ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಅ. 19ರಂದು ಶ್ರೀ ಲಲಿತಾ ಪಂಚಮಿ ಮಹೋತ್ಸವ – ಶ್ರೀ ಚಂಡಿಕಾ ಯಾಗವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಬೆಳಿಗ್ಗೆ ಗಂಟೆ 9.00ರಿಂದ ಗಣಪತಿ ಹವನ, ಶ್ರೀ ಚಂಡಿಕಾಯಾಗ ಆರಂಭಗೊಳ್ಳಲಿದೆ. ಬಳಿಕ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಧರ್ಮಸಭೆ ನಡೆಯಲಿದ್ದು, ಸಾಧ್ವಿ ಶ್ರೀ ಮಾತಾನಂದಮಯೀರವರು ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಯಕ್ಷಗಾನ ನಾಟ್ಯಾಚಾರ್ಯ ಶ್ರೀ ಸಬ್ಬಣಕೋಡಿ ರಾಮ ಭಟ್, ಖ್ಯಾತ ರಂಗನಟ, ನಿರ್ದೇಶಕ ರಮೇಶ್ ಮಾಸ್ತರ್ (ರಮಾ)ಬಿ.ಸಿ.ರೋಡ್, ಮೃದಂಗ ಮತ್ತು ತಬಲಾ ವಾದಕಿ ಶ್ರೀಮತಿ ಅನಿತಾ ಪ್ರಭು ಬಿ.ಸಿ.ರೋಡ್, ರಂಗ ನಟ ಹಾಗೂ ಉದ್ಯಾವರ ಮಾಡದ ಅಣ್ಣದೈವ ಪಾತ್ರಿ ಶ್ರೀ ಪುರುಷೋತ್ತಮ ಯಾನೆ ರಾಜ ಬೆಳ್ಚಪ್ಪಾಡ, ಛಾಯಾಗ್ರಾಹಕ ಶ್ರೀ ಟಿ. ಹರೀಶ್ ರಾವ್ ಬಂಟ್ವಾಳ ರವರಿಗೆ ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಧ್ಯಾಹ್ನ ಶ್ರೀಚಂಡಿಕಾಯಾಗದ ಪೂರ್ಣಾಹುತಿ, ಮಹಾಪೂಜೆ ಬಳಿಕ ಮಹಾಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ೨.೩೦ರಿಂದ ಸರಯೂ ಬಾಲ ಯಕ್ಷ ವೃಂದ ಕೋಡಿಕಲ್ ಇವರಿಂದ ವರ್ಕಾಡಿ ಶ್ರೀ ರವಿ ಅಲೆವೂರಯ ವಿರಚಿತ ಶ್ರೀ ಮಾತೇ ಭದ್ರಕಾಳಿ ಯಕ್ಷಗಾನ ಬಯಲಾಟ ನಡೆಯಲಿದೆ. ಸಾಯಂಕಾಲ ಸಾಮೂಹಿಕ ಶ್ರೀ ಸ್ವಯಂವರ ಪಾರ್ವತೀ ಪೂಜೆ, ರಂಗಪೂಜೆ, ಅಷ್ಟಾವಧಾನ ಸೇವೆ, ಶ್ರೀ ಭದ್ರಕಾಳಿಗೆ ವಿಶೇಷ ಪೂಜೆ ನಡೆಯಲಿದೆ ಎಂದು ಸಂಸ್ಥಾನದ ಪ್ರಕಟಣೆ ತಿಳಿಸಿದೆ.