ಪುತ್ತೂರು: ಮನೆಗೆ ಅಕ್ರಮ ಪ್ರವೇಶ ಮಾಡಿ ಮಗನಿಗೆ ಹಲ್ಲೆಯತ್ನ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯೊಡ್ಡಿರುವುದಾಗಿ ನಡೆದ ನಾಲ್ಕು ತಿಂಗಳ ಹಿಂದಿನ ಘಟನೆಗೆ ಸಂಬಂಧಿಸಿ 8 ದಿನಗಳ ಹಿಂದೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಜಿತ್ ರೈ ಹೊಸಮನೆ ಅವರಿಗೆ ಜಿಲ್ಲಾ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಅಜಿತ್ ರೈ ಹೊಸಮನೆ ಎಂಬವರ ವಿರುದ್ಧ ಮನೀಷ್ ಕುಲಾಲ್ ಅವರ ತಂದೆ ಆನಂದ ಎಸ್.ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದವರು. ಜುಲೈ 10ರಂದು ಈ ಘಟನೆ ನಡೆದಿದ್ದು ನ.10ರಂದು ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದರು. ಜುಲೈ 10ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಆರೋಪಿತ ಅಜಿತ್ ರೈ ಹೊಸಮನೆ ಅವರು ಮನೆಗೆ ಅಕ್ರಮವಾಗಿ ಪ್ರವೇಶಿಸಿ ನನ್ನ ಮಗ ಮನೀಶ್ ಕುಲಾಲ್ ಮಲೆ ಹಲ್ಲೆ ಮಾಡಲು ಪ್ರಯತ್ನಿಸಿ ಅವಾಚ್ಯ ಶಬ್ದಗಳಿಂದ ಬೈದು ಮಗನಿಗೆ ಜೀವ ಬೆದರಿಕೆ ಒಡ್ಡಿರುವುದು ನನಗೆ ತಡವಾಗಿ ತಿಳಿದಿರುತ್ತದೆ. ಈ ವಿಷಯವನ್ನು ದೊಡ್ಡದು ಮಾಡಬಾರದೆಂದು ನನ್ನ ಮಕ್ಕಳು ನನಗೆ ತಿಳಿಸಿರಲಿಲ್ಲ. ಆದರೆ ನ.10ರಂದು ಮಗ ಮನೀಶ್ ಕುಲಾಲ್‌ನ ಮೇಲೆ ಹಲ್ಲೆ ಮಾಡಿ ಹತ್ಯೆಯ ಸಂಚು ಮಾಡಿರುವುದು ಆತಂಕ ಸೃಷ್ಟಿ ಮಾಡಿದೆ. ಈ ಕೃತ್ಯದ ಹಿಂದೆ ಆರೋಪಿತರ ಕೈವಾಡವಿರುವುದರಿಂದ ಆರೋಪಿತ ಅಜಿತ್ ರೈ ಹೊಸಮನೆ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ಮನೀಶ್ ಕುಲಾಲ್ ಅವರ ತಂದೆ ಪಡೀಲ್ ನಿವಾಸಿ ಆನಂದ್ ಎಸ್.ಅವರು ಪುತ್ತೂರು ನಗರ ಪೊಲೀಸರಿಗೆ ನ.10ರಂದು ದೂರು ನೀಡಿದ್ದರು. .ಈ ದೂರಿನ ಮೇರೆಗೆ ಪೊಲೀಸರು ಅಜಿತ್ ರೈ ವಿರುದ್ಧ ಸೆಕ್ಷನ್ 447,504, 506ರಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಆರೋಪಿ ಅಜಿತ್ ರೈ ಹೊಸಮನೆ ಅವರಿಗೆ ಜಿಲ್ಲಾ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ಖ್ಯಾತ ವಕೀಲರಾದ ಮಹೇಶ್ ಕಜೆ ವಾದಿಸಿದರು.