ಪಾಣಾಜೆ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆರ್ಲಪದವು ವತಿಯಿಂದ 34ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ. 24 ರಂದು ಶ್ರೀ ಕಿನ್ನಿಮಾಣಿ, ಪೂಮಾಣಿ ದೈವಸ್ಥಾನದ ವಠಾರದಲ್ಲಿ ನಡೆಯಿತು. ಬೆಳಿಗ್ಗೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆ ನಡೆದು ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಆದಾಯ ತೆರಿಗೆ ಇಲಾಖೆಯ ನಿವೃತ್ತ ಮುಖ್ಯ ಆಯುಕ್ತ ಬಿ. ರಾಮ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಪಾಣಾಜೆ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಈಶ್ವರ ಭಟ್ ಕಡಂದೇಲು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ‘ಮನುಷ್ಯ ಮಾಡಿದ ಧರ್ಮ ಉಳಿಯುವುದಿಲ್ಲ. ಸನಾತನ ಧರ್ಮಕ್ಕೆ ಅಳಿವು ಇಲ್ಲ’ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ‘ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರದ ಬಗೆಗಿನ ಅರಿವು ಮೂಡಿಸಿ, ಅದನ್ನು ಬೆಳೆಸುವ ಕಾರ್ಯ ಹಿರಿಯರಾದ ನಾವೆಲ್ಲಾ ಮಾಡಿದರೆ ಮಾತ್ರ ಅಧರ್ಮದ ಮೇಲೆ ಧರ್ಮವನ್ನು ಎತ್ತಿಹಿಡಿದ ವಿಜಯದಶಮಿಯ ಆಚರಣೆಯ ಹಿಂದಿನ ಮಹತ್ವದ ಅರಿವಾಗುತ್ತದೆ.
ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದ ಡಾ. ರವೀಶ್ ಪಡುಮಲೆಯವರು ‘ಕಣ್ಣಿಗೆ ಕಾಣದ ಶಕ್ತಿಯನ್ನು ನಂಬಿ ನಮ್ಮ ಜೀವನದಲ್ಲಿ ಸಫಲತೆ ಕಂಡುಕೊಂಡವರು. ಹಾಗಾಗಿ ಈ ಮಣ್ಣಿನಲ್ಲಿರುವ ಪ್ರತಿಯೊಬ್ಬನೂ ದೈವ ದೇವರುಗಳ ಆರಾಧನೆ ಮಾಡಬೇಕಾದದ್ದು ಕರ್ತವ್ಯವಾಗಿದೆ. ನವರಾತ್ರಿಯ ಪ್ರತಿಯೊಂದು ದಿನದ ಆರಾಧನೆ ಹಿಂದೆ ನಮ್ಮ ಜೀವನಕ್ಕೆ ಉಪದೇಶವಿದೆ. ಒಂದೇ ತಾಯ ಮಕ್ಕಳಂತೆ ಮನೋಭಾವದ ಬದುಕು ನಮ್ಮದಾಗಬೇಕು. ಈರ್ವೆರು ಉಳ್ಳಾಕುಲು, ಸುಬ್ರಾಯ ದೇವರು ಜೊತೆಸೇರಿ ನೆಲೆ ನಿಂತಿರುವ ಆರ್ಲಪದವು ಮಣ್ಣಿನ ಮೇಲೆ ಅಭಿಮಾನ ಬೇಕು. ಈ ಮಣ್ಣಿನ ಸಂಸ್ಕೃತಿಯನ್ನು ಅರಳಿಸುವ ಕಾರ್ಯ ನಿಮ್ಮಿಂದ ನಡೆಯುತ್ತಿದೆ. ಅದಕ್ಕೆ ನಮಗೆ ಹೆಮ್ಮೆ ಬೇಕು. ಸೌಹಾರ್ದತೆಯ ಬದುಕಿಗೆ ಆರ್ಲಪದವು ಸಾಕ್ಷಿಯಾಗಿದೆ. ನೀನೂ ಬದುಕು, ನಾನೂ ಬದುಕುತ್ತೇನೆ ಎಂಬ ಭಾವವೇ ಸಂಸ್ಕಾರ. ಕರ್ಮ, ಧರ್ಮ, ಆಚರಣೆಗಳನ್ನು ಪೂರ್ವ ಸಂಪ್ರದಾಯ, ಕಟ್ಟಳೆಗಳ ಪ್ರಕಾರವೇ ನಡೆಸಬೇಕು. ಅಲ್ಲಿ ಜಾತಿ, ಪ್ರತಿಷ್ಠೆ, ಪದವಿ ತರಬಾರದು’ ಎಂದರು. ದಿ. ಪದ್ಮನಾಭ ಭರಣ್ಯರವರ ಸ್ಮರಣಾರ್ಥ ದತ್ತಿನಿಧಿಯನ್ನು ಕೇಸರಿ ಭಜನಾ ತಂಡ ಮಿತ್ತಡ್ಕ ಇವರಿಗೆ ನೀಡಲಾಯಿತು.
