ಶಿಸ್ತು, ಶೋಧನೆಗಳು ವಿದ್ಯಾರ್ಥಿಯು ಉನ್ನತ ಮಟ್ಟಕ್ಕೇರುವ ಸಾಧನಗಳು : ಡಾ|ಶ್ರೀಪತಿ ಕಲ್ಲೂರಾಯ
ವಿದ್ಯಾರ್ಥಿಗಳು ಬಾಲ್ಯದಿಂದಲೇ ಶಿಸ್ತು ಸಂಶೋಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಭವಿಷ್ಯತ್ತಿನಲ್ಲಿ ವೈದ್ಯಕೀಯ, ಕ್ರೀಡೆಯಂತಹ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಸಾಮರ್ಥ್ಯವನ್ನುಗಳಿಸುತ್ತಾರೆ ಎಂದು ಸದೃಶ-ಸಂಭ್ರಮ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ನುಡಿದರು.
ಕಾರ್ಯಕ್ರಮದಲ್ಲಿ ಕ್ರೀಡಾಧ್ವಜಾರೋಹಣ ಮಾಡಿದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ದೈಹಿಕ ಶಿಕ್ಷಣ – ಶಿಕ್ಷಕ ಗೋಪಿನಾಥ್ ಅವರು ಕ್ರೀಡೆಯಲ್ಲಿ ಸೋಲು ಗೆಲುವುಗಳು ಎದುರಾದಾಗ ಒಂದೇ ಮನಸ್ಸಿನಿಂದ ಸ್ವೀಕರಿಸಿ ಕ್ರೀಡಾ ಮನೋಭಾವ ಮೆರೆಯಬೇಕು ಎಂದರು.
ರಾಷ್ಟ್ರೀಯ ಕ್ರೀಡಾಪಟು ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಅಜಿತ್ ರೈ ಶಾಲಾ ಗುರುವೃಂದ ಹಾಗೂ ದೈಹಿಕ ಶಿಕ್ಷಣ ತರಬೇತುದಾರರ ಪ್ರತಿಭೆ ಗುರುತಿಸುವುದು, ಮಾರ್ಗದರ್ಶನಗಳು ತನ್ನಂತಹ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಲಿದೆ ಎಂದರು.
ಅಭ್ಯಾಗತರಾಗಿ ಆಗಮಿಸಿದ ಕೇಂದ್ರೀಯ ಮೀಸಲು ಪಡೆಯ ನಿವೃತ್ತ ಸೈನಿಕ ಬಾಲಕೃಷ್ಣ ಎನ್ ಸೇನೆಯಲ್ಲಾಗಲಿ, ಕ್ರೀಡೆಯಲ್ಲಾಗಲಿ ನೀಡುವ ತರಬೇತಿಗಳು ವ್ಯಕ್ತಿಯ ಮಾನಸಿಕ, ದೈಹಿಕ ದೃಢತೆಯನ್ನು ಹೆಚ್ಚಿಸಿ ಕಾರ್ಯಕ್ಷೇತ್ರಗಳಲ್ಲಿ ಹೆಚ್ಚಿನ ಕ್ಷಮತೆಯನ್ನು ತೋರಿಸಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕ್ರೀಡಾಕೂಟದ ಯಶಸ್ಸು ಮತ್ತು ವಿದ್ಯಾರ್ಥಿಗಳ ಸಾಧನೆಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಪರಿಶ್ರಮ ಹಾಗೂ ನಿರಂತರ ತರಬೇತಿಗಳು ಕಾರಣ ಎಂದು ಸಭಾಧ್ಯಕ್ಷರಾದ ಶಾಲಾ ಆಡಳಿತ ಮಂಡಳಿಯ ಸದಸ್ಯ ತಿರುಮಲೇಶ್ವರ ಭಟ್ ಹೇಳಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ್ಚಂದ್ರ ಕ್ರೀಡಾಂಗಣದಲ್ಲಿ ತೆಂಗಿನಕಾಯಿ ಒಡೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಶಾಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ ಹಾಗೂ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕ ಚಂದ್ರಶೇಖರ್ ಸುಳ್ಯಪದವು ಸ್ವಾಗತಿಸಿ, ನಳಿನಿ ವಾಗ್ಲೆ ಧನ್ಯವಾದ ಸಮರ್ಪಿಸಿ, ಶಿಕ್ಷಕರಾದ ಗೀತಾ ಮತ್ತು ರಾಜೇಶ್ ನಿರೂಪಿಸಿದರು.