ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ – ಫೆ.17ರವರೆಗೆ ಅವಕಾಶ ನೀಡಿದ ಸಾರಿಗೆ ಇಲಾಖೆ

0


ಈ ಮೊದಲು 2023ರ ನವೆಂಬರ್ 17 ಕೊನೆಯ ದಿನವಾಗಿತ್ತು

ಪುತ್ತೂರು: ಹಳೆಯ ವಾಹನಗಳಿಗೆ ‘ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್’ (ಹೆಚ್‌ಎಸ್‌ಆರ್‌ಪಿ) ಅಳವಡಿಕೆಗೆ -ಫೆ.17ರವರೆಗೆ ಸಾರಿಗೆ ಇಲಾಖೆ ಅವಕಾಶ ನೀಡಿದೆ. ಈ ಮೊದಲು 2023ರ ನ.17 ಕೊನೆಯ ದಿನವಾಗಿತ್ತು. ಇದೀಗ, ಈ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದ್ದು, ವಾಹನ ಮಾಲೀಕರು ಯಾವುದೇ ತರಾತುರಿಯಿಲ್ಲದೇ ಎಚ್‌ಎಸ್‌ಆರ್‌ಪಿ ಫಲಕವನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬಹುದಾಗಿದೆ.
2019ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾಗಿರುವ ದ್ವಿಚಕ್ರ, ತ್ರಿಚಕ್ರ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲಾ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ.

ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿಕೆ ನೀಡಿ, ಹೆಚ್‌ಎಸ್‌ಆರ್‌ಪಿ ಅಳವಡಿಕೆ ಕಾರ್ಯ ರಾಜ್ಯದಲ್ಲಿ ನಡೆಯುತ್ತಿದೆ. ಕೆಲವರು ಕೋರ್ಟ್‌ಗೆ ತೆರಳಿದ ಕಾರಣ ವಿಳಂಬವಾಗಿದೆ. ಈ ಪ್ರಕರಣ ಇನ್ನೂ ಕೋರ್ಟ್‌ನಲ್ಲಿದೆ. ವಾಹನ ಮಾಲೀಕರ ಹಿತದೃಷ್ಟಿಯಿಂದ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಿಸಲಾಗಿದ್ದು, ದಂಡ ಶುಲ್ಕವಿಲ್ಲದೆ ವಾಹನ ಮಾಲೀಕರು ಫಲಕ ಅಳವಡಿಸಿಕೊಳ್ಳಬಹುದಾಗಿದೆ ಎಂದರು.

ಏನಿದು ಹೆಚ್‌ಎಸ್‌ಆರ್‌ಪಿ ಫಲಕ?: ಹೆಚ್‌ಎಸ್‌ಆರ್‌ಪಿ ಅಲ್ಯುಮಿನಿಯಂ ಲೋಹದಿಂದ ತಯಾರಿಸಲಾಗುತ್ತದೆ. ಈಗಾಗಲೇ ಹೊಸ ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಲಾಗುತ್ತಿದೆ. ಈ ಪ್ಲೇಟ್‌ಗಳಲ್ಲಿ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತದೆ. ಈ ಪ್ಲೇಟ್‌ನ ಮೇಲ್ಭಾಗದ ಎಡ ಬದಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆಯನ್ನು ಕಾಣಬಹುದು. 20 ಮಿಲಿ ಮೀಟರ್ ಉದ್ದ ಅಗಲದ ಈ ಮುದ್ರೆಯನ್ನು ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗುತ್ತದೆ.

LEAVE A REPLY

Please enter your comment!
Please enter your name here