ಸಹಕಾರಿ ಸಂಘಗಳು, ನವೋದಯ ಸ್ವಸಹಾಯ ಸಂಘಗಳ ಸದಸ್ಯರ ಜಿಲ್ಲಾ ಕ್ರೀಡಾಕೂಟ

0

ತಾಯಂದಿರನ್ನು ಆರ್ಥಿಕವಾಗಿ ಸದೃಢಗೊಳಿಸಿದ ರಾಜೇಂದ್ರ ಕುಮಾರ್ ಈ ಭಾಗದ ರತ್ನ-ಸಚಿವ ತಿಮ್ಮಾಪುರ
ಹಳ್ಳಿಯಲ್ಲೂ ಒಲಂಪಿಕ್ ಮಾದರಿಯ ಕ್ರೀಡಾಕೂಟ ಮಾಡಿದ ಕೀರ್ತಿ-ನಳಿನ್
ಸಹಕಾರಿ ಕ್ಷೇತ್ರದ ದಿಗ್ಗಜ ರಾಜೇಂದ್ರ ಕುಮಾರ್-ಅಶೋಕ್ ಕುಮಾರ್ ರೈ
ಡಾ|ಎಮ್.ಎನ್.ಆರ್ ಸ್ವಾತಂತ್ರ್ಯ ನಂತರದ ಸಹಕಾರಿ ರಂಗದ ಪಿತಾಮಹ-ಮಠಂದೂರು
ರಾಜಕೀಯವಿಲ್ಲದೆ ಕೆಲಸ ಮಾಡಿದ್ದರಿಂದ ಸಹಕಾರಿ ಕ್ಷೇತ್ರ ಬೆಳೆದಿದೆ-ಡಾ|ಎಮ್.ಎನ್.ಆರ್
ರಾಜೇಂದ್ರ ಕುಮಾರ್ ಅವರಿಂದಾಗಿ ಸಹಕಾರಿ ಸಂಸ್ಥೆಗಳಿಗೆ ಸ್ವಂತ ಕಟ್ಟಡ-ಬಾಲ್ಯೊಟ್ಟು

ಪುತ್ತೂರು: ನಮ್ಮ ಬದುಕೇ ಇಷ್ಟು ಎಂದುಕೊಂಡಿದ್ದ ತಾಯಂದಿರನ್ನು ಆರ್ಥಿಕವಾಗಿಯೂ ಸದೃಢಗೊಳಿಸಿ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿ ಕೊಟ್ಟಿರುವ ಮಹಾಶಕ್ತಿ ಡಾ|ಎಮ್.ಎನ್.ರಾಜೇಂದ್ರ ಕುಮಾರ್ ಅವರು ಎಲ್ಲಾ ಪಕ್ಷಗಳಿಗೂ ಬೇಕಾದವರು ಹಾಗಾಗಿ ಅವರು ಈ ಭಾಗದ ರತ್ನ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ನ.30ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ದ.ಕ. ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬೆಲೂನ್‌ಗಳನ್ನು ಬಾನೆತ್ತರಕ್ಕೆ ಹಾರಿಸಿದ ಬಳಿಕ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ನಾನು ಕಂಡ ಅಪರೂಪದ ಕಾರ್ಯಕ್ರಮವಿದು,ರಾಜೇಂದ್ರ ಕುಮಾರ್ ಅವರು ಸಹಕಾರಿ ರಂಗದಲ್ಲಿ ಶಾಸಕರಾಗಿಲ್ಲ.ಆದರೆ ಎಲ್ಲಾ ಶಾಸಕರು, ಸಂಸದರು ನಿಮ್ಮ ಬಳಿ ಬಂದು ಕೂತ್ಕೊಳ್ಳುವಂತೆ ನೀವು ಮಾಡಿಕೊಂಡಿದ್ದೀರಿ.ಎಲ್ಲಾ ಪಕ್ಷಗಳು ರಾಜೇಂದ್ರ ಕುಮಾರ್ ಬೇಕಪ್ಪ ಎಂದು ಹೇಳುತ್ತಾರೆ.ನಾವೂ ಹೇಳುತ್ತೇವೆ, ನೀವು ನಮ್ಮ ಪಕ್ಷಕ್ಕೆ ಬನ್ನಿ ಎಂದ ಸಚಿವರು,ಈ ಭಾಗದ ಶಾಸಕ ಅಶೋಕ್ ಕುಮಾರ್ ರೈ ಅವರು ಮೊದಲೇ ಅವರನ್ನು ಬರಲು ಹೇಳುವ ಮೂಲಕ ಉತ್ತಮ ಪ್ರೀತಿಯನ್ನು ತೋರಿಸಿದ್ದಾರೆ ಎಂದರು.