ಮುಖ್ಯ ಅತಿಥಿಯಾಗಿದ್ದ ಅಶ್ವಿನಿಕೃಷ್ಣ ಮುಳಿಯ ಮಾತನಾಡಿ ‘ಉತ್ತಮ ಸಂಘಟನೆಯಿಂದ ಒಳ್ಳೆಯ ಸಂಘವಿರುತ್ತದೆ. ಒಳ್ಳೆಯ ಸಂಘದಿಂದ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯ ಉನ್ನತಿಯಾಗುತ್ತದೆ. ಇದಕ್ಕೆ ಆರ್ಲಪದವಿನಲ್ಲಿ ನಡೆಯುತ್ತಿರುವ ಶಾರದೋತ್ಸವ ಉತ್ತಮ ಉದಾಹರಣೆಯಾಗಿದೆ. ಹಲವು ಸಮಾಜಮುಖಿ ಯೋಚನೆಗಳೊಂದಿಗೆ ಈ ಉತ್ಸವ ನಡೆಯುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ’ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ತಾರನಾಥ ರೈ ಪಡ್ಡಂಬೈಲುಗುತ್ತು ‘ನಮ್ಮ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕಾಗಿರವುದು ಅತೀ ಅವಶ್ಯಕವಾಗಿದೆ’ ಎಂದರು. ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಸುಳ್ಯದ ಅಧ್ಯಕ್ಷ ಚಂದ್ರಶೇಖರ ಪಾಟಾಳಿ ಕೆ.ಎಸ್. ರವರು ಮಾತನಾಡಿ ‘ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಬೆಳೆಯುವ ಶಾಲೆಗಳಲ್ಲಿ ವಿದ್ಯಾಭ್ಯಾಸ ಕೊಡಿಸಬೇಕು’ ಎಂದರು.
ಮಂಗಳೂರು ಮತ್ತು ಮಸ್ಕತ್ ನಲ್ಲಿ ಉದ್ಯಮ ಹೊಂದಿರುವ ಯತೀಶ್ ರೈ ಚೆಲ್ಯಡ್ಕ ಮಾತನಾಡಿ ‘ಸನಾತನ ಧರ್ಮ ನಾಶಗೊಳಿಸುವ ಪ್ರಯತ್ನದ ಹಂತಕ್ಕೆ ಬಂದು ತಲುಪಿದ ಈ ವೇಳೆ ಹಿಂದೂ ಸಮಾಜ ತನ್ನ ದಿಟ್ಟ ಹೆಜ್ಜೆಯನ್ನು ಇಡಬೇಕಾಗಿದೆ. ಸಮಾಜದ ಸ್ವರಕ್ಷಣೆಗಾಗಿ ಹಲವು ರೀತಿಯ ಕಾರ್ಯ ಯೋಜನೆಗಳನ್ನು ನಾವು ಹಾಕಿಕೊಳ್ಳಬೇಕಾದ ಅನಿವಾರ್ಯತೆ ಇದೆ’ ಎಂದರು. ಪಾಣಾಜೆ ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀ ದೇವಸ್ಯ ಶುಭ ಹಾರೈಸಿದರು.
ಸಮಾರಂಭದಲ್ಲಿ ಬೊಳ್ಳಿಂಬಳ ನಾರ್ಣಪ್ಪಯ್ಯ ಮತ್ತು ದೇವಸ್ಯ ಚುಬ್ಬಜ್ಜರವರ ಸವಿನೆನಪಿಗಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ. ಅಖಿಲೇಶ್ ಪಿ.ಎಂ. ರವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ರವೀಂದ್ರ ಭಂಡಾರಿಯವರು ವಂದಿಸಿದರು. ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ತನ್ವಿ ಶೆಟ್ಟಿ ಸೂರಂಬೈಲು, ಅನ್ವಿತಾ ಎನ್. ಧನ್ವಿ ಬಿ. ಶೆಟ್ಟಿ ಕೋಟೆ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಾಪೂಜೆ ನಡೆಯಿತು. ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ರಘುನಾಥ ಪಾಟಾಳಿ, ಪ್ರಧಾನ ಕಾರ್ಯದರ್ಶಿ ಸುಭಾಸ್ ರೈ ಚಂಬರಕಟ್ಟ ಉಪಸ್ಥಿತರಿದ್ದರು.