ಮನುಷ್ಯ ಸದಾ ಚಟುವಟಿಕೆಯಿಂದ ಇದ್ದಾಗ ಆರೋಗ್ಯ ನಿಯಂತ್ರಣದಲ್ಲಿರಲು ಸಾಧ್ಯ -ಡಾ.ಭಾಸ್ಕರ್ ಎಸ್
ಪುತ್ತೂರು:ಇಂದಿನ ಆಧುನಿಕ ಜಗತ್ತಿನಲ್ಲಿ ಮನುಷ್ಯ ತನ್ನ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡದೆ ಬೊಜ್ಜು, ಬಿಪಿ, ಮಧುಮೇಹ, ಹೃದಯದ ಕಾಯಿಲೆಯ ಜೊತೆಗೆ ಕ್ಯಾನ್ಸರ್ ಹೀಗೆ ನಾನಾ ತರಹದ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ನಾವು ಕಾಣುತ್ತಿದ್ದೇವೆ. ಮನುಷ್ಯ ಸದಾ ಚಟುವಟಿಕೆಯಿಂದ ಇದ್ದಾಗ ಮಾತ್ರ ಆರೋಗ್ಯ ಕೂಡ ನಿಯಂತ್ರಣದಲ್ಲಿರಲು ಸಾಧ್ಯ ಎಂದು ಪಿಡಿಜಿ ಡಾ.ಭಾಸ್ಕರ್ ಎಸ್ ರವರು ಹೇಳಿದರು.
ನ.29ರಂದು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ರೋಟರಿ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ಡಾ.ನಝೀರ್ ಡಯಾಬಿಟಿಸ್ ಸೆಂಟರ್ ಪುತ್ತೂರು, ಇ.ಡಿ.ಆರ್.ಟಿ ಬೆಂಗಳೂರು, ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆ ಪುತ್ತೂರು, ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜು ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಸ್ವರ್ಣ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪುತ್ತೂರು, ಹಾಸ್ಪಿಟಲ್ ಅಸೋಸಿಯೇಶನ್ ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ಜರಗಿದ ವಿಶ್ವ ಮಧುಮೇಹ ಮಾಸಾಚರಣೆ ಪ್ರಯುಕ್ತ ವಾಕಥಾನ್- ಜಾಗೃತಿ ಜಾಥಾ ಮತ್ತು ಪ್ರಾಜೆಕ್ಟ್ ಸ್ವೀಟ್ ಚೈಲ್ಡ್- ಮಕ್ಕಳ ಸಮ್ಮಿಲನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಮನುಷ್ಯ ಕುಳಿತ್ತಲ್ಲಿಂದಲೇ ಕೆಲಸ ಮಾಡುತ್ತಾ ಒಂಥರಹ ರಿಮೋಟ್ ಕಂಟ್ರೋಲ್ ತರಹ ಆಗಿ ಬಿಟ್ಟಿದ್ದಾನೆ. ಮನುಷ್ಯ ಹಣ ಮಾಡುವಲ್ಲಿಯೇ ಗಮನ ಕೇಂದ್ರೀಕರಿಸಿದ್ದಾನೆಯೇ ಹೊರತು ತಾನು ಸೇವಿಸುವ ಆಹಾರ ಕ್ರಮ, ವ್ಯಾಯಾಮ, ಸಕಾರಾತ್ಮಕ ಚಿಂತನೆ ಬಗ್ಗೆ ಆಲೋಚಿಸದೆ ಆರೋಗ್ಯವನ್ನು ಕಡೆಗಣಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಡಾ.ನಝೀರ್ ಅಹಮದ್ ರವರು ಪುತ್ತೂರಿಗೆ ಆಗಮಿಸಿದ ಬಳಿಕ ಮಧುಮೇಹದ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿರವರು ಉದ್ಘಾಟಕರಾದ ಪಿಡಿಜಿ ಡಾ.ಭಾಸ್ಕರ್ ಎಸ್.ರವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ.ನಝೀರ್ ಡಯಾಬಿಟಿಸ್ ಸೆಂಟರ್ ನ ಡಾ.ನಝೀರ್ ಅಹಮದ್ ರವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಜಾಥಾದಲ್ಲಿ ಪ್ರಗತಿ ಆಸ್ಪತ್ರೆಯ ಡಾ.ಶ್ರೀಪತಿ ರಾವ್, ಚೇತನಾ ಆಸ್ಪತ್ರೆಯ ಡಾ.ಶ್ರೀಕಾಂತ್ ರಾವ್, ಚರ್ಮರೋಗ ತಜ್ಞ ಡಾ.ನರಸಿಂಹ ಶರ್ಮ ಕಾನಾವು, ಪುತ್ತೂರು ಸಿಟಿ ಆಸ್ಪತ್ರೆಯ ಡಾ.ಗೋಪಿನಾಥ್ ಪೈ, ಪುತ್ತೂರು ವರ್ತಕ ಸಂಘದ ಅಧ್ಯಕ್ಷ ವಾಮನ್ ಪೈ, ರೋಟರಿ ಪುತ್ತೂರು ಕಾರ್ಯದರ್ಶಿ ಸುಜಿತ್ ರೈ, ಸಮುದಾಯ ಸೇವಾ ನಿರ್ದೇಶಕ ಸೋಮಶೇಖರ್ ರೈ ಸಹಿತ ಸದಸ್ಯರು, ಪ್ರಗತಿ ಪ್ಯಾರಾಮೆಡಿಕಲ್ ನ ವಿದ್ಯಾರ್ಥಿಗಳು, ಫಾ.ಪತ್ರಾವೋ ಆಸ್ಪತ್ರೆ ಸಿಬ್ಬಂದಿ, ಡಾ.ನಝೀರ್ ಡಯಾಬಿಟಿಸ್ ಸೆಂಟರ್ ಸಿಬ್ಬಂದಿ ಸಹಿತ ಹಲವರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ವಾಕಥಾನ್ ಜಾಥಾ…
ವಾಕಥಾನ್ ಜಾಥಾ ಉದ್ಘಾಟನೆ ಬಳಿಕ ಜಾಥಾವು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಿಂದ ಸಿಟಿ ಆಸ್ಪತ್ರೆ-ಅರುಣಾ ಥಿಯೇಟರ್ ಮೂಲಕ ಪುತ್ತೂರು ಬಸ್ಸು ನಿಲ್ದಾಣ, ಎಂ.ಟಿ ರಸ್ತೆ-ಎಪಿಎಂಸಿ ರಸ್ತೆ-ಶ್ರೀಧರ್ ಭಟ್ ಅಂಗಡಿ ಎದುರಿನಿಂದ ಸಾಗಿ ಬೊಳ್ವಾರು ಪ್ರಗತಿ ಆಸ್ಪತ್ರೆಗೆ ಆಗಮಿಸಿತು. ಈ ಸಂದರ್ಭದಲ್ಲಿ ಜಾಥಾದಲ್ಲಿ ಭಾಗವಹಿಸಿದವರು ಮಧುಮೇಹ ಜಾಗೃತಿಯ ಟೀ-ಶರ್ಟ್ ಅನ್ನು ಧರಿಸಿ ಜಾಥಾದ ಕಳೆಯನ್ನು ಹೆಚ್ಚಿಸಿದ್ದರು.