ನಮ್ಮ ಕಡೆ ರಾಜೇಂದ್ರ ಕುಮಾರರಿಂದಾಗಿ ಎಷ್ಟೋ ಸಕ್ಕರೆ ಕಾರ್ಖಾನೆಗಳು ಬದುಕಿದ್ದಾವೆ.ಅಲ್ಲಿ ಮನೆ ಮನೆಯಲ್ಲೂ ಇವರ ಫೋಟೋ ಇಟ್ಟುಕೊಂಡಿದ್ದಾರೆ.ನಾವು ಜನಪ್ರತಿನಿಧಿಗಳಾಗಿ ಕೆಲಸ ಮಾಡುತ್ತೇವೆ.5 ವರ್ಷಕ್ಕೊಮ್ಮೆ ನಮಗೆ ಪರೀಕ್ಷೆ ನಡೆಯುತ್ತದೆ.ಆದರೆ ರಾಜೇಂದ್ರ ಕುಮಾರ್ ಅವರಿಗೆ ಪಕ್ಷ ಇಲ್ಲ.ರಾಜಕಾರಣವೂ ಇಲ್ಲ.ಆದರೆ ಇಷ್ಟೆಲ್ಲ ಅದ್ಭುತ ಕೆಲಸ ಮಾಡಿದ ಅವರಿಗೆ ನಾನೇ ಸೆಲ್ಯೂಟ್ ಹೊಡೆಯುತ್ತೇನೆ ಎಂದ ಸಚಿವರು, ರಾಜೇಂದ್ರ ಕುಮಾರ್ ಅಧ್ಯಕ್ಷರಾಗುವ ಮೊದಲು ಡಿಸಿಸಿ ಬ್ಯಾಂಕ್‌ನಲ್ಲಿ ರೂ.64 ಕೋಟಿ ಡೆಪೋಸಿಟ್ ಇತ್ತು.ಆಗ ರೂ.46 ಕೋಟಿ ಸಾಲ, ಲಾಭ ಆಗಿದ್ದು ರೂ.42 ಲಕ್ಷ,ಆಗ 25 ಶಾಖೆಗಳಿತ್ತು. ಇವತ್ತು 111 ಶಾಖೆಗಳನ್ನು ತೆರೆದು ರೂ.6,371 ಕೋಟಿ ಡೆಪೋಸಿಟ್ ಸಂಗ್ರಹಿಸಿ ಕೋಟಿಗಟ್ಟಲೆ ಸಾಲವನ್ನು ನೀಡಿ.ರೂ.61.79 ಕೋಟಿ ಲಾಭ ಗಳಿಸಿರುವುದು ಸಹಕಾರಿ ರಂಗದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.ಇದು ವಿಶ್ವವೇ ನಿಮ್ಮನ್ನು ನೋಡಿ ಅಚ್ಚರಿ ಪಡುವ ಕೆಲಸ ಆಗಲಿದೆ ಎಂದು ಹೇಳಿ ಕ್ರೀಡಾಕೂಟಕ್ಕೆ ಶುಭಹಾರೈಸಿದರು.


ಹಳ್ಳಿಯಲ್ಲೂ ಒಲಂಪಿಕ್ ಮಾದರಿಯ ಕ್ರೀಡಾ ಕೂಟ ಮಾಡಿದ ಕೀರ್ತಿ ರಾಜೇಂದ್ರ ಕುಮಾರ್ ಅವರದ್ದು:
ಕ್ರೀಡಾಕೂಟದ ಧ್ವಜಾರೋಹಣ ಮಾಡಿದ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಮೊಳಹಳ್ಳಿ ಶಿವರಾಯರ ಬಳಿಕ ಅದ್ಭುತವಾದ ಸಹಕಾರಿ ಜಾಗೃತಿಯನ್ನು ಡಾ|ಎಮ್.ಎನ್.ರಾಜೇಂದ್ರ ಕುಮಾರ್ ಅವರು ಮಾಡಿದ್ದಾರೆ.ದೇಶದ ಇತಿಹಾಸದಲ್ಲಿ ಗ್ರಾಮೀಣ ಪ್ರದೇಶದ ಸಾಮಾನ್ಯ ಮಹಿಳೆಯರಿಗೂ ಕ್ರೀಡಾಕೂಟ ಮಾಡಬಹುದು ಎಂಬ ಐತಿಹಾಸಿಕ ಕೆಲಸವನ್ನು ರಾಜೇಂದ್ರ ಕುಮಾರ್ ಮಾಡಿ ತೋರಿಸಿದ್ದಾರೆ.ಅದರ ಜೊತೆಗೆ ಒಲಂಪಿಕ್ ಮಾದರಿಯ ಕ್ರೀಡಾಕೂಟ ಹಳ್ಳಿಯಲ್ಲೂ ಮಾಡಬಹುದು ಎಂಬುದಕ್ಕೆ ಇವತ್ತಿನ ಕ್ರೀಡಾಕೂಟ ವಿಶೇಷ ದರ್ಶನವನ್ನು ಕೊಟ್ಟಿದೆ. ಕ್ರೀಡಾಕೂಟದ ನೇತೃತ್ವ ವಹಿಸಿದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಜಿಲ್ಲೆಯಲ್ಲಿ ಮೊಳಹಳ್ಳಿ ಶಿವರಾಯರ ಮೂಲಕ ಸಹಕಾರಿ ಸಂಘ ಆರಂಭಗೊಂಡಿತ್ತು.