ ತೆರಳುವ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ವ್ಯವಹಾರ, ಕರ‍್ಯಕ್ರಮ ನಿಮಿತ್ತ ತೆರಳುವ ಸಾವಿರಾರು ಮಂದಿಗೆ ಕೆಎಸ್‌ಅರ್‌ಟಿಸಿ ಬಸ್ ಸಂಚಾರ ವರದಾನವಾಗಿದೆ.
ಬಸ್ ಬೇಡಿಕೆಯನ್ನು ಪೂರೈಸುತ್ತೇವೆ
ಪುತ್ತೂರು ಶಾಂತಿಮೊಗರು ಕಡಬ ನಡುವೆ ಸಂಚರಿಸುವ ಬಸ್‌ಗೆ ಪ್ರಯಾಣಿಕರಿಂದ ಉತ್ತಮ ಬೇಡಿಕೆ ಇದೆ. ಇನ್ನೂ ಹೆಚ್ಚುವರಿಯಾಗಿ ಬಸ್‌ಗಳ ಬೇಡಿಕೆ ಇದ್ದು, ಹೊಸದಾಗಿ ಬಸ್‌ಗಳು ಬಂದ ಬಳಿಕ ಶಾಸಕರ ಜೊತೆ ಚರ್ಚಿಸಿ, ಪುತ್ತೂರು ಶಾಂತಿಮೊಗರು ಕಡಬ ಮಾರ್ಗವಾಗಿ ಹೆಚ್ಚುವರಿ ಬಸ್ ಹೊರಡಿಸುತ್ತೇವೆ
ಬಸ್ ಸಂಚಾರದ ಈಗಿನ ವೇಳಾ ಪಟ್ಟಿ
ಕಡಬದಿಂದ ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ ಬೆಳಿಗ್ಗೆ 7.30, 8.45, 10.15, 10.45, 11.45, ಮಧ್ಯಾಹ್ನ 1.30, 2.00, 2.30, 3.30, ಸಂಜೆ 5.10, ಹಾಗೂ ಪುತ್ತೂರಿನಿಂದ ಶಾಂತಿಮೊಗರು ಮಾರ್ಗವಾಗಿ ಕಡಬಕ್ಕೆ ಬೆಳಿಗ್ಗೆ 9.00, 9.35, 10.30, 11.45, ಮಧ್ಯಾಹ್ನ 12.15, 1.15, 2.45, ಸಂಜೆ 4.15, 5.15 ಕ್ಕೆ ಬಸ್ ಸಂಚಾರ ಇದೆ. ಪ್ರಯಾಣಿಕರ ಬೇಡಿಕೆಯಂತೆ ಕಡಬದಿಂದ ಬೆಳಿಗ್ಗೆ 8.15, ಸಂಜೆ 4.15ಕ್ಕೆ ಹಾಗೂ ಪುತ್ತೂರಿನಿಂದ ಬೆಳಿಗ್ಗೆ 8.00 ಹಾಗೂ ಸಂಜೆ 6.00 ಮತ್ತು ರಾತ್ರಿ 7ಕ್ಕೆ ಬಸ್ ಸಂಚಾರ ವ್ಯವಸ್ಥೆ ಆಗಬೇಕಾಗಿದೆ.