ಉಪ್ಪಿನಂಗಡಿ: ವಾಹನ ನಿಲುಗಡೆಗೆ ಹಾಗೂ ಪಾದಾಚಾರಿಗಳ ಸಂಚಾರಕ್ಕೆ ಅಡಚಣೆಯಾಗುವ ರೀತಿಯಲ್ಲಿ ಅನಧಿಕೃತ ಅಂಗಡಿಗಳು ಕಾರ್ಯಾಚರಿಸುತ್ತಿದ್ದ ಬಗ್ಗೆ ವ್ಯಕ್ತಗೊಳ್ಳುತ್ತಿದ್ದ ಸಾರ್ವಜನಿಕರ ಅಸಮಾಧಾನಕ್ಕೆ ಕೊನೆಗೂ ಉಪ್ಪಿನಂಗಡಿ ಗ್ರಾ.ಪಂ. ಸ್ಪಂದಿಸಿದೆ. ಗ್ರಾಮ ಪಂಚಾಯತ್ ಆಡಳಿತದ ಜನಪ್ರತಿನಿಧಿಗಳು, ಅಧಿಕಾರಿಗಳು, ಹಾಗೂ ಸಿಬ್ಬಂದಿ ವರ್ಗ ಕಾರ್ಯಾಚರಣೆ ನಡೆಸಿ, ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಕಂಡಕಂಡಲ್ಲಿ ಹಣ್ಣು ಮಾರಾಟದ ವಾಹನಗಳನ್ನು, ಮೀನು ಮಾರಾಟದ ವಾಹನಗಳನ್ನು ನಿಲ್ಲಿಸಿ ವ್ಯಾಪಾರ ಮಾಡುತ್ತಿರುವ ಅನಧಿಕೃತ ವ್ಯಾಪಾರಿಗಳ ವರ್ತನೆಯಿಂದ ಮೊದಲೇ ಪಾರ್ಕಿಂಗ್ ಸಮಸ್ಯೆಯಿಂದ ನರಳುತ್ತಿರುವ ಉಪ್ಪಿನಂಗಡಿಯಲ್ಲಿ ಮತ್ತಷ್ಟು ಸಮಸ್ಯೆ ವೃದ್ದಿಸಲು ಕಾರಣವಾಗಿತ್ತು. ಇ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದರೂ ಪಂಚಾಯತ್ ಆಡಳಿತ ಪೊಲೀಸ್ ಇಲಾಖೆಯನ್ನು , ಪೊಲೀಸ್ ಇಲಾಖೆ ಪಂಚಾಯತ್ ಆಡಳಿತವನ್ನು ಹೊಣೆಯಾಗಿಸಿ ಸುಮ್ಮನಾಗುತ್ತಿತ್ತು.
ಈ ಮಧ್ಯೆ ಮಂಗಳವಾರ ನಡೆದ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅನಧಿಕೃತ ಅಂಗಡಿಗಳ ಬಗ್ಗೆ ಬಿರುಸಿನ ಚರ್ಚೆ ನಡೆದು, ಸಭೆ ಮುಗಿದ ಕೂಡಲೇ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಪಿಡಿಒ ಲಾರೆನ್ಸ್ ವಿಲ್ಫ್ರೆಡ್ ರೋಡ್ರಿಗಸ್, ಮಾಜಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್, ಪಂಚಾಯತ್ ಸದಸ್ಯರಾದ ಯು.ಟಿ. ತೌಷಿಫ್ , ಸಣ್ಣಣ್ಣ, ಧನಂಜಯ, ಲೋಕೇಶ್ ಬೆತ್ತೋಡಿ, ವಿನಾಯಕ ಪೈ, ಮೈಸಿದ್ದಿ, ಇಬ್ರಾಹೀಂ, ರಶೀದ್ ಮತ್ತಿತರರು ಪೊಲೀಸ್ ರಕ್ಷಣೆ ಪಡೆದು ಅನಧಿಕೃತ ಅಂಗಡಿಗಳ ತೆರವು ಮತ್ತು ಮುಟ್ಟುಗೋಲು ಕಾರ್ಯಾಚರಣೆ ಕೈಗೊಂಡರು.
ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಇದೇ ಮೊದಲಲ್ಲ. ಹಲವು ಬಾರಿ ನಡೆದಿದೆ. ಗ್ರಾ.ಪಂ.ನವರು ತೆರವು ಮಾಡಿದ ಎರಡು ದಿನಗಳ ಬಳಿಕ ಮತ್ತದೇ ಸ್ಥಳದಲ್ಲಿ ಅನಧಿಕೃತ ವ್ಯಾಪಾರ ಎಗ್ಗಿಲ್ಲದೆ ನಡೆಯುತ್ತಿದೆ.