ಸಹಕಾರಿ ರಂಗವನ್ನು ಹಳ್ಳಿ ಹಳ್ಳಿಯಲ್ಲಿ ಸಾಮಾನ್ಯ ಮಹಿಳೆಯರ ಮನೆಗೂ ಕೊಂಡೊಯ್ದ ಕೀರ್ತಿ ರಾಜೇಂದ್ರ ಕುಮಾರ್‌ರವರಿಗೆ ಸಲ್ಲುತ್ತದೆ.ಆರ್ಥಿಕ ವ್ಯವಹಾರದ ಜಾಗೃತಿಯನ್ನು ಮೂಡಿಸುವ ಕೆಸಲವನ್ನು ಮೊದಲ ಬಾರಿಗೆ ಮಾಡಿ ನವೋದಯ ಸಂಘಗಳ ಮೂಲಕ ಸ್ವಾಭಿಮಾನದ ಬದುಕನ್ನು ಕಲಿಸಿ ಇವತ್ತು ಅವರಲ್ಲಿರುವ ಪ್ರತಿಭೆಯನ್ನು ಅರಳಿಸಲು ಕ್ರೀಡಾಕೂಟದ ಮೂಲಕ ಕ್ರೀಡಾ ಮನೋಭಾವ ಬೆಳೆಸುವ ಕೆಲಸ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಾಡಿದೆ.15 ಸಾವಿರ ಮಂದಿ ಭಾಗವಹಿಸಿ ಇಷ್ಟು ದೊಡ್ಡ ಕ್ರೀಡಾಕೂಟ ಪುತ್ತೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಆಗುತ್ತಿದ್ದು, ಇದೊಂದು ಸ್ವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ ಎಂದು ನಳಿನ್ ಹೇಳಿದರು.


ಸಹಕಾರಿ ಕ್ಷೇತ್ರದ ದಿಗ್ಗಜ ರಾಜೇಂದ್ರ ಕುಮಾರ್:
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಡಾ|ಎಮ್.ಎನ್.ರಾಜೇಂದ್ರ ಕುಮಾರ್ ಅವರು ಎಲ್ಲಾ ಕ್ಷೇತ್ರವನ್ನು ಮುಟ್ಟಿದವರು.ಇವತ್ತು ಎಸ್‌ಸಿಡಿಸಿಸಿ ಬ್ಯಾಂಕ್ ಮೂಲಕ ಗ್ರಾಮೀಣ ಭಾಗದ ಎಲ್ಲಾ ಮಹಿಳೆಯರಿಗೆ ಉದ್ಯೋಗ ಕೊಡಿಸುವ ಮೂಲಕ ಸುಮಾರು 113 ಶಾಖೆಗಳಲ್ಲಿಯೂ ಎಟಿಎಮ್‌ಗಳನ್ನು ತೆರದು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮತ್ತು ರೈತರಿಗೆ ವ್ಯವಹಾರ ಮಾಡಲು ಅವಕಾಶ ನೀಡಿದ ವ್ಯಕ್ತಿ ರಾಜೇಂದ್ರ ಕುಮಾರ್.ಜನರಿಗೆ ಬ್ಯಾಂಕಿಂಗ್ ಮಾತ್ರವಲ್ಲ ಬ್ಯಾಂಕಿಂಗ್ ಜೊತೆಗೆ ಕ್ರೀಡೆಯನ್ನು ಕೊಡುವ ಕೆಲಸವನ್ನೂ ಅವರು ಮಾಡಿದ್ದಾರೆ.ಇಷ್ಟು ಮಾತ್ರವಲ್ಲದೆ ನಾವು ಬೆಂಗಳೂರಿನಲ್ಲಿ ಕಂಬಳ ಮಾಡಬೇಕಾದರೆ ಮೊದಲು ನಮಗೆ ರೂ.10 ಲಕ್ಷ ನೀಡಿ ಸಹಾಯ ಮಾಡಿದ್ದಾರೆ.ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ದೇವಸ್ಥಾನ, ಮಂದಿರ, ಕ್ರೀಡೆಗಳನ್ನು ಮಾಡಬೇಕಾದರೆ ಹಿಂದೆ ನಿಂತು ಸಹಕಾರ ನೀಡಿದ್ದಾರೆ.ಎಲ್ಲಾ ಕ್ಷೇತ್ರದವರಿಗೂ ಸಾಲ ನೀಡಿ ಎಷ್ಟು ಆತ್ಮೀಯರಾದರೂ ಸಾಲ ವಸೂಲಾತಿಯ ವಿಚಾರದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ರಾಜಿ ಮಾಡಿಕೊಂಡಿಲ್ಲ.ಅವರು ಬ್ಯಾಂಕಿನ ಹಿತದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದ್ದರಿಂದ ಬ್ಯಾಂಕ್ ಇವತ್ತು ನಂ.1 ಆಗಿದೆ. ಹಾಗಾಗಿ ಅವರು ಈ ಭಾಗದ ಸಹಕಾರಿ ಕ್ಷೇತ್ರದ ದಿಗ್ಗಜರಾಗಿದ್ದಾರೆ ಎಂದರು.


ಡಾ|ಎಮ್.ಎನ್.ರಾಜೇಂದ್ರ ಕುಮಾರ್ ಸ್ವಾತಂತ್ರ್ಯ ನಂತರದ ಸಹಕಾರಿ ರಂಗದ ಪಿತಾಮಹ:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, 1947ರಲ್ಲಿ ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮಹಾತ್ಮಗಾಂಧಿಜಿ, ಲಾಲ್ ಬಹದ್ದೂರ್ ಶಾಸೀ, ಜವಾಹರಲಾಲ್ ನೆಹರು ಅವರು ದೇಶದ ಜನರು ಆರ್ಥಿಕ ಸ್ವಾವಲಂಬನೆಯನ್ನು ಕಾಣುವ ದೃಷ್ಟಿಯಿಂದ ಸಹಕಾರಿ ವಿಚಾರವನ್ನು ಮುಂದಿಟ್ಟಿದ್ದರು.ಗ್ರಾಮದಲ್ಲೊಂದು ಸಹಕಾರಿ ಸಂಘ, ಪಂಚಾಯತ್, ಶಾಲೆ ಇದ್ರೆ ಖಂಡಿತಾ ದೇಶದಲ್ಲಿ ಬದಲಾವಣೆ ತರಬಹುದು ಎಂದು ಅವರು ಕಂಡಿದ್ದ ಕನಸು ಇವತ್ತು ಡಾ| ಎಮ್.ಎನ್.ರಾಜೇಂದ್ರ ಕುಮಾರ್ ಅವರಿಂದ ಸಾಕಾರಗೊಂಡಿದೆ.ಇವತ್ತು ನವಭಾರತವನ್ನು ಪುತ್ತೂರಿನ ಕ್ರೀಡಾಂಗಣದಲ್ಲಿ ನೋಡುವ ಕೆಲಸ ಆಗಿದೆ ಎಂದರು.1904ರಲ್ಲಿ ದೇಶದ ಪ್ರಥಮ ಸಹಕಾರಿ ಸಂಘದ ಕಾಯ್ದೆ ಆರಂಭಗೊಂಡು ಪ್ರಥಮ ಸಹಕಾರಿ ಸಂಘ ರಾಜ್ಯದ ಗದಗ್ ಜಿಲ್ಲೆಯಲ್ಲಿ ಆರಂಭಗೊಳ್ಳುತ್ತದೆ.1907ರಲ್ಲಿ ಪುತ್ತೂರು ತಾಲೂಕಿನಲ್ಲಿ ಮೊಳಹಳ್ಳಿ ಶಿವರಾಯರ ಮೂಲಕ ಆರಂಭಗೊಳ್ಳುತ್ತದೆ.ಸ್ವಾತಂತ್ರ್ಯ ಪೂರ್ವದಲ್ಲಿ ಮೊಳಹಳ್ಳಿ ಶಿವರಾಯರು ಸಹಕಾರಿ ಪಿತಾಮಹ ಎಂದೆನಿಸಿದ್ದರು.ಸ್ವಾತಂತ್ರ್ಯದ ನಂತರ ಸಹಕಾರಿ ರಂಗದ ಪಿತಾಮಹ ಡಾ| ಎಮ್.ಎನ್.ರಾಜೇಂದ್ರ ಕುಮಾರ್ ಆಗಿದ್ದಾರೆ ಎಂದರು.


ರಾಜಕೀಯವಿಲ್ಲದೆ ಕೆಲಸ ಮಾಡಿದ್ದರಿಂದ ಸಹಕಾರಿ ಕ್ಷೇತ್ರ ಬೆಳೆದಿದೆ:
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳಿಯ ಅಧ್ಯಕ್ಷ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮೆನೇಜಿಂಗ್ ಟ್ರಸ್ಟಿಯೂ ಆಗಿರುವ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರು ಕ್ರೀಡಾಕೂಟದ ಆರಂಭದಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ಬಳಿಕ ಅವರು ಮಾತನಾಡಿ, ಸಹಕಾರಿ ಕೆಲಸ ಮಾಡಲು ನಾನೊಬ್ಬನೇ ಕಾರಣನಲ್ಲ.ಎಲ್ಲರ ಸಹಕಾರದಿಂದ ಮಾತ್ರ ಸಾಧ್ಯವಾಗಿದೆ.ನಾವೆಲ್ಲ ಒಮ್ಮತದಿಂದ ಯಾವುದೇ ರಾಜಕೀಯವಿಲ್ಲದೆ ಕೆಲಸ ಮಾಡಿದ್ದರಿಂದ ಈ ಕ್ಷೇತ್ರ ಬೆಳೆಯಲು ಸಾಧ್ಯವಾಗಿದೆ.ಮಹಿಳೆಯರನ್ನು ತಾಯಂದಿರೇ ಎಂದು ಎಲ್ಲರೂ ಹೇಳುತ್ತಾರೆ ಹೊರತು ಅವರಿಗೆ ಏನು ಬೇಕೆಂದು ಯಾರೂ ಕೇಳುವುದಿಲ್ಲ.ಅವರು ಸ್ವಾವಲಂಬಿಗಳಾಗಿ ಬದುಕಬೇಕು. ಅವರೂ ಪುರುಷರಂತೆ ಸಮಾನತೆಯನ್ನು ಕಾಣಬೇಕೆಂಬ ನಿಟ್ಟಿನಲ್ಲಿ 24 ವರ್ಷಗಳ ಹಿಂದೆ ನವೋದಯ ಗ್ರಾಮೀಣ ಚಾರಿಟೇಬಲ್ ಟ್ರಸ್ಟ್ ಆರಂಭಿಸಿದ್ದೆವು.ಇವತ್ತು ಎಲ್ಲಾ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು., ಭಾಷಣದಿಂದ ಏನನ್ನೂ ಸಾಧನೆ ಮಾಡಲು ಸಾಧ್ಯವಿಲ್ಲ.ಕೆಲಸ ಮಾಡಿದಾಗ ಜನರು ಗುರುತಿಸುತ್ತಾರೆ. ಇಲ್ಲಿ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಮಾಡಿದ ನನ್ನ ಸ್ನೇಹಿತ ಶಶಿಕುಮಾರ್ ರೈ ಅವರಿಗೆ ಮೊದಲನೆಯದಾಗಿ ಅಭಿನಂದನೆ ಸಲ್ಲಿಸುತ್ತೇನೆ, ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಾ|ಎಂ.ಎನ್.ಆರ್.ಹೇಳಿದರು.


ಡಾ|ಎಮ್.ಎನ್.ರಾಜೇಂದ್ರ ಕುಮಾರ್ ಅವರಿಂದಾಗಿ ಸಹಕಾರಿ ಸಂಸ್ಥೆಗಳಿಗೆ ಸ್ವಂತ ಕಟ್ಟಡ:
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.2019ರಲ್ಲಿ ಕೇಂದ್ರ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಅಂಗವಾಗಿ ಕ್ರೀಡಾಕೂಟವನ್ನು ಬಹಳ ಅದ್ದೂರಿಯಾಗಿ ಮಾಡಿದ್ದೆವು.ಈ ಬಾರಿ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಹಕಾರಿಗಳು ಸೇರಿಕೊಂಡು ಸುಮಾರು 15ಸಾವಿರ ಮಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಿಬ್ಬಂದಿ ವರ್ಗದವರು, ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿತ ಮತ್ತು ಸಿಬ್ಬಂದಿ ವರ್ಗದವರು, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರು ಮತ್ತು ಕ್ರೆಡಿಟ್ ಕೋ ಓಪರೇಟಿವ್,ಇನ್ನಿತರ ಸಂಘ ಸಂಸ್ಥೆಗಳಿಂದ ಅಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.ಇವೆಲ್ಲ ಡಾ|ಎಮ್.ಎನ್.ರಾಜೇಂದ್ರ ಕುಮಾರ್ ಅವರ ಸಾಧನೆಯಾಗಿದೆ ಎಂದರು.ಈ ಹಿಂದೆ 270 ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳಿಗೆ ಉಭಯ ಜಿಲ್ಲೆಯಲ್ಲಿ ಯಾವುದೇ ಒಂದು ಕಟ್ಟಡ, ಸ್ವಂತ ನಿವೇಶನ ಇಲ್ಲದಾಗ ರಾಜೇಂದ್ರ ಕುಮಾರ್ ಅವರ ಸಹಕಾರದಿಂದ ಎಲ್ಲಾ ಕೃಷಿ ಪತ್ತಿನ ಸಹಕಾರಿ ಸಂಘಗಳು ತಮ್ಮದೇ ಆದ ಸ್ವಂತ ಜಾಗವನ್ನು ಹೊಂದಿ ಎಲ್ಲಾ ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುವ ಸಂಸ್ಥೆಗಳಾಗಿ ಬೆಳೆಯಲು ಸಾಧ್ಯವಾಗಿದೆ.ಇವತ್ತು ಮಹಿಳೆಯರು ಸ್ವಾವಲಂಬನೆಯಿಂದ ಜೀವನ ನಡೆಸಲು ಸಹಕಾರಿ ಕ್ಷೇತ್ರ ಪೂರಕ ಕೆಲಸ ಮಾಡಿದೆ ಎಂದು ಬಾಲ್ಯೊಟ್ಟು ಹೇಳಿದರು.


ನಾಡಗೀತೆಯ ಮೂಲಕ ಕಾರ್ಯಕ್ರಮ ಆರಂಭಗೊಂಡಿತು.ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು,ಎಸ್.ಬಿ.ಜಯರಾಮ ರೈ ಬಳಜ್ಜ,ಭಾಸ್ಕರ್ ಕೋಟ್ಯಾನ್ ಅತಿಥಿಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವಿಸಿದರು. ಸಚಿವರ ಆಪ್ತ ಸಹಾಯಕ ಸಜನ್, ಮಾಜಿ ರಾಜ್ಯ ಸಭಾ ಸದಸ್ಯ ಇಬ್ರಾಹಿಂ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಸಹಾಯಕ ಕಮಿಷನರ್ ಗಿರೀಶ್‌ನಂದನ್, ತಹಶೀಲ್ದಾರ್ ಶಿವಶಂಕರ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ ಅವರು ವಂದಿಸಿದರು.ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಕ್ರೀಡಾಕೂಟ ನಡೆಯಿತು.


ಅಕರ್ಷಕ ಪಥಸಂಚಲನ:
ಕ್ರೀಡಾಕೂಟ ಆರಂಭದ ಮೊದಲು ಆಕರ್ಷಕ ಪಥ ಸಂಚಲನ ನಡೆಯಿತು.ಸೈಂಟ್ ಮದರ್ ಥೆರೇಸ ಬ್ಯಾಂಡ್ ಸೆಟ್ ತಂಡ ಪಥಸಂಚಲನದಲ್ಲಿ ಮುಂದೆ ಸಾಗುತ್ತಿದ್ದಂತೆ ಅವರ ಹಿಂದೆ ಕೊಂಬು ವಾದನ, ಇವೆರಡನ್ನು ಹಿಂಬಾಲಿಸಿ ಕಲಶ ಹೊತ್ತ ಸ್ವಸಹಾಯ ಸಂಘದ ಸದಸ್ಯರು, ಕೇಸರಿ,ಬಿಳಿ, ಹಸುರು ಬಣ್ಣದ ಧ್ವಜ ಹಿಡಿದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ೮೦ಕ್ಕೂ ಅಽಕ ವಿದ್ಯಾರ್ಥಿಗಳು,ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಬ್ಯಾಂಡ್‌ಸೆಟ್,ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ಸಹಕಾರಿಗಳು, ವಿವಿಧ ಸ್ವಸಹಾಯ ಸಂಘದ ಸದಸ್ಯರುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.ಪಥಸಂಚಲನದಲ್ಲಿ ವೇದಿಕೆಯ ಗಣ್ಯರಿಗೆ ಗೌರವ ವಂದನೆ ಸಲ್ಲಿಸಲಾಯಿತು.

ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಗನ್ನಾಥ ರೈ ಅವರ ನೇತೃತ್ವದಲ್ಲಿ ಕ್ರೀಡಾಪಟುಗಳು ಅರ್ಚಕರಿಂದ ಬೆಳಗಿಸಿದ ಕ್ರೀಡಾ ಜ್ಯೋತಿಯನ್ನು ಕೊಂಬೆಟ್ಟು ತಾಲೂಕು ಕ್ರೀಡಾಂಗಣಕ್ಕೆ ತಂದು ವೇದಿಕೆಯ ಗಣ್ಯರ ಮುಂದೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಹಸ್ತಾಂತರಿಸಲಾಯಿತು.ಅವರ ಸೂಚನೆಯಂತೆ ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಆವರಣದ ಬಳಿ ಕ್ರೀಡಾ ಜ್ಯೋತಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.ಅಲ್ಲಿಗೆ ಕ್ರೀಡಾ ಜ್ಯೋತಿಯನ್ನು ವೇದಿಕೆಯ ಬಲಭಾಗದಲ್ಲಿರುವ ದೊಂದಿಗೆ ಜ್ಯೋತಿ ಬೆಳಗಿಸಿ ಅಲ್ಲಿಂದ ಅದನ್ನು ರೋಪ್‌ವೇ ಮೂಲಕ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಆವರಣದ ತನಕ ಎಳೆದು ಬಾನೆತ್ತರದಲ್ಲೇ ಕ್ರೀಡಾ ಜ್ಯೋತಿ ಬೆಳಗಿಸಲಾಯಿತು.ಇದೇ ಸಂದರ್ಭ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಕ್ರೀಡಾ ಪ್ರತಿಜ್ಞೆ ಮಾಡಿದರು.ಕ್ರೀಡಾ ಜ್ಯೋತಿಯ ವ್ಯವಸ್ಥೆಯನ್ನು ಮಾಡಿದ ಅಂತರ್ರಾಷ್ಟ್ರೀಯ ಕ್ರೀಡಾಪಟು, ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿ ಕಾವು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಅವರನ್ನು ಗೌರವಿಸಲಾಯಿತು.

ಸಚಿವರು ಹೇಳಿದ್ದು…
ಎಲ್ಲಾ ಶಾಸಕರು, ಸಂಸದರು ನಿಮ್ಮ ಬಳಿ ಬಂದು ಕೂತುಕೊಳ್ಳುವಂತೆ ನೀವು ಮಾಡಿಕೊಂಡಿದ್ದೀರಿ.ಎಲ್ಲಾ ಪಕ್ಷಗಳು ರಾಜೇಂದ್ರ ಕುಮಾರ್ ಬೇಕಪ್ಪ ಎಂದು ಹೇಳುತ್ತಾರೆ.ನಾವೂ ಹೇಳುತ್ತೇವೆ ನಮ್ಮ ಪಕ್ಷಕ್ಕೆ ಬನ್ನಿ.ವೀರಪ್ಪ ಮೊಯಿಲಿ,ಆಸ್ಕರ್ ಸಹಿತ ಎಲ್ಲಾ ರಂಗದಲ್ಲಿ ಇದ್ದವರು, ನೀವು ನಮ್ಮ ಜೊತೆ ಬಂದರೆ ನಮಗೆ ಇನ್ನೂ ಶಕ್ತಿ ಬರುತ್ತದೆ.ನಾವು ಆದರ ಪೂರ್ವಕ ಸ್ವಾಗತ ಮಾಡುತ್ತೇವೆ.ಬನ್ನಿ ನಮ್ಮ ಜೊತೆ..ನಾವಿದ್ದೇವೆ ನಿಮ್ಮ ಜೊತೆ’ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಮ್ಮ ಭಾಷಣದಲ್ಲಿ ಹೇಳಿದರು.
ಶಾಸಕ ಅಶೋಕ್ ಕುಮಾರ್ ರೈ ಹೀಗೆಂದರು… ಸಚಿವರು, ನಮ್ಮ ಪಕ್ಷಕ್ಕೆ ಬನ್ನಿ ಎಂದು ಹೇಳಿದ್ದಾರೆ.ಆದರೆ ರಾಜೇಂದ್ರ ಕುಮಾರ್ ನಮ್ಮ ಪಕ್ಷದಲ್ಲಿ ಭಾರೀ ವರ್ಷಗಳಿಂದ ಇದ್ದವರು.ಬೇರೆ ಪಕ್ಷದಲ್ಲಿ ಇಲ್ಲ.ನಮ್ಮ ಪಕ್ಷದಲ್ಲೇ ಗುರುತಿಸಿಕೊಂಡವರು.ಅವರು ಕೆಲಸ ಮಾಡುವಲ್ಲಿ ಅದೇ ರೀತಿಯ ರಾಜಕೀಯ ಮಾಡುವ ಅವಶ್ಯಕತೆ ಇದೆ. ಬೇರೆ ಸಮಯದಲ್ಲಿ ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣುತ್ತಾರೆ. ಅವರು ಮನಸ್ಸು ಮಾಡುತ್ತಿದ್ದರೆ ಯಾವಾಗಲೋ ಶಾಸಕರಾಗುತ್ತಿದ್ದರು.ಆದರೆ ಅವರು ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ಪೂರ್ಣ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಮಾಜಿ ಶಾಸಕ ಮಠಂದೂರು ಅವರಾಡಿದ್ದು ಹೀಗೆ…
75ರ ವಯಸ್ಸಿನಲ್ಲೂ ಸಾಧಕರಾಗಬಹುದು ಎಂಬುದಕ್ಕೆ ರಾಜೇಂದ್ರ ಕುಮಾರ್ ವ್ಯಕ್ತಿತ್ವ ನಮಗೆ ಮಾದರಿ.ಅವರ ಸಾಧನೆಗೆ ಜೀವನ ಪರ್ಯಂತ ಪ್ರಶಸ್ತಿಗಳು ಬರುತ್ತಾ ಇವೆ.ಅಂತಹ ಇನ್ನಷ್ಟು ಪ್ರಶಸ್ತಿ ಅವರಿಗೆ ಬರಬೇಕು.ದಕ್ಷಿಣ ಕನ್ನಡ ಜಿಲ್ಲೆಯ ಜನರು ನಿಮ್ಮೊಂದಿಗೆ ಇದ್ದಾರೆ.ನೀವು ಯಾವತ್ತೂ ಸಹಕಾರಿಯಾಗಿಯೇ ಇರಬೇಕು. ಮತ್ತೆ ನೀವು ರಾಜಕೀಯಕ್ಕೆ ಬಂದರೆ ಬಹಶಃ ಜನರು ನಿಮ್ಮನ್ನು ಈ ರೀತಿಯ ಪ್ರೀತಿ ವಿಶ್ವಾಸದಿಂದ ನೋಡಲು ಸಾಧ್ಯವಿಲ್ಲ.ಸಹಕಾರಿಗಳಾಗಿ ಇಡೀ ರಾಜ್ಯಕ್ಕೆ ಹಿರಿಯ ಸಹಕಾರಿಯಾಗಿ ಮುಂದುವರಿಯಿರಿ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.


ಕ್ರೀಡೆಯಲ್ಲಿ ರಾಜಕೀಯ ಬೇಡವೆಂದ ಡಾ|ಎಂ.ಎನ್.ಆರ್:
ವೇದಿಕೆಯಲ್ಲಿ ನನ್ನ ಎಡಗಡೆ ಸಂಜೀವ ಮಠಂದೂರು, ಬಲಗಡೆ ಅಶೋಕ್ ರೈ ಇದ್ದಾರೆ.ಎಲ್ಲರನ್ನು ಒಟ್ಟಿಗೆ ಕೊಂಡ್ಹೋಗಬೇಕಾದ ಕೆಲಸ ಮಾಡಬೇಕಾಗಿದೆ.ಹಾಗಾಗಿ ಎಲ್ಲರನ್ನೂ ಒಟ್ಟಿಗೆ ಕೊಂಡು ಹೋಗುತ್ತೇನೆ.ಅಶೋಕ್ ಕುಮಾರ್ ರೈ ಅವರಿಗೆ ಸ್ವಲ್ಪ ಜಾಸ್ತಿ ಬಲ ಬರುತ್ತದೆ.ಯಾಕೆಂದರೆ ಅವರು ಬಹಳ ಹಿಂದಿನಿಂದ ನನ್ನ ಆತ್ಮೀಯರು.ನನ್ನ ಉದ್ಯಮ ಕ್ಷೇತ್ರದಲ್ಲೂ ಸಹಕಾರ ನೀಡಿದವರು.ಹಾಗಾಗಿ ಎಲ್ಲರನ್ನು ಒಟ್ಟಿಗೆ ಕೊಂಡುಹೋಗುವ.ಕ್ರೀಡೆಯಲ್ಲಿ ರಾಜಕೀಯ ಬೇಡ.ಒಟ್ಟಾಗಿ ಹೋಗೋಣ ಎಂದು ಡಾ|ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಕ್ರೀಡಾಕೂಟ ಆರಂಭದಿಂದ ಮುಕ್ತಾಯದವರೆಗೂ ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್ ಮತ್ತು ಫೆಸ್ ಬುಕ್ ಪೇಜ್‌ನಲ್ಲಿ ನೇರ ಪ್ರಸಾರವಾಗಿದ್ದು